ರಾಜ್ಯ ಸುದ್ದಿಗಳು
ಬೆಂಗಳೂರು:
ಬಿಜೆಪಿಯ ಹಿರಿಯ ನಾಯಕರು, ಶಿಕ್ಷಣ ಪ್ರೇಮಿಗಳು, ಕೇಂದ್ರದ ರೈಲ್ವೆಯ ರಾಜ್ಯ ಸಚಿವರೂ ಆಗಿದ್ದ ಮಾನ್ಯ ಶ್ರೀ ಸುರೇಶ ಅಂಗಡಿ ಅವರ ಅಕಾಲಿಕ ನಿಧನ ನನಗೆ ದಿಗ್ಭ್ರಮೆ ಮೂಡಿಸಿದೆ ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿದ ಅವರು, ರೈಲ್ವೆಯ ರಾಜ್ಯ ಸಚಿವರಾಗಿ ಅವರು ಉತ್ತರ ಕರ್ನಾಟಕಕ್ಕೆ ನೀಡಿದ ಕೊಡುಗೆ ಸದಾ ಸ್ಮರಣೀಯ. ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ವಿಜಯಪುರ-ಮಂಗಳೂರು ರೈಲು, ಕಿಸಾನ್ ರೈಲು, ಬೆಳವಾಗಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಪ್ರಾರಂಭಿಸುವಲ್ಲಿ ಅವರ ಶ್ರಮ ಅಪಾರವಾಗಿದೆ. ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗದ ಸಮೀಕ್ಷೆ ಮತ್ತು ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕೆ ಹೆಚ್ಚಿನ ಒತ್ತು ನೀಡಿದ್ದರು.
ಅಲ್ಲದೇ ಶಿಕ್ಷಣ ಪ್ರೇಮಿಯಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಒಬ್ಬ ಮಹಾನ್ ಮುತ್ಸದ್ದಿ ನಾಯಕರನ್ನು ಈ ನಾಡು, ದೇಶ ಕಳೆದುಕೊಂಡಿದೆ. ಅವರ ಅಗಲಿಕೆ ಪಕ್ಷಕ್ಕೆ ದೊಡ್ಡ ಹಾನಿ ತಂದುಕೊಟ್ಟಂತಾಗಿದೆ. ಭಗವಂತ ಅವರ ದಿವ್ಯ ಆತ್ಮಕ್ಕೆ ಚಿರಶಾಂತಿ ಕರುಣಿಸಲು, ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ನಮಗೆ ದಯಪಾಲಿಸಲು ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
Be the first to comment