ಸದನದಲ್ಲಿ ಮಿಂಚಿದ ಕೋಲಿ ಸಮಾಜದ ಸಂಘರ್ಷದ ನಾಯಕ ಶಾಸಕ ಬಿ ನಾರಾಯಣ ರಾವ್

ವಿಶೇಷ ವರದಿ–ಅಮರೇಶಕಾಮನಕೇರಿ

ಬಸವ ಕಲ್ಯಾಣದ ಶಾಸರ ಬಿ.ನಾರಾಯಣರಾವ್ ನಿನ್ನೆ ದಿನ ವಿಧಾನಸೌಧದಲ್ಲಿ ಆಡಿದ ಮನಪೂರ್ವಕವಾದ ಮಾತುಗಳಿಗೆ ಎಲ್ಲಿಲ್ಲದ ಪ್ರಶಂಸೆಯ ಸುರಿಮಳೆ ನಡೆದಿದೆ. ಮೂಲತಃ ಶರಣರ ಅಂಬಿಗರ ಚೌಡಯ್ಯನವರ ಚಾಟಿ ಏಟು, ಒಳ ಹೊಡೆತಗಳು ಅವರ ಮಾತುಗಳಲ್ಲಿ ನಾವು ಧಾರಾಳವಾಗಿ ಕಾಣಬಹುದು. ಶಾಸಕ ಬಿ.ನಾರಾಯಣರಾವ್ ಬಸವಕಲ್ಯಾಣದ ಜನತೆಯೆ ಬಲ್ಲಂತೆ ಸಾದಾ ಸೀದಾ ಜೀವನ ನಿರ್ವಹಿಸುವ, ನಿಗರ್ವಿ ಶಾಸಕ. ಯಾರಾದರೂ ಮಾತಾಡಿಸಬಹುದಾಗಿ, ಮತ್ತಾರಾದರೂ ತಕರಾರು ತೆಗೆಯಬಹುದಾದ ಸರಳತೆಯನ್ನು ಮೈಗೂಡಿಸಿಕೊಂಡವರು.

ಶರಣರ ವಿಚಾರಗಳೆ ಹಾಗೆ. ಒಂದು ಒಂದು ಸಲ ಅವುಗಳ ಸಮೀಪಕ್ಕೆ ಬರಬೇಕು ಅಷ್ಟೇ : ಅನಂತರ ಅವರಿಗೆ ಅರಿವಿಲ್ಲದೆ ಅವರೊಳಗೆ ಚಿಂತನೆ, ಸಾಮಾಜಿಕ ಕಾಳಜಿ, ನಿಜವಾದ ಧಾರ್ಮಿಕ ಪ್ರಜ್ಞೆಗಳು ಹುಟ್ಟಿಕೊಳ್ಳಲು ಆರಂಭವಾಗುತ್ತವೆ. ನಮಗೆ ಗೊತ್ತಿಲ್ಲದೆ ಪ್ರತಿಭಟಿಸುವ ಮನಸ್ಸು, ವಸ್ತು ಸ್ಥಿತಿಯನ್ನು ಅವಲೋಕಿಸಿ ಸೂಕ್ತ ಸಮಯದಲ್ಲಿ ಸರಿಯಾದ ಮಾತನಾಡುವ ಕಸುವು ತಂತಾನೆ ಉಂಟಾಗುತ್ತದೆ.

ಕುಂಡಲಿ ಬಂದು ಕೀಡಿಯನು ಕುಂಡಲಿಯ ಮಾಡಿತ್ತಯ್ಯಾ

ಅಗ್ನಿ ಬಂದು ಕಾಷ್ಠವ ಅಗ್ನಿಯ ಮಾಡಿತ್ತಯ್ಯಾ

ಮಹೇಶ ಬಂದು ಭಕ್ತನ ಮಹೇಶನ ಮಾಡಿ

ಗಮನಿಸಿದನಯ್ಯಾ ಕಪಿಸಿದ್ಧ ಮಲ್ಲಿಕಾರ್ಜುನಾ

ಎಂಬಂತೆ ಒಂದೆ ಒಂದು ಸಲ ಶರಣರ ವಿಚಾರಧಾರೆಯತ್ತ ಇಣುಕಿ ನೋಡಿದರೂ ಸಾಕು. ಖಂಡಿತವಾಗಿ ಕೀಡೆ ಕುಂಡಲಿಯಾಗುತ್ತದೆ. ಬೆಂಕಿ ಕಟ್ಟಿಗೆಯ ಸಮೀಪ ಬಂದು ಕಟ್ಟಿಗೆಯನ್ನು ಹೇಗೆ ಬೆಂಕಿ ಮಾಡಬಲ್ಲುದೋ ಹಾಗೆ. ಮಹೇಶ ಬಂದು ಭಕ್ತನ ಮಹೇಶ ಸ್ಥಲಕ್ಕೆ ಕರೆದುಕೊಂಡು ಹೋಗುವಂತೆ ಎಂಬ ಸೊನ್ನಲಾಪುರದ ಶರಣ ಸಿದ್ಧರಾಮಯ್ಯನ ಮಾತಿನಲ್ಲಿ ಬಹುದೊಡ್ಡ ಇತಿಹಾಸವಿದೆ.

 

ಬಸವರಾಜ ಪಾಟೀಲ ಅಷ್ಟೂರೆ, ಖೂಬಾ ಅವರ ನಡುವೆ ಗೆದ್ದು ಬರುವುದು ಅಷ್ಟು ಸುಲಭದ ಮಾತಲ್ಲ. ಶಾಸಕ ನಾರಾಣಯರಾವ್ ರಾಜಕೀಯ ಘಟಾನು ಘಟಿಗಳ ನಡುವೆಯೂ ಗೆದ್ದು ಬರುವ ಛಾತಿಯನ್ನು ಇಟ್ಟುಕೊಳ್ಳಲು ಸಾಧ್ಯವಾದುದು ಅವರ ಬದ್ಧತೆಗೆ. ಜನ ಸಾಮಾನ್ಯನೊಂದಿಗೆ ಬೆರೆತು ಅವರೊಳಗೆ ಒಂದಾಗುವ ಕ್ರಿಯೆಗೆ. ಬಹುತೇಕ ರಾಜಕಾರಣಿಗಳಿಗೆ ವಿಚಾರವೆಂಬುದು ಇರುವುದಿಲ್ಲ. ಆ ವಿಚಾರಗಳನ್ನು ಅವರಲ್ಲಿ ದೀಪ ಹಚ್ಚಿ ಹುಡುಕಬೇಕು. ಆದರೆ ಈ ನಾರಾಯಣರಾವ್ ಮಾತ್ರ ಬಸವಾದಿ ಶಿವಶರಣರ ವಿಚಾರಗಳನ್ನು ಅರಿತುಕೊಂಡು ಅವುಗಳನ್ನು ಆಚರಿಸುವತ್ತ ಆಸಕ್ತಿ ತೋರಿಸಿದ್ದಾರೆ.

ಹೀಗಾಗಿಯೇ ವಿಧಾನಸೌಧದಲ್ಲಿ ಎಲ್ಲಾ ಸದಸ್ಯರಿಗೂ ಅರಿವು ಮೂಡಿಸುವ ಅನುಭಾವದ ಮಾತುಗಳನ್ನು ಹೇಳಿದ್ದಾರೆ. ಜಗತ್ತಿಗೆ ಮೊಟ್ಟ ಮೊದಲು ಪ್ರಜಾಪ್ರಭುತ್ವದ ಆಡಳಿತ ತಂದದ್ದು ಬ್ರಿಟನ್ ದೇಶ ಅಲ್ಲ, ನಮ್ಮ ರಾಜ್ಯದ ಬಸವ ಕಲ್ಯಾಣ ಎಂಬುದುನ್ನು ಅವರು ಒತ್ತಿ ಒತ್ತಿ ಹೇಳಿದ್ದಾರೆ. ತನ್ನ ರಾಜ್ಯದಲ್ಲಿ ಯಾರೂ ಹಸಿವಿನಿಂದ ಕಂಗಾಲಾಗಿ ಸಾಯಬಾರದು ಎಂದು ಅರಿತುಕೊಂಡ ಬಸವಣ್ಣನವರು ದಾಸೋಹ ಪರಿಕಲ್ಪನೆಯನ್ನು ಜಾರಿಗೆ ತಂದರು ಎಂದು ನೆನಪಿಸಿಕೊಂಡಿದ್ದಾರೆ. ಜಾತಿ ಮತ ಪಂಥವೆನ್ನದೆ, ಗಂಡು ಹೆಣ್ಣು ಎಂಬ ತರತಮಭಾವನೆ ಇಟ್ಟುಕೊಳ್ಳದೆ ಅಂದು ಕಲ್ಯಾಣದಲ್ಲಿ ಬಸವಣ್ಣ ಅನುಭವ ಮಂಟಪ ಕಟ್ಟಿದರು. ಈ ಅನುಭವ ಮಂಟಪವನ್ನು ಮತ್ತೆ ಪುನರ್ ನಿರ್ಮಿಸುವ ಮೂಲಕ ಜನ ಸಾಮಾನ್ಯರಿಗೆ ಪ್ರೇರಣೆ ಒದಗಿಸುವುದು ಸರಕಾರದ ಕರ್ತವ್ಯ ಎಂದು ನಾರಾಯಣರಾವ್ ಒತ್ತಿ ಹೇಳಿದರು.

ಜೊತೆಗೆ ಇಂದಿನ ರಾಜಕೀಯ ತೀರಾ ಬಗ್ಗಡಗೊಂಡು ಹೋಗಿದೆ. ಕೋಟಿ ಕೋಟಿಗಳನ್ನು ಖರ್ಚು ಮಾಡಿ ಗೆದ್ದು ಬರುವ ಸ್ಥಿತಿ ನಿರ್ಮಾಣವಾಗಿದೆ. ಶ್ರೀಸಾಮಾನ್ಯ ಹೀಗೆ ಗೆದ್ದು ಬರಲು ಸಾಧ್ಯವೆ ? ಎಂಬ ಆತ್ಮಾವಲೋಕನದ ನುಡಿಗಳನ್ನು ಆಡುವ ಮೂಲಕ ವಿಧಾನಸಭೆಯ ಸದಸ್ಯರ ಮನವನ್ನು ಅಲ್ಲಾಡಿಸಿಬಿಟ್ಟಿದ್ದಾರೆ.

ಬಸವಣ್ಣನವರ ಬಗೆಗೆ ಮಾತಾಡುವುದೆ ಒಂದು ಸಾಹಸ ಎಂದು ಜಾತಿ ಲಿಂಗಾಯತರು ಅವಲತ್ತುಕೊಳ್ಳುವ ಈ ಸಂದರ್ಭದಲ್ಲಿ ನಿಜವಾದ ಬಸವ ಪ್ರಣೀತ ಲಿಂಗಾಯತನಾದ ನಾರಾಣರಾವ್ ಮಾತಾಡುವುದು ಹೆಚ್ಚು ಸೂಕ್ತವಾಗಿದೆ. ಇದಲ್ಲದೆ ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗಲೂ ಸಹ ಬಸವಾದಿ ಶರಣರ ಕುರಿತು, ಅವರ ವಚನಗಳ ಕುರಿತು ಆಸಕ್ತಿ ತಳೆದವರು ಅನ್ಯ ಮತದವರು. ಹರ್ಡೇಕರ ಮಂಜಪ್ಪ, ಫ.ಗು. ಹಳಕಟ್ಟಿ, ಅನಕೃ, ಆರ್.ಆರ್.ದಿವಾಕರ್, ಎಂ.ಆರ್.ಶ್ರೀನಿವಾಸ ಮೂರ್ತಿ ಮೊದಲಾದವರು ಆಸಕ್ತಿ ತಳೆದರೆಂದೆ ನಮಗಿಂದು ವಚನ ಸಾಹಿತ್ಯವೆಂಬ ಸಕಲ ಜೀವಪ್ರೇಮದ, ವಿಶ್ವ ಹೃದಯಿಯಾದ ವಚನ ಸಾಹಿತ್ಯ ದಕ್ಕಿದೆ.

https://m.facebook.com/story.php?story_fbid=483351715798547&id=100023711673775

ನಾರಾಯಣರಾವ್ ರವರ ಸಾಮಾಜಿಕವಾಗಿ ಅವರ ಬದ್ಧತೆ, ವೈಚಾರಿಕ ನಿಲುವುಗಳನ್ನು ಕರ್ನಾಟಕದ ಜನತೆ ಭರವಸೆಯಿಂದ ನೋಡುತ್ತಿದೆ.

 

Be the first to comment

Leave a Reply

Your email address will not be published.


*