ಬಾಗಲಕೋಟೆ: ಪ್ರವಾಹದಿಂದ ಬಾಧಿತಗೊಳಗಾಗುವ ಜಿಲ್ಲೆಯ ಬಾದಾಮಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೋಮವಾರ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು.
ನವಿಲುತೀರ್ಥ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಲಪ್ರಭಾ ನದಿಗೆ 24 ಕ್ಯೂಸೆಕ್ಸ್ ನೀರು ಹರಿದು ಬಿಡುತ್ತಿರುವದರಿಂದ ಬಾದಾಮಿ ತಾಲೂಕಿನ ಗೋವಿನಕೊಪ್ಪ, ಪಟ್ಟದಕಲ್ಲ, ಚೊಳಚಗುಡ್ಡ, ಜಕನೂರ, ಬೂದಿಹಾಳ, ನೀರಲಗಿ, ತನ್ನಿಹಾಳ, ಕಾಕರಕಿ, ಮುಮರಡ್ಡಿಕೊಪ್ಪ, ಖ್ಯಾಡ, ಮನ್ನಿಕೇರಿ ಸೇರಿದಂತೆ 34 ಗ್ರಾಮಗಳಿಗೆ ಪ್ರವಾಹ ಬೀತಿ ಉಂಟಾಗುವ ಸಾಧ್ಯತೆ ಇದ್ದು, ಗ್ರಾಮದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಬಳಿ ಇರುವ ಸೇತುವೆಗೆ ಭೇಟಿ ನೀಡಿ ನೀರಿ ಪ್ರಮಾಣವನ್ನು ವೀಕ್ಷಿಸಿದರು. ನಂತರ ಗೋವಿನಕೊಪ್ಪ ಗ್ರಾಮದ ಬಳಿ ಇರುವ ಹಳೆಯ ಸೇತುವೆ ಜಲಾವೃತಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಮುಂಜಾಗ್ರತಾ ಕ್ರಮ ಹಾಗೂ ಗ್ರಾಮದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಭೇಟಿ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಬಾದಾಮಿ ತಹಶೀಲ್ದಾರ ಇಂಗಳೆ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
Be the first to comment