ಹರಿಹರದ ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪನವರಿಂದ. *ಮಾಹಿತಿ ಹಕ್ಕು,ಮುಚ್ಚಿ ಹಾಕು.!?*

ವರದಿ: ಪ್ರಕಾಶ ಮಂದಾರ.

ಹರಿಹರ:- ಸರಕಾರಿ ಆಡಳಿತದಲ್ಲಿ ಪಾರದರ್ಶಕತೆ ತರುವ ಸದುದ್ದೇಶದಿಂದ ಹಾಗೂ ಜನ ಸಾಮಾನ್ಯರಿಗೆ ಸರಕಾರಿ ಕೆಲಸಗಳು ಸುಲಭವಾಗಿ ಆಗುವಂತಾಗಲಿ ಎಂಬ ಉದ್ದೇಶದಿಂದ 2005 ರಲ್ಲಿ ಅಂದಿನ ಕೇಂದ್ರ ಸರಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು .

ಪ್ರತಿ ಸರ್ಕಾರಿ ಕಚೇರಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ”ಮಾಹಿತಿ ಹಕ್ಕು” ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವಂತೆ ಅಂದಿನ ಕೇಂದ್ರ ಸರ್ಕಾರವು ಪ್ರತಿ ಸರ್ಕಾರಿ ಕಚೇರಿಯ ಇಲಾಖೆಯ ಅಧಿಕಾರಿಗಳಿಗೆ ಆದೇಶವನ್ನು ಹೊರಡಿಸಿತ್ತು .

ಸರ್ಕಾರದ ಆದೇಶ, ಕಾನೂನುಗಳನ್ನು ಕೆಲವು ಸರ್ಕಾರಿ ಕಚೇರಿಯ ಈ ದಪ್ಪ ಚರ್ಮದ,ಮಂದ ಬುದ್ಧಿಯ,ದುರಂಕಾರದ ಅಧಿಕಾರಿಗಳು ಮಾತ್ರ ಪಾಲನೆ ಮಾಡುತ್ತಿಲ್ಲ ಎನ್ನುವುದು ದುರದೃಷ್ಟಕರ ಸಂಗತಿಯಾಗಿದೆ .

ಹರಿಹರ ತಾಲ್ಲೂಕಿನ ಆಡಳಿತದ ಶಕ್ತಿಕೇಂದ್ರ ಮಿನಿ ವಿಧಾನ ಸೌಧ (ತಾಲ್ಲೂಕು ಕಚೇರಿ) ಇದಕ್ಕೆ ತಾಜಾ ಉದಾಹರಣೆಯಾಗಿದೆ.

ಸರಿ ಸುಮಾರು ಮುವತ್ತು ಎರಡು ಇಲಾಖೆಗಳನ್ನು ನಿಯಂತ್ರಿಸುವ ತಾಲ್ಲೂಕು ಕಚೇರಿಯಲ್ಲಿ “ಮಾಹಿತಿ ಹಕ್ಕು” ನಾಮಫಲಕ ಇಲ್ಲದಿರುವುದು ಅಧಿಕಾರಿಗಳ ಕಾರ್ಯನಿರ್ವಹಣೆಯ ಪ್ರಾಮಾಣಿಕತೆಯ ಪ್ರಶ್ನೆ ಮಾಡುವಂತಿದೆ .

ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಮಾಹಿತಿ ಹಕ್ಕು ನಾಮಫಲಕ ಅಳವಡಿಸದೇ ಇರುವುದನ್ನು ಗಮನಿಸಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮದಲ್ಲಿ ವರದಿಯನ್ನು ಪ್ರಸಾರ ಮಾಡಲಾಯಿತು .ಆದರೆ ಈ ದಪ್ಪ ಚರ್ಮದ ಸೋಮಾರಿ ಅಧಿಕಾರಿಗಳ ಬೇಜವಾಬ್ದಾರಿತನದ ಅಧಿಕಾರಿಗಳಿಂದ ಇಂದಿಗೂ ಕಚೇರಿಯ ಮುಂಭಾಗದಲ್ಲಿ “ಮಾಹಿತಿ ಹಕ್ಕು” ನಾಮಫಲಕ ಅಳವಡಿಸಿಲ್ಲ .

ತಾಲ್ಲೂಕು ಕಚೇರಿಯಲ್ಲಿ ಇಂದಿಗೂ ಮಾಹಿತಿ ಹಕ್ಕು ನಾಮಫಲಕ ಅಳವಡಿಸದೇ ಇರುವುದನ್ನು ಖಂಡಿಸಿ ಡಿಎಸ್ಎಸ್ ತಾಲ್ಲೂಕು ಸಂಚಾಲಕರಾದ ಆರ್ ಶೀನಿವಾಸ್ ಇವರು ತಾಲ್ಲೂಕು ಕಚೇರಿಯ ದಂಡಾಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ತಾಲೂಕು ದಂಡಾಧಿಕಾರಿಗಳು ಉತ್ತರ ನೀಡದೆ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು.

ನಂತರ ತಮ್ಮ ಪತ್ರಿಕಾ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಈ ಹಿಂದೆ ಕಚೇರಿಯಲ್ಲಿ ಮಾಹಿತಿ ಹಕ್ಕು ನಾಮಫಲಕ ಅಳವಡಿಸಿದ್ದರೆ ಎಂಬುದನ್ನು ಮಾಹಿತಿ ಕೇಳಿ ಪಡೆದು ತದನಂತರ ಅಳವಡಿಸುತ್ತೇನೆ ಎಂಬ ಹಾರಿಕೆಯ ಉತ್ತರ ನೀಡಿದರು .

ತಾಲ್ಲೂಕು ದಂಡಾಧೀಕಾರಿಗಳೇ ಹಿಂದೆ “ಮಾಹಿತಿ ಹಕ್ಕು” ನಾಮಫಲಕ ಅಳವಡಿಸಿದ್ದರೂ, ಇಲ್ಲವೋ ಗೊತ್ತಿಲ್ಲ .ಆದರೆ ಕೇಂದ್ರ ಸರ್ಕಾರದ ಆದೇಶದಂತೆ ಪ್ರತಿ ಸರ್ಕಾರಿ ಕಚೇರಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಮಾಹಿತಿ ಹಕ್ಕು ನಾಮಫಲಕ ಅಳವಡಿಸಬೇಕು ಎಂಬ ಪರಿಜ್ಞಾನ ನಿಮಗೆ ಇಲ್ಲವೇ.?ಇದ್ದರೂ ಈ ರೀತಿಯ ಉದಾಸೀನದ ಮಾತುಗಳನ್ನು ಏಕೆ ಆಡುತ್ತೀರಾ .?ಜನಸಾಮಾನ್ಯರಿಗೆ ಸರ್ಕಾರಿ ಕಚೇರಿಯಲ್ಲಿ ಪಾರದರ್ಶಕತೆಯ ಆಡಳಿತ ತರುವ ಉದ್ದೇಶದಿಂದ ತಂದ ಈ ಕಾಯ್ದೆಯನ್ನು ಮುಚ್ಚಿ ಹಾಕುವ ಪ್ರಯತ್ನ ಏಕೆ ನಡೆಸುತ್ತಿದ್ದೀರಿ .?ನಾಮಫಲಕ ಅಳವಡಿಸಿದ್ದೇ ಆದರೆ ಸಾರ್ವಜನಿಕರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳಿಬಿಟ್ಟರೆ ಎಂಬ ಭಯವೇ .?ಅಥವಾ ನಿಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಬಣ್ಣ ಬಯಲಾಗುತ್ತದೆ ಎಂಬ ಆತಂಕವೇ .?ಏನೇ ಹೇಳಿ ಜವಾಬ್ದಾರಿ ಸ್ಥಾನದಲ್ಲಿರುವ ಒಬ್ಬ ಅಧಿಕಾರಿಗಳು ಆಡುವ ಮಾತೇ .?ಮಾನ್ಯ ಜಿಲ್ಲಾಧಿಕಾರಿಗಳೇ ತಾಲ್ಲೂಕು ದಂಡಾಧಿಕಾರಿಗಳ ಕಾರ್ಯವನ್ನು ಮೆಚ್ಚಿ ಪ್ರಶಸ್ತಿಯನ್ನು ನೀಡಿದ್ದೀರಿ. ಆದರೆ ಅದೇ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಮಾಹಿತಿ ಹಕ್ಕು ನಾಮಫಲಕ ಅಳವಡಿಸದೇ ಉದಾಸೀನ ತೋರುತ್ತಿದ್ದಾರೆ ಇವರಿಗೆ ಈಗ ಯಾವ ಪ್ರಶಸ್ತಿ ನೀಡುತ್ತೀರಾ.?ಎಂದು ನಿಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ ತಾಲ್ಲೂಕಿನ ಸಾರ್ವಜನಿಕರು.

ಹರಿಹರ ತಾಲ್ಲೂಕು ಕಚೇರಿಯಲ್ಲಿ ಇನ್ನು ಒಂದು ವಾರದಲ್ಲಿ ಮಾಹಿತಿ ಹಕ್ಕು ನಾಮಫಲಕ ಅಳವಡಿಸಬೇಕು ಇಲ್ಲವಾದರೆ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ತಾಲ್ಲೂಕು ಆಡಳಿತದ ಉದಾಸೀನತೆಯನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಆರ್ ಶ್ರೀನಿವಾಸ್ ಅವರು ಎಚ್ಚರಿಕೆ ನೀಡಿದ್ದಾರೆ .

ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅನೇಕ ಕಾಯ್ದೆ ಕಾನೂನುಗಳನ್ನು ಆಗಿಂದಾಗೆ ಜಾರಿಗೆ ತರುತ್ತಾರೆ .ಆದರೆ ಅಧಿಕಾರಿಗಳ ಬೇಜವಾಬ್ದಾರಿತನ, ನಿರ್ಲಕ್ಷ್ಯತನದಿಂದ ಸರ್ಕಾರದ ಕಾಯ್ದೆ ಕಾನೂನುಗಳನ್ನು ಹಳ್ಳ ಹಿಡಿಯುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ .ಇದು ನಮ್ಮ ಭವ್ಯ ಭಾರತದ ಪ್ರಜಾತಂತ್ರ ವ್ಯವಸ್ಥೆಯ ಅಧಿಕಾರಿಗಳ ಕರ್ತವ್ಯ ನಿಷ್ಠೆಯು ಜನಸಾಮಾನ್ಯರಿಗೆ ಎಷ್ಟರ ಮಟ್ಟಿಗೆ ತಲುಪುತ್ತದೆ ಎಂಬುದಕ್ಕೆ ಹರಿಹರದ ತಾಲೂಕು ಕಚೇರಿಯೇ ತಾಜಾ ಉದಾಹರಣೆಯಾಗಿ ಉಳಿದಿದೆ .

ಇನ್ನು ಮುಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕಚೇರಿಯ ಮುಂಭಾಗದಲ್ಲಿ ಮಾಹಿತಿ ಹಕ್ಕು ನಾಮಫಲಕ ಅಳವಡಿಸುವಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಅಥವಾ ಈ ಹಿಂದಿನಂತೆ ಉದಾಸೀನದ ಮಾತುಗಳಿಂದ ಬೇಜವಾಬ್ದಾರಿತನ ತೋರುತ್ತಾರೆ ಕಾದು ನೋಡಬೇಕಾಗಿದೆ.

Be the first to comment

Leave a Reply

Your email address will not be published.


*