ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ರಾಜ್ಯದ ದಾಸೋಹ ವಿದ್ಯಾಪೀಠ ಎಂದೇ ಖ್ಯಾತಿ ಪಡೆದಿರುವ ತುಮಕುರ ಶ್ರೀ ಸಿದ್ದಗಂಗಾಮಠದಲ್ಲಿ ಶಿಕ್ಷಣ ಪಡೆದ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಶ್ರೀಗಳ ಪ್ರೇರಣೆಯಂತೆ ಸದಾ ದಾಸೋಹ ಮಾಡುತ್ತಾ ಬರುತ್ತಿದ್ದು ಈಗ ಮುದ್ದೇಬಿಹಾಳ ತಾಲೂಕಿನ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿರುವ ರೋಗಿಗಳಿಗೆ ಹಾಗೂ ಸಾರ್ಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ ಮುಂಚಿಣಿಯಲ್ಲಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಹಾಗೂ ಅಂಬ್ಯೂಲೆನ್ಸ್ ಸಿಬ್ಬಂದಿಗಳಿಗೆ ದಿನದ 24 ತಾಸು ಉಚಿತ ಆಹಾರ ನೀಡುವ ಕ್ಯಾಂಟಿನಗೆ ಚಾಲನೆ ನೀಡಿ ವಿಶೇಷ ದಾಸೋಹದಡಿ ಮುನ್ನೆಡೆದಿದ್ದಾರೆ.
ಹೌದು, ವಿಜಯಪುರ ಜಿಲ್ಲೆಯಲ್ಲಿನ ಉಳಿದ ಕ್ಷೇತ್ರಗಳನ್ನು ಬಿಟ್ಟರೆ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಹೆಚ್ಚಿನ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ.ಈಗಾಗಲೇ ಮಹಾಮಾರಿ ಕೊರೊನಾದಿಂದ ಹೊರಬಂದು ಹೋಂ ಕ್ವಾರೆಂಟೈನಲ್ಲಿರುವ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ತಮ್ಮ ಧರ್ಮ ಪತ್ನಿ ಅಕ್ಕಮಹಾದೇವಿ ಪಾಟೀಲ ನಡಹಳ್ಳಿ ಅವರಿಂದ ಉಚಿತ ಆಹಾರದ ಕ್ಯಾಂಟಿನಗೆ ಚಾಲನೆ ನೀಡಿದ್ದಾರೆ. ಕೋವಿಡ್ ಸೋಂಕಿಗೆ ಸಾಕಷ್ಟು ಜನ ಬಡವರು ಒಳಗಾಗಿದ್ದು ಎಲ್ಲರೂ ತಾಲೂಕಾ ಆಸ್ಪತ್ರೆಯಲ್ಲಿಯೇ ಸೂಕ್ತ ಚಿಕಿತ್ಸೆ ದೊರಕುವಂತೆ ನೋಡಿಕೊಂಡ ಶಾಸಕರು ವೈದ್ಯಕೀಯ ಚಿಕಿತ್ಸೆ ಜೊತೆಗೆ ರೋಗಿಗಳಿಗೆ ಪೌಷ್ಠಿಕ ಆಹಾರ ಒದಗಿಸಿದರೆ ಬಹುಬೇಗನೆ ರೋಗದಿಂದ ಹೊರ ಬರುತ್ತಾರೆ ಎಂದು ಯೋಚಿಸಿ ಶಾಸಕರು ತಮ್ಮ ಸ್ವಂತ ಹಣದಲ್ಲಿಯೇ ಉಚಿತ ಆಹಾರ ವಿತರಣೆಗೆ ಚಾಲನೆ ನೀಡಿದ್ದಾರೆ.
ಪ್ರೋಟಿನ್ ಭರಿತ ಉಪಹಾರ ಮತ್ತು ಆಹಾರ:
ಕೊವಿಡ್ ರೋಗಿಗಳಿಗೆ ಪ್ರೋಟಿನ್ ಭರಿತ ಆಹಾರ ಒದಗಿಸಿದರೆ ವೈದ್ಯಕೀಯ ಚಿಕಿತ್ಸೆಗೆ ಹೆಚ್ಚು ಸ್ಪಂಧನೆ ಸಿಕ್ಕು ಬೇಗ ಗುಣಮುಖರಾಗುತ್ತಾರೆ ಎಂಬ ವಿಷಯವನ್ನು ಅರಿತ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೆಳಿಗ್ಗೆ ಪ್ರೋಟಿಯುಕ್ತ ಮೊಳಕೆ ಕಾಳು, ಕಿತ್ತಳೆ ಹಣ್ಣು, ಮೊಟ್ಟೆ ಹಾಗೂ ಮಧ್ಯಾಹ್ನ ಊಟ ಮತ್ತು ರಾತ್ರಿ ಊಟದ ಸಂಪೂರ್ಣ ಉಚಿತವಾಗಿ ಒದಗಿಸುವ ವ್ಯವಸ್ಥೆಯನ್ನು ಮಾಡಿದ್ದು ಬೇಡಿಕೆಯಂತೆ ರೋಗಿಗಳಿಗೆ ಬಹುಮುಖ್ಯವಾಗಿ ಬೇಕಾಗಿರುವ ರಾಗಿ ಹಾಗೂ ಹುರುಳಿ ಗಂಜಿಯನ್ನೂ ಒದಗಿಸುವ ವ್ಯವಸ್ಥೆ ಮಾಡಿದ್ದಾರೆ.
ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಿದ ಆರೋಗ್ಯ ಇಲಾಖೆ:
ಜನರಲ್ಲಿ ಕಂಡು ಬರುವ ರೋಗಕ್ಕೆ ವೈದ್ಯಕೀಯ ಲೋಕದಲ್ಲಿ ವಿವಿಧ ರೀತಿಯ ಲಸಿಕೆಗಳನ್ನು ನೀಡಲಾಗುತ್ತದೆ. ಕೆಲವರು ಕೇವಲ ವೈದ್ಯರ ಲಸಿಕೆಗಳಿಗೆ ಸ್ಪಂದಿಸಿ ಗುಣಮುಖರಾಗುತ್ತಾರೆ. ಆದರೆ ಕೆಲವರು ವೈದ್ಯರ ಯಾವುದೇ ಔಷದಿಗೂ ಸ್ಪಂದನೆ ನೀಡುವುದಿಲ್ಲ. ಸದ್ಯಕ್ಕೆ ವೈದ್ಯರ ಕೈಜೋಡಿಸಿರುವ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ರೋಗಳಿಗೆ ಕಳೆದ 20 ದಿನಗಳ ಹಿಂದೇಯೇ ಮೊಟ್ಟೆ, ಮೊಳಕೆ ಕಾಳು ಹಾಗೂ ಕಿತ್ತಳೆ ಹಣ್ಣು ನೀಡಲು ಪ್ರಾರಂಭಿಸಿದರು. ಇದರಿಂದ ಸಾಕಷ್ಟು ರೋಗಿಗಳು ವೈದ್ಯರ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗಿದ್ದಾರೆ. ಇದಲ್ಲದೇ ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಬಂದಂತಹ ಸಂಬಂಧಿಕರಿಗೆ ಹಾಗೂ ವೈದ್ಯರಿಗೂ ಪ್ರೋಟಿಯುಕ್ತ ಆಹಾರದ ವ್ಯವಸ್ಥೆಯೂ ಮಾಡಿದ್ದು ತುಂಬಾ ಸಂತಸವಾಗಿದೆ. ಇಂತಹ ವ್ಯವಸ್ಥೆ ರಾಜ್ಯದಲ್ಲಿಯೇ ಎಲ್ಲಿಯೂ ಮಾಡಿಲ್ಲ. ಇಂತಹ ಪ್ರೋಟಿನ್ ಯುಕ್ತ ಆಹಾರದಿಂದ ರೋಗಿಗಳಿಗೂ ಹಾಗೂ ಅವರಿಗೆ ಚಿಕಿತ್ಸೆ ಸೇವೆಯಲ್ಲಿರುವ ಸಿಬ್ಬಂದಿಗಳಿಗೂ ತುಂಬಾ ಅನುಕೂಲಕರವಾಗಿದೆ ಎಂದು ಮುದ್ದೇಬಿಹಾಳ ತಾಲೂಕಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ಸತೀಶ ಬಾಗವಾನ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Be the first to comment