ರಾಜ್ಯ ಸುದ್ದಿ
ದೇವನಹಳ್ಳಿ: ಚಿಕ್ಕಂದಿನಿಂದಲೂ ಶಾಲಾ ಹಂತದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪರಿಸರವನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷೆ ಹಂಸ ತಿಳಿಸಿದರು.
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ವಲಯದ ಬೀರಸಂದ್ರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದರು. ಅಭಿವೃದ್ಧಿಯ ವಿಚಾರದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತ ಮರಗಳನ್ನು ಕಡಿಯುತ್ತಿರುವುದು ಪರಿಸರ ಅಸಮತೋಲನಕ್ಕೆ ಕಾರಣವಾಗಬಹುದು. ನಮ್ಮ ಸುತ್ತಮುತ್ತಲಿನ ಪರಿಸರ ಸಮೃದ್ಧಿಯಾಗಿದ್ದರೆ, ಯಾವುದೇ ರೋಗಗಳು ಹತ್ತಿರ ಸುಳಿಯುವುದಿಲ್ಲ. ಉತ್ತಮ ಗಾಳಿ, ವಾತಾವರಣವನ್ನು ಹೊಂದಿದ ಪರಿಸರ ನಮಗೆ ಈಗಿನ ವಿದ್ಯಮಾನಗಳಲ್ಲಿ ಬೇಕಾಗಿದೆ. ಆದಷ್ಟು ಪ್ರತಿಯೊಬ್ಬರು ಪರಿಸರ ಹಾಗೂ ಮನುಕುಲ ಉಳಿವಿಗೆ ತಮ್ಮ ಕೈಲಾದಷ್ಟು ಸಸಿಗಳನ್ನು ನೆಡಬೇಕು ಎಂದು ಹೇಳಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯ ನರಸಿಂಹರಾಜು ಮಾತನಾಡಿ, ಒಂದು ಸಸಿ ನೆಟ್ಟರೆ, ಅದು ಮರವಾಗಿ ನಮಗೆ ನೆರಳು, ಹಣ್ಣು ನೀಡುತ್ತದೆ. ಜತೆಗೆ ಮಣ್ಣಿನ ಸವಕಳಿ, ಬಿಸಿಲಿನ ತಾಪವನ್ನು ತಡೆಯುತ್ತದೆ. ಹೆಚ್ಚು ಮರಗಿಡಗಳು ಬೆಳೆದರೆ ಉತ್ತಮವಾದ ಆಕ್ಸಿಜನ್ ದೊರೆಯುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಮರಗಿಡಗಳು ನಶಿಸಿ ಹೋಗುತ್ತಿವೆ. ಪರಿಸ ಸಮತೋಲನ ಕಾಪಾಡುವುದು ಪ್ರತಿ ಜನರ ಕರ್ತವ್ಯವಾಗಿದೆ ಎಂದರು.ಈ ವೇಳೆಯಲ್ಲಿ ಗ್ರಾಪಂ ಸದಸ್ಯರಾದ ಬೈರೇಗೌಡ, ಕೃಷ್ಣಮ್ಮ ಯಲ್ಲಪ್ಪ, ಕೃಷಿ ಅಧಿಕಾರಿ ಮನೋಹರ್, ಜನಜಾಗೃತಿ ವೇದಿಕೆಯ ಮೇಲ್ವಿಚಾರಕ ಧನಂಜಯ್, ಶಾಲಾ ಮುಖ್ಯ ಶಿಕ್ಷಕರು, ಪೊಲೀಸ್ ಇಲಾಖಾಧಿಕಾರಿ, ಸಂಘದ ಸದಸ್ಯರು, ಮಹಿಳೆಯರು, ಗ್ರಾಮಸ್ಥರು ಇದ್ದರು.
Be the first to comment