ಜಲಜೀವನ್ ಮಿಷನ್ ಯೋಜನೆಯಡಿ 25 ಲಕ್ಷ ಮನೆಗೆ ಕುಡಿಯುವ ನೀರಿಗೆ ಕ್ರಮ; ಸಿಎಂ ಯಡಿಯೂರಪ್ಪ

ವರದಿ ಅಂಬಿಗ ನ್ಯೂಸ್

ರಾಜ್ಯ ಸುದ್ದಿ 

CHETAN KENDULI

ಬೆಂಗಳೂರು: ಪ್ರತಿ ಮನೆಯಲ್ಲಿ ನೀರಿನ ಸಂಪರ್ಕ ಒದಗಿಸುವ ಜಲಜೀವನ್ ಮಿಷನ್ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 25 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸಲು ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗೃಹ ಕಚೇರಿ ಕೃಷ್ಣಾದಲ್ಲಿ ಜಲಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಾಜ್ಯದಲ್ಲಿ 91.91 ಲಕ್ಷ ಗ್ರಾಮೀಣ ಕುಟುಂಬಗಳಿದ್ದು, ಈಗಾಗಲೇ 28 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಕ್ರಿಯಾತ್ಮಕ ನಳಗಳ ಸಂಪರ್ಕ ಒದಗಿಸಲಾಗಿದೆ. 2021-22ರಲ್ಲಿ 25.17 ಲಕ್ಷ ಮನೆಗಳಿಗೆ ಸಂಪರ್ಕ ಒದಗಿಸುವ ಗುರಿಯನ್ನು ನಿಗದಿತ ಕಾಲಮಿತಿಯಲ್ಲಿ ಸಾಧಿಸುವಂತೆ ನಿರ್ದೇಶನ ನೀಡಿದರು.

ರಾಜ್ಯದಲ್ಲಿ ಈ ವರೆಗೆ 435 ಬಹುಗ್ರಾಮ ಯೋಜನೆಗಳು ಪೂರ್ಣಗೊಂಡಿವೆ. 69 ಯೋಜನೆಗಳು ಪ್ರಗತಿಯಲ್ಲಿದ್ದು, 30 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, 2021-22ನೇ ಸಾಲಿನಲ್ಲಿ 161 ಯೋಜನೆಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ರಾಜ್ಯದಲ್ಲಿ ನದಿ ಮೂಲದಿಂದ ನೀರು ದೊರೆಯುವ ಸ್ಥಳದಲ್ಲಿ ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಈ ಯೋಜನೆ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ನಿಗದಿತ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಿ. ಈ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸುವುದಾಗಿ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*