ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಸ್ವಚ್ಛ ಭಾರತ ಅಭಿಯಾನದಡಿ ಬಿಡುಗಡೆಯಾದ ಅನುದಾನವನ್ನು ದುರ್ಬಳಕೆಯಾಗಿದೆ ಎಂಬ ಶಂಕೆ ಹಿನ್ನಲೆಯಲ್ಲಿ ಹಿಂದಿನ ಸಿಇಓ ಗಂಗೂಬಾಯಿ ಮಾನಕರ ಅವರ ಮೇಲೆ ತನಿಖೆ ನಡೆಸುವಂತೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಸರಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ನಡೆದ 12ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ಸಾಲಿನಲ್ಲಿ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗೋಡೆ ಬರಹ, ಬ್ಯಾನರ್ ಹಾಕಲು, ಸ್ವಚ್ಛತೆ ಬಗ್ಗೆ ಅರಿವು ಕಾರ್ಯಕ್ರಮ ಹಾಗೂ ತ್ಯಾಜ್ಯ ವಿಲೇವಾರಿ ವಾಹನ ಖರೀದಿ ಸೇರಿದಂತೆ ಇತರೆ ಕಾರ್ಯಗಳಿಗೆ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈ ಹಣ ದುರ್ಬಳಕೆ ಪಡಿಸಿಕೊಳ್ಳಲಾಗಿದೆ ಎಂಬ ಸದಸ್ಯರ ಆರೋಪದ ಹಿನ್ನಲೆಯಲ್ಲಿ ತನಿಖೆಗೆ ಪತ್ರ ಬರೆಯಲು ಮುಂದಾಗಿರುವುದಾಗಿ ತಿಳಿಸಿದರು.ಅಲ್ಲದೇ ಕಳೆದ 2019-20ನೇ ಸಾಲಿನ ವಿವಿಧ ಯೋಜನೆಗಳ ಅಡಿಯಲ್ಲಿ ವಿವಿಧ ಇಲಾಖೆಗಳಾದ ಕೃಷಿ ಇಲಾಖೆಯಿಂದ 20 ಲಕ್ಷ, ಅರಣ್ಯ ಇಲಾಖೆಯಿಂದ 15.12 ಲಕ್ಷ, ಲಿಂಕ್ ಡಾಕುಮೆಂಟನ ವಾರ್ಷಿಕ ನಿರ್ವಹಣೆ ಮತ್ತು ದುರಸ್ಥಿ ಯೋಜನೆಯ 10.70 ಲಕ್ಷ ರೂ.ಗಳು ಅನುದಾನ ಬಳಕೆಯಾಗದೆ ವಾಪಸ್ ಹೋಗಲು ಕಾರಣರಾಗಿದ್ದು, ಸೂಕ್ತ ತನಿಖೆಗೆ ನಡೆಸಲು ಪತ್ರ ಬರೆದಿರುವುದಾಗಿ ತಿಳಿಸಿದರು. ಇದಲ್ಲದೇ ತೊದಲಬಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಲ್ಲಿ ದುರುಪಯೋಗವಾಗಿರುವುದಾಗಿ ಕ್ರಮ ಕೈಗೊಳ್ಳಲು ಸರ್ವ ಸದಸ್ಯರು ಸಭೆಗೆ ತಿಳಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಗಿಡಮರಗಳಿಲ್ಲದ ಪ್ರದೇಶಗಳಲ್ಲಿ ಕುರಿಗಾಹಿ, ದನಗಾಹಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಕೊರೊನಾ ಹಾಗೂ ಪ್ರವಾಹದಿಂದಾಗಿ ತತ್ತರಿಸಿದ ಜನ ತಮ್ಮ ದನಕರುಗಳ ಕಾಲು ಬೇನೆ, ಬಾಯಿ ಬರಬಾರದೆಂಬ ಉದ್ದೇಶದಿಂದ ಅರಣ್ಯ ಸ್ಥಳದಲ್ಲಿ ಹೋಗಿ ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುತ್ತಿಲ್ಲ. ಇದರಿಂದ ಕುರಿಗಾಹಿಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಅನುವು ಮಾಡಿಕೊಡಲು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಸಸ್ಯ ಸಂರಕ್ಷಣೆ ಮಾಡಿದ ಸ್ಥಳ ಹಾಗೂ ಇತ್ತೀಚೆಗೆ ಸಸಿ ನೆಟ್ಟ ಸ್ಥಳ ಹೊರತುಪಡಿಸಿ ಉಳಿದ ಕಡೆ ಅನುಕೂಲಮಾಡಿಕೊಡುವಂತೆ ಅರಣ್ಯ ಇಲಾಖೆಗೆ ತಿಳಿಸಿದರು.ಸಾಮಾನ್ಯವಾಗಿ ಕೆಮ್ಮು, ನೆಗಡಿ ಲಕ್ಷಣದಿಂದ ಖಾಸಗಿ ಆಸ್ಪತ್ರೆಗೆ ಹೋದರೆ ಕೊರೊನಾ ಪಾಜಿಟಿವ್ ಅಂತ ಹೇಳುತ್ತಾರೆ. ಅದೇ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಹೋದಾಗ ನೆಗಟಿವ್ ಅಂತ ಹೇಳುತ್ತಾರೆ. ಇದರಿಂದ ಜನರು ಗೊಂದಲಕ್ಕೆ ಒಳಗಾಗಿದ್ದಾರೆಂದು ಜಿ.ಪಂ ಸದಸ್ಯೆ ಶಶಿಕಲಾ ಯಡಹಳ್ಳಿ ಸಭೆಗೆ ತಿಳಿಸಿದಾಗ ಈ ಕುರಿತು ವಿಚಾರಣೆ ನಡೆಸಲು ತಿಳಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಅವರು ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಸಭೆಯಲ್ಲಿ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಜಿಲ್ಲಾ ಪಂಚಾಯತ ಸಿಇಓ ಟಿ.ಭೂಬಾಲನ, ಜಿ.ಪಂ ಎಲ್ಲ ಸಮಿತಿಯ ಅಧ್ಯಕ್ಷರು, ಸದಸ್ಯರು, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಲೆಕ್ಕಾಧಿಕಾರಿ ಪ್ರಭು ಮಾನೆ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
Be the first to comment