ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಅ.13:
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಇತಿಹಾಸ ಮೂಡಿಸಿ ಬಿಜೆಪಿಗೆ ಪ್ರಪ್ರಥಮ ಗೆಲವಗೆ ಕಾರಣರಾದ ಎ.ಎಸ್.ಪಾಟೀಲ ನಡಹಳ್ಳಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಗ್ರಾಮೀಣ ಪ್ರದೇಶದಲ್ಲಿ ನೂತನ ರಸ್ತೆಗಳನ್ನು ನಿರ್ಮಾಣಕ್ಕಾಗಿ ಸರಕಾರದಿಂದ ಬೃಹತ್ ಅನುದಾನ ತಂದು ಅಭಿವೃದ್ಧಿ ಪಡಿಸುತ್ತಿದ್ದಾರೆ. ಆದರೆ ಅಕ್ರಮ ಮರಳು ಗಾರಿಕೆ ಹೆಚ್ಚಾಗಿ ನಡೆಸುತ್ತಿದ್ದ ಕಾರಣ ನೂತನವಾಗಿ ಮಾಡಿರುವ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ. ಇದರ ಬಗ್ಗೆ ತಾಲೂಕಾ ಆಡಳಿತ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ವಿಪರ್ಯಾಸವಾಗಿದೆ.
ಹೌದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯರಝರಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ. ರಾತ್ರಿ ಹಗಲು ಎನ್ನದೇ ಕೆಲವರು ಮರಳುಗಾರಿಕೆ ನೆಡೆಸಿದ್ದು ಇದನ್ನು ಕಂಡು ಕಾಣದಂತೆ ಸ್ಥಳೀಯ ಗ್ರಾಮ ಪಂಚಾಯತ ಅಧಿಕಾರಿಗಳು ಹಾಗೂ ದಂಢಾಧಿಕಾರಿಗಳು ಮೌನ ವಹಿಸಿದ್ದಾರೆ.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಿಂದಲೇ ಅಕ್ರಮ ಮರಳುಗಾರಿಕೆ:
ರೈತರ ಅನುಕೂಲಕ್ಕಾಗಿ ರೈತರ ಸಂಘವಿದೆ. ರೈತರಿಗಾದ ಅನ್ಯಾಯದ ವಿರುದ್ಧ ಹೋರಾಟ ನೆಡೆಸಿ ನ್ಯಾಯ ಒದಗಿಸುವ ಕೆಲಸ ಕರ್ನಾಟಕ ರಾಜ್ಯ ರೈತ ಸಂಘದ ಇದೆ ಎಂದು ಹೇಳುತ್ತಿರುವಾಗ ರೈತ ಸಂಘದಲ್ಲಿಯೇ ಇದ್ದುಕೊಂಡು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಮುದ್ದೇಬಿಹಾಳ ತಾಲೂಕಿನ ಯರಝರಿ ಗ್ರಾಮದ ನಿವಾಸಿ ವಿಜಯಪುರ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಸಂಗಣ್ಣ ಬಾಗೇವಾಡಿ ಎನ್ನುವವರೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ದೂರಲಾಗಿದೆ.
ದಶಕದ ರಸ್ತೆ ಅಭೀವೃದ್ಧಿಗೆ ಅಡ್ಡಿಯಾದ ಅಕ್ರಮ ಮರಳುಗಾರಿಕೆ:
ಹಲವು ದಶಕದಿಂದಲೂ ಕೇವಲ ಬಂಡೆ ರಸ್ತೆಯಾಗಿದ್ದ ರಸ್ತೆಯನ್ನು ಸ್ಥಳೀಯ ಶಾಸಕ ನಡಹಳ್ಳಿ ಅವರು ಡಾಂಬರೀಕರಣಗೊಳಿಸಿದ್ದು ಹಂಡರಗಲ್ಲ, ಯರಝರಿ ಹಾಗೂ ಚಿರ್ಚಿನಕಲ್ಲ ಗ್ರಾಮದ ರೈತರಿಗೆ ತುಂಬಾ ಅನುಕೂಲಕವಾಗಿದೆ. ಆದರೆ ಇದೇ ರಸ್ತೆಯಲ್ಲಿ ದಿನನಿತ್ಯ ಅಕ್ರಮ ಮರಳುಗಾರಿಕೆ ನಡೆದಿದ್ದು ನೂತನವಾಗಿ ನಿರ್ಮಿಸಿದ ರಸ್ತೆಯೂ ಸಂಪೂರ್ಣ ಹಾಳಾಗಿ ಅಭಿವೃದ್ಧಿಗೆ ಅಡ್ಡಿಯಾಗಿದೆ.
ಗ್ರಾಪಂ ಸದಸ್ಯರಿಗೂ ಕಿಮ್ಮತ್ತಿಲ್ಲ:
ಯರಝರಿ ಗ್ರಾಪಂ ವ್ಯಾಪ್ತಿಗೆ ಬರುವ ಹಂಡರಗಲ್ಲ ಗ್ರಾಮದ ಸರ್ವೆ ನಂ.೮ ಹಾಗೂ ೯ರಲ್ಲಿ ಹಳ್ಳದ ದಂಡಿ ಇದ್ದು ಇದೇ ಹಳ್ಳದಿಂದ ರೈತರ ಸಂಘದ ಅಧ್ಯಕ್ಷ ಎಂದು ಹೇಳಿಕೊಂಡು ಯಾರ ಮನವಿಗೂ ಸ್ಪಂಧಿಸದೇ ಸ್ಥಳೀಯ ಗ್ರಾಮ ಪಂಚಾಯತ ಅಧಿಕಾರಿಗಳನ್ನು ಹಣದಿಂದ ಕೊಂಡುಕೊಂಡು ಸಂಗಣ್ಣ ಬಾಗೇವಾಡಿ ಎಂಬುವರು ಮರಳು ಮಾಫೀಯಾ ಮಾಡುತ್ತಿದ್ದಾರೆ.
ಇದರಿಂದ ಹಂಡರಗಲ್ಲ ಗ್ರಾಮದಲ್ಲಿ ಇತಿಹಾಸ ನಿರ್ಮಿಸಿರುವ ರಸ್ತೆಯು ಸಂಪೂರ್ಣ ಹಾನಿಯಾಗಿದೆ. ಕೂಡಲೇ ಇದರ ಬಗ್ಗೆ ಗಮನಿಸಿ ಮರಳು ಮಾಫೀಯಾವನ್ನು ತಡೆಗಟ್ಟಬೇಕು ಎಂದು ತಹಸೀಲ್ದಾರ ಅವರಿಗೆ ಅ.೯ರಂದು ಗ್ರಾಪಂ ಸದಸ್ಯ ರೇವಣಸಿದ್ದಪ್ಪ ಸಾಬಣ್ಣ ಗುರಿಕಾರ ಮನವಿ ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೂ ಮುಂದಾಗಿಲ್ಲ. ಓರ್ವ ಗ್ರಾಪಂ ಚುನಾಯಿತ ಸದಸ್ಯ ದೂರು ನೀಡಿದ್ದರೂ ಯಾವುದೇ ರೀತಿಯ ಕಿಮ್ಮತ್ತಿಲ್ಲದಂತೆ ವರ್ತಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
Be the first to comment