ರಾಜ್ಯ ಸುದ್ದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ರವಿವಾರ ಶೇ.2.47 ಪಾಸಿಟಿವಿಟಿ ದರ ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರು ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆಯಲ್ಲಿ ಕೆಲವು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರ ಕೊವಿಡ್ ಪ್ರಕರಣ ನಿಯಂತ್ರಣಕ್ಕೆ ಬಂದಿರುವ ಕೆಲವು ಜಿಲ್ಲೆಗಳಿಗೆ ಲಾಕ್ಡೌನ್ ವಿನಾಯಿತಿ ನೀಡಿ, ಮಾರ್ಗಸೂಚಿ ಪ್ರಕಟಿಸಿದೆ. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ಸೂಚನೆಯಂತೆ ಜಿಲ್ಲೆಗೆ ಅನ್ವಯವಾಗುವಂತೆ ಕೆಲವು ಹೆಚ್ಚುವರಿ ನಿಬಂಧನೆಗಳನ್ನು ಡಿಸಿ ನೀಡಿದ್ದಾರೆಜಿಲ್ಲೆಯಲ್ಲಿ ಇಂದಿನಿಂದ ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆಗೆ ಅನುಮತಿ ನೀಡಿದ ಅಗತ್ಯ ವಸ್ತುಗಳ ಅಂಗಡಿ ಸೇರಿ ಹೆಚ್ಚುವರಿಯಾಗಿ ಹೋಟೆಲ್, ರೆಸ್ಟೋರೆಂಟ್ ಬಾರ್ ಮತ್ತು ಕ್ಲಬ್ ಗಳನ್ನು ಸರ್ಕಾರದ ಮಾರ್ಗಸೂಚಿಯಲ್ಲಿ ನಿಗದಿ ಮಾಡಿದಂತೆ ಶೇ.50 ರ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ.
ಮದುವೆ ಕಾರ್ಯಕ್ಕೆ ಅವಕಾಶ: ಹೊಸ ಆದೇಶದಲ್ಲಿ ಜಿಲ್ಲೆಯಲ್ಲಿ ಮದುವೆ ಸಮಾರಂಭಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಮನೆಯಲ್ಲಿ 20 ಜನರಿಗೆ ಮೀರದಂತೆ ಸ್ಥಳೀಯ ಆಡಳಿತದ ಅನುಮತಿ ಪಡೆದು ನಡೆಸಬಹುದಾಗಿದೆ. ಆದರೆ ತಹಶೀಲ್ದಾರರ ಅನುಮತಿ ಕಡ್ಡಾಯವಾಗಿದೆ.ಮೈಕ್ರೋ ಕಂಟೈನೆಂಟ್ ಝೋನ್: ಜಿಲ್ಲೆಯಲ್ಲಿ ಯಾವುದೇ ಪ್ರದೇಶದಲ್ಲಿ ಹತ್ತಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ಇಂತಹ ಪ್ರದೇಶವನ್ನು ಮೈಕ್ರೋ ಕಂಟೈನೆಂಟ್ ಝೂನ್ ಎಂದು ಪರಿಗಣಿಸಿ ಈ ಪ್ರದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ಆದೇಶಿಸಲಾಗಿದೆ. ಉಳಿದಂತೆ ರಾಜ್ಯ ಹೊರಡಿಸಿದ ಅನ್ ಲಾಕ್ ನಿಯಮದಂತೆ ಜಿಲ್ಲೆಯಲ್ಲಿ ನಿಯಮಗಳು ಜಾರಿ ಇರಲಿದೆ.
ಬಸ್ ಸಂಚಾರ: ಜಿಲ್ಲೆಯಲ್ಲಿ ಬೆಳಿಗ್ಗೆ ಆರು ಘಂಟೆಗೆ ಎಂದಿನಂತೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತರ್ ಜಿಲ್ಲಾ ಸಂಚಾರದಲ್ಲಿ ಪ್ರಯಾಣಿಕರ ಸಾಂದ್ರತೆಗನುಗುಣವಾಗಿ ಬಸ್ ಗಳನ್ನು ಬಿಡಲು ಸೂಚಿಸಲಾಗಿದ್ದು ಮೂರು ಜನ ಕೂರುವ ಸೀಟ್ ನಲ್ಲಿ ಕೇವಲ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಕರೋನಾ ನಿಯಮ ಪಾಲಿಸಿ ಪ್ರಯಾಣಿಕರು ಪ್ರಯಾಣಿಸಬೇಕಿದೆ. ಇನ್ನು ಹೊರ ಜಿಲ್ಲೆ ಗಳಿಗೂ ಬಸ್ ಸಂಚಾರ ಮಾಡಲಿದ್ದು ಲಾಕ್ ಡೌನ್ ಇರುವ ಜಿಲ್ಲೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.ಇನ್ನು ಜುಲೈ 5ರವರೆಗೆ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಅನ್ ಲಾಕ್ ಮಾಡಲಾಗಿದೆ. ಕೆಲವು ನಿಬಂಧನೆ ನೀಡಿದ್ದು, ಅದರಂತೆ ಪ್ರತಿ ದಿನ ರಾತ್ರಿ ಕರ್ಫ್ಯೂ ಮುಂದುವರಿಯಲಿದ್ದು, ಜೊತೆಗೆ ವಾರಾಂತ್ಯದ ಕರ್ಫ್ಯೂವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದ್ದಾರೆ.
Be the first to comment