ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಅಪರೂಪದ ರಾಜಕಾರಣಿ, ಅತ್ಯುತ್ತಮ ವ್ಯಕ್ತಿತ್ವವುಳ್ಳ ತತ್ವಜ್ಞಾನಿ, ರಾಜನಿತಿಜ್ಞ, ಶಿಕ್ಷಕ, ಪ್ರಾದ್ಯಾಪಕರು ಹಾಗೂ ಮೇರು ವ್ಯಕ್ತಿತ್ವದ ಮಹಾಪುರುಷ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಅವರ ಧ್ಯೇಯ ವಾಕ್ಯ ಅನ್ನ ಹಸಿವನ್ನು ನೀಗಿಸಿದರೆ ಅಕ್ಷರ ಅಜ್ಞಾನವನ್ನು ನೀಗಿಸುವದಾಗಿತ್ತು ಎಂದರು.ದೇಶದಲ್ಲಿ ಕೊರೊನಾ ಭೀತಿಯ ಮಧ್ಯೆ ನೆರೆ, ಪ್ರವಾಹದಿಂದಾಗಿ ಸಾಕಷ್ಟು ಬೆಳೆ, ಆಸ್ತಿ ಹಾನಿಗೀಡಾಗಿವೆ. ಆರ್ಥಿಕವಾಗಿ ತೊಂದರೆಯಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಕಾರ್ಯವಾಗಿಲ್ಲ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ನಿಧನದಿಂದ ಶೋಕಾಚರಣೆ ಹಿನ್ನಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ರಾಧಾಕೃಷ್ಣನ್ ಅವರು ಸಾಧನೆ ಮೂಲಕ ಈಡೀ ದೇಶ ಗುರುತಿಸುವ ಕೆಲಸ ಮಾಡಿದ್ದಾರೆ. ಇವರ ಹಾದಿಯಲ್ಲಿ ಶಿಕ್ಷಕರು ನಡೆಯಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ನೀರಿಕ್ಷಿತ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಬರಲಿಲ್ಲ. ಇದಕ್ಕೆಲ್ಲ ಶಿಕ್ಷಕರು, ಅಧಿಕಾರಿಗಳು ಹೊಣೆಗಾರರಾಗಿದ್ದು, ಅದನ್ನು ಅರಿತು ಕೆಲಸ ಮಾಡಬೇಕು. ಜಿಲ್ಲೆಯ ಬೀಳಗಿ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿ ಆನಂದ ಹೊಸಮನಿ 625ಕ್ಕೆ 623 ಅಂಕ ಪಡೆದು ರಾಜ್ಯಕ್ಕೆ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಮುರಾರ್ಜಿ ವಸತಿ ಶಾಲೆಗಳು ಫಲಿತಾಂಶದಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ಮೊನದಲನೇ ಸ್ಥಾನ, 19 ಜಿಲ್ಲೆಗಳಲ್ಲಿ 2ನೇ ಸ್ಥಾನ, 16 ಜಿಲ್ಲೆಗಳಲ್ಲಿ 3ನೇ ಸ್ಥಾನ ಪಡೆದಕೊಂಡಿದೆ. ರಾಜ್ಯದಲ್ಲಿ ಸರಾಸರಿ ಶೇ.61 ಇದೆ. 158 ವಸತಿ ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿರುತ್ತವೆ ಎಂದರು.
ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದ್ದು, ಮಕ್ಕಳಿಗೆ ಪಾಠದ ಜೊತೆಗೆ ಆಟ, ಪ್ರತಿಭೆ ಹಾಗೂ ವೃತ್ತಿಪರ ಚಟುವಟಿಕೆಗಳ ತರಬೇತಿ ನೀಡಲಾಗುತ್ತಿದೆ. ಆದ್ದರಿಂದ ಶಿಕ್ಷಕರು ಹೊಸ ನೀತಿಯನ್ನು ಅಧ್ಯಯನ ಮಾಡಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ಶಿಕ್ಷಣದಲ್ಲಿ ದೇಶದ ಭವಿಷ್ಯ ಅಡಗಿದ್ದು, ಶಿಕ್ಷಣ ನೀಡುವ ಶಿಕ್ಷಕರಿಗೆ ಗೌರವ ಸಲ್ಲಿಸುವ ಸಲುವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಸಮಾನ ಅವಕಾಶ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದೆ. ಗುಣಾತ್ಮಕ ಶಿಕ್ಷಣ ನೀಡಿ ಮಕ್ಕಳನ್ನು ಶಿಕ್ಷಣವಂತರು ಹಾಗೂ ಬುದ್ದಿವಂತರನ್ನಾಗಿ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಗುರುಸ್ಥಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ಹೊಂದಿ ತಮ್ಮದೇಯಾದ ಛಾಪನ್ನು ಮೂಡಿಸಿದ್ದಾರೆ. ಯುವಶಕ್ತಿಯನ್ನು ನಿರ್ಮಾಣ ಮಾಡುವ ಶಕ್ತಿ ಶಿಕ್ಷಣದಲ್ಲಿದೆ ಎಂದರು. ಅಧ್ಯಕ್ಷ ಸ್ಥಾನ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ಕೇಂದ್ರ ಸರಕಾರ ಜಾರಿಗೊಳಿಸುತ್ತಿರುವ ಹೊಸ ಶಿಕ್ಷಣ ನೀತಿಯಲ್ಲಿ ಉದ್ಯೋಗ ಆಧಾರಿತ ಶಿಕ್ಷಣ ಅಳವಡಿಸಲಾಗಿದೆ. ಶಿಕ್ಷಕರು ಹೊಸ ನೀತಿಯ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡ, ಜಿ.ಪಂ ಸದಸ್ಯೆ ಹನಮವ್ವ ಕರಿಹೊಳೆ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ
ಪ್ರಾಥಮಿಕ ವಿಭಾಗ : ಪ್ರಕಸ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷ ಪ್ರಶಸ್ತಿಯನ್ನು 12 ಜನ ಶಿಕ್ಷಕರಿಗೆ ನೀಡಲಾಯಿತು. ಸಹ ಶಿಕ್ಷಕ ಶಂಕರಲಿಂಗ ಚಿತ್ತರಗಿ, ಮುಖ್ಯೋಪಾದ್ಯಾಯ ವಿಠಲ ಸಾಲಾಪೂರ, ಸಹ ಶಿಕ್ಷಕ ರಾಮನಾಯಕ ಎ.ಬಿ, ಕಮಲಾಕ್ಷಿ, ಅಶೋಕ ಬಳ್ಳಾ, ಚಂದ್ರಶೇಖರ ಅರಸಿಕೇರಿ, ಮುಖ್ಯ ಗುರುಗಳಾದ ಎಲ್.ಆರ್.ಹುರಕಡ್ಲಿ, ಸಹ ಶಿಕ್ಷಕ ಬಿ.ಬಿ.ಹಡಪದ, ಬಿ.ವಿ.ಹೋಟಕರ, ಸೈಯದ್ ಇನಾಮದಾರ, ಸದಾಶಿವ ಮಠಪತಿ ಹಾಗೂ ಜಿ.ಎಂ.ಮರನೂರ ಪಡೆದುಕೊಂಡರು.ಪ್ರೌಢಶಾಲಾ ವಿಭಾಗ: ಸಹ ಶಿಕ್ಷಕ ಮಹಿಬೂಬಸಾಬ ಹದ್ಲಿ, ದೈಹಿಕ ಶಿಕ್ಷಕ ಅಶೋಕ ಮಾಡಗಿ, ಸಹ ಶಿಕ್ಷಕ ಬಾಸ್ಕರ ಬೂದಿಹಾಳ, ಶರಣಪ್ಪ ಹೆಳವರ ಕೆಲೂರ, ಪ್ರಕಾಶ ಅಥಣಿ, ಸಪನಾ ಅನಿಗೋಳ ಪಡೆದುಕೊಂಡರು.
Be the first to comment