ರಾಜ್ಯ ಸುದ್ದಿ
ಬಡವರ ಪಾಲಿಗೆ ಮರಣಶಾಸನ ಬರೆಯುತ್ತಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ.ಅನುಮತಿ ಪಡೆದಿಲ್ಲ ಎಂದು ಸೈಕಲ್ ಜಾಥಾ ಮಾಡಲಿಕ್ಕೆ ಪೊಲೀಸರ ಅಡ್ಡಿ.ಪೊಲೀಸರು ಮುಖ್ಯದ್ವಾರಗಳನ್ನು ಬಂದ್ ಮಾಡಿ, ಪ್ರತಿಭಟನಕಾರರ ಮನವೊಲಿಕೆಗೆ ಯತ್ನ.ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸಿಲಿಂಡರುಗಳ ಬೆಲೆ ಏರಿಕೆ ಮಾಡಿ ಬಡವರ ಪಾಲಿಗೆ ಮರಣಶಾಸನ ಬರೆಯುತ್ತಿರುವ ಕೇಂದ್ರ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವಂತಹ ನೈತಿಕ ಹಕ್ಕಿಲ್ಲ ಎಂದು ಮಾಜಿ ಶಾಸಕ ಮುನಿನರಸಿಂಹಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿಮಂದಿರದ ಆವರಣದಿಂದ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮೂರು ಬ್ಲಾಕ್ ಗಳ ವತಿಯಿಂದ ಆಯೋಜಿಸಿದ್ದ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಇಂದು ಹಮ್ಮಿಕೊಂಡಿರುವ ಸೈಕಲ್ ಜಾಥಾಕಾರ್ಯಕ್ರಮದ ಮೂಲಕ ಜನರನ್ನು ಜಾಗೃತಗೊಳಿಸುವುದರ ಜೊತೆಗೆ ಸರ್ಕಾರಗಳಿಗೆ ಎಚ್ಚರಿಕೆ ನೀಡುವ ಕಾರ್ಯಕ್ರಮ ಮಾಡಲಾಗುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ, ಬಂಡವಾಳಶಾಹಿಗಳ ಪರವಾಗಿ ರೈತ ವಿರೋಧಿ ಕಾಯ್ದೆಗಳನ್ನು ತಂದು ದೇಶದ ಅನ್ನದಾತರಿಗೆ ಮರಣ ಶಾಸನ ಬರೆದಿದೆ ಎಂದು ಕಿಡಿ ಕಾರಿದರು.
ಮುಖಂಡ ಎಸ್.ಆರ್.ರವಿಕುಮಾರ್ ಮಾತನಾಡಿ, ದೇಶದ ಇತಿಹಾಸದಲ್ಲಿ ಬಡವರು, ಅಲ್ಪಸಂಖ್ಯಾತರು, ಕಾರ್ಮಿಕರು, ಸೇರಿದಂತೆ ತಳವರ್ಗದ ಸಮುದಾಯಗಳ ಏಳಿಗೆಗಾಗಿ ಶ್ರಮಿಸುತ್ತಿರುವುದು ಕಾಂಗ್ರೆಸ್ ಪಕ್ಷವಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲೂ ಕೂಡಾ ಬಡವರ ಹೊಟ್ಟೆಗೆ ಅನ್ನಕೊಟ್ಟಿದ್ದು, ಕಾಂಗ್ರೆಸ್ ಹೊರತು ಬಿಜೆಪಿಯಲ್ಲ. ಜಿ.ಎಸ್.ಟಿ, ನೋಟು ಅಮಾನೀಕರಣ, ಸೇರಿದಂತೆ ಕೆಲವು ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದ ಬಿಜೆಪಿ ಸರ್ಕಾರಗಳು, ಈ ದೇಶಕ್ಕೆ ಮಾರಕವಾಗಿವೆ ಎಂದರು.
ಸೈಕಲ್ ಜಾಥಾ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಅನುಮತಿ ಪಡೆದಿಲ್ಲ ಎಂದು ಸೈಕಲ್ ಜಾಥಾ ಮಾಡಲಿಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಪ್ರವಾಸಿಮಂದಿರದ ಆವರಣದಿಂದ ಸೈಕಲ್ ಜಾಥಾ ಆರಂಭಗೊಳುತ್ತಿದ್ದಂತೆ ಪೊಲೀಸರು ಮುಖ್ಯದ್ವಾರಗಳನ್ನು ಬಂದ್ ಮಾಡಿದರು. ಈ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಗೇಟ್ ಗೆ ಬೀಗ ಹಾಕಿದರು. ಕಾಂಗ್ರೆಸ್ ಕಾರ್ಯಕರ್ತರು ಕಲ್ಲಿನಿಂದ ಬೀಗ ಹೊಡೆಯುವಂತಹ ಪ್ರಯತ್ನ ಮಾಡಿದರು.
ಗೇಟಿನ ಒಳಗೆ ಇದ್ದ ಪೊಲೀಸ್ ಸಿಬ್ಬಂದಿಯನ್ನು ಹೊರಗೆ ಕರೆದುಕೊಳ್ಳಲಿಕ್ಕಾಗಿ ಗೇಟು ತೆರೆಯುತ್ತಿದ್ದಂತೆ ಹೊರಗೆ ಬಂದ ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್ ಗಳನ್ನು ತಳ್ಳಿ ರ್ಯಾಲಿ ನಡೆಸಲು ಮುಂದಾಗಿದ್ದರು. ಈ ವೇಳೆ ಅವರನ್ನು ವಶಕ್ಕೆ ಪಡೆಯಲು ಬಸ್ಸುಗಳನ್ನು ಸಿದ್ದಪಡಿಸಿಕೊಂಡಿದ್ದರಾದರೂ, ಪ್ರತಿಭಟನಾಕಾರರು ಮತ್ತೊಂದು ಕಡೆಯಿಂದ ಹೊರಗೆ ಹೋಗಿ ಕಾಲ್ನಡಿಗೆಯಲ್ಲಿಯೇ ಮೆರವಣಿಗೆ ನಡೆಸುವ ಮೂಲಕ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಳೇ ಬಸ್ ನಿಲ್ದಾಣದಿಂದ ಮಿನಿವಿಧಾನಸೌಧದವರೆಗೂ ಜಾಥಾ ನಡೆಸಿದರು. ಮಿನಿವಿಧಾನಸೌಧದ ಬಳಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದ ನಂತರ ಪೊಲೀಸರು ಕಾಂಗ್ರೆಸ್ ಮುಖಂಡರನ್ನು ವಶಕ್ಕೆ ಪಡೆದುಕೊಂಡರು.
ಮಿನಿವಿಧಾನಸೌಧದ ಮುಂಭಾಗದಲ್ಲಿ ಮನವಿ ಪತ್ರ ಸಲ್ಲಿಸಿದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಸ್ಸಿಗೆ ಹತ್ತಿಸುತ್ತಿದ್ದಂತೆ ಕೆಲವರನ್ನು ಮಾತ್ರವೇ ಬಲವಂತವಾಗಿ ಪೊಲೀಸರು ಬಸ್ಸಿಗೆ ಹತ್ತಿಸಿದರು. ಉಳಿದ ಮುಖಂಡರು ತಾವೇ ಓಡಿಹೋಗಿ ಬಸ್ಸಿಗೆ ಹತ್ತಿಕೊಳ್ಳುತ್ತಿದ್ದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ, ಜಗನ್ನಾಥ್, ಚಿನ್ನಪ್ಪ, ಎಂ.ನಾರಾಯಣಸ್ವಾಮಿ, ಬಿ.ಚೇತನ್ ಗೌಡ, ಶಾಂತ್ ಕುಮಾರ್, ಅಕ್ಕಯಮ್ಮಮುನಿಯಪ್ಪ, ಕೆ.ಸಿ.ಮಂಜುನಾಥ್, ಬುಳ್ಳಹಳ್ಳಿ ರಾಜಪ್ಪ, ಎಸ್.ಪಿ.ಮುನಿರಾಜು, ಇದ್ದರು.ದೇವನಹಳ್ಳಿ ಪಟ್ಟಣದ ಪ್ರವಾಸಿಮಂದಿರದ ಗೇಟ್ ಗಳನ್ನು ಬಂದ್ ಮಾಡಿದ್ದ ಪೊಲೀಸರ ವಿರುದ್ಧ ಕಾಂಗ್ರೆಸ್ ಮುಖಂಡರು ಘೋಷಣೆಗಳು ಕೂಗಿದರು.
Be the first to comment