ರಾಜ್ಯ ಸುದ್ದಿ
ಶಿರಸಿ: ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ನೀಡಿದ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಅಲ್ಲದೇ ಮುಂದಿನ ದಿನದಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶವನ್ನು ಹಕ್ಕಿನಿಂದ ಕೇಳುತ್ತೇನೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಉತ್ತರಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಜುಲೈ 7 ರಂದು ಶಿರಸಿಗೆ ಭೇಟಿ ನೀಡಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಭೀಮಣ್ಣ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜುಲೈ 7 ರಂದು ಬೆಳಿಗ್ಗೆ 10.30ಕ್ಕೆ ಶಿರಸಿ ಮಾರಿಕಾಂಬೆಯ ದರ್ಶನ ಪಡೆದು ನಂತರ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿರುವ ಜನಜಾಗೃತಿ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೈಕಲ್ ಜಾಥಾ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಎಚ್ಚರಿಸಲಾಗುವುದು. ಮಾರಿಕಾಂಬಾ ದೇವಾಲಯದಿಂದ ಹೊರಡಲಿರುವ ಸೈಕಲ್ ಜಾಥಾ ಹುಬ್ಬಳ್ಳಿ ರಸ್ತೆ, ಶಿವಾಜಿಚೌಕ, ಸಿಪಿ ಬಝಾರ ಮೂಲಕ ಟಿ.ಎಸ್.ಎಸ್ ಕಲ್ಯಾಣ ಮಂಟಪದವರೆಗೆ ಸಂಚರಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಜಿಲ್ಲೆಯ ಉಸ್ತುವಾರಿಗಳಾದ ಬಿ.ಕೆ.ಹರಿಪ್ರಸಾದ, ಎಂಎಲ್ ಸಿ ಪ್ರಸನ್ನಕುಮಾರ, ಕೆಪಿಸಿಸಿ ಕಾರ್ಯದರ್ಶಿ ವಿ.ಎಸ್.ಆರಾಧ್ಯ, ಮಾಜಿ ಶಾಸಕರಾದ ಮಂಕಾಳು ವೈದ್ಯ, ಶಾರದಾ ಶೆಟ್ಟಿ, ಸತೀಶ ಸೈಲ್, ಪಕ್ಷದ ಮುಖಂಡರು, ಪದಾಧಿಕಾರಿಗಳು, ಜನಪ್ರತಿನಿಧಿಗಳ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧ್ಯಕ್ಷ ಬದಲಾವಣೆ ಕುರಿತು ಪಕ್ಷದ ತೀರ್ಮಾನಕ್ಕೆ ಬದ್ಧನಿದ್ದೇನೆ. ಎಲ್ಲರೂ ಸಹಕಾರ ನೀಡಿದ್ದರಿಂದಲೇ 12 ವರ್ಷ ಅಧ್ಯಕ್ಷನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತನಾದ ನಾನು ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ ಎಂದು ಹೇಳಿದರು. ಈ ವೇಳೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಎಸ್.ಆರಾಧ್ಯ, ಜಿಲ್ಲಾ ವಕ್ತಾರ ದೀಪಕ ದೊಡ್ಡೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗ್ವತ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕುಮಾರ ಜೋಶಿ, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯ್ಕ, ಪ್ರಮುಖರಾದ ಅಬ್ಬಾಸ್ ತೋನ್ಸೆ ಮುಂತಾದವರು ಇದ್ದರು.
Be the first to comment