ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ತಾಲೂಕಿನಲ್ಲಿ ಅನ್ಯಾಯಕ್ಕೆ ನಾನು ಯಾವುದೇ ಅವಕಾಶ ಕೊಡುವುದಿಲ್ಲ. ಅಲ್ಲದೇ ಪ್ರಜಾಪ್ರಭುತ್ವದಲ್ಲಿ ಅನ್ಯಾಕ್ಕೆ ಸಿದಗು ಎಂದು ಮೊದಲೇ ಹೇಳಿದ್ದೆ. ಅದೇ ರೀತಿಯಲ್ಲಿಯೇ ನ್ಯಾಯಕ್ಕೆ ಜಯ ಸಿಕ್ಕಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ತಾಪಂ ಸಭಾ ಭವನದಲ್ಲಿ ಸೋಮವಾರ ನಡೆದ ತಾಪಂ ನೂತನ ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ್ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ತಾಪಂ ಅಧ್ಯಕ್ಷರ ಚುನಾವಣೆಯಲ್ಲಿ ಏನೇನು ನಡೆದಿದೆ ಅನ್ನೋದು ಜನಕ್ಕೆ ಗೊತ್ತಿದೆ. ಬಿಜೆಪಿಯ ಒಬ್ಬ ಸದಸ್ಯೆಯನ್ನು ಕಾಂಗ್ರೆಸ್‌ನವರು ಕಿಡ್ನಾಪ್ ಮಾಡಿದರೂ ಸತ್ಯಕ್ಕೆ, ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದು ಆವತ್ತೇ ಹೇಳಿದ್ದೆ. ಅದೀಗ ಸತ್ಯವಾಗಿದೆ. ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ತಮ್ಮ ಯಜಮಾನರು ಇನಕಂ ಟ್ಯಾಕ್ಸ್ ಅಸೆಸ್ಸಿ ಇದ್ದಾರೆ ಎಂದು ಬಾಂಡ್ ಪೇಪರ್ ಮೇಲೆ ನೋಟರಿ ಮಾಡಿಸಿ ಕೊಟ್ಟಿದ್ದಾರೆ. ಇಲ್ಲಿ ಪ್ರಜಾಪ್ರಭುತ್ವದ ಕೊಲೆ ಮಾಡ್ತಿರೋರು ಯಾರು, ಕಾನೂನನ್ನ ಮೀರಿ ಕೆಲಸ ಮಾಡ್ತಿರೋರ್‍ಯಾರು ಅನ್ನೋದನ್ನ ಜನ ತೀರ್ಮಾನಿಸಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿಗೆ ೩ಬಿ ಜಾತಿ ಪ್ರಮಾಣ ಪತ್ರ ಕೊಡಲು ಬರದಿದ್ದರೂ ಕಾನೂನು ಬಾಹಿರವಾಗಿ, ಒತ್ತಡ ಹಾಕಿಸಿ ಸರ್ಟಿಫಿಕೇಟ್ ಕೊಡಿಸಿದ್ದಾರೆ. ಇದು ಗಮನಕ್ಕೆ ಬಂದಾಗ ತಕರಾರು ಸಲ್ಲಿಸಿದ್ದರಿಂದ ವಿಚಾರಣೆ ನಡೆದು ರದ್ದಾಗಿತ್ತು. ಅವರು ಎಸಿ ಎದುರು ಅಪೀಲ್ ಹೋದಾಗ ಅಲ್ಲೂ ರದ್ದಾಯಿತು. ಮುಂದೆ ಇವರಿಗೆ ಕೋರ್ಟಗೆ ಹೋಗಲು ಅವಕಾಶ ಇದೆ. ತಮ್ಮ ದಾಖಲೆ ಸರಿ ಇದ್ದರೆ ಇವರು ಕೋರ್ಟಗೆ ಹೋಗಿ ಹೋರಾಟ ನಡೆಸಲಿ. ಅದು ಬಿಟ್ಟು ಕುತಂತ್ರ ಮಾಡುವುದು, ತಹಶೀಲ್ದಾರ್ ವಿರುದ್ಧ ಗೂಬೆ ಕೂರಿಸುವುದು, ಪ್ರಜಾಪ್ರಭುತ್ವದ ಕೊಲೆ ಅನ್ನುವುದು, ಬೇರೆಯವರಿಂದ ಹೇಳಿಕೆ ಕೊಡಿಸುವುದು ಇವೆಲ್ಲ ಕುತಂತ್ರದ ಭಾಗಗಳೇ ಹೊರತು ಬೇರೇನೂ ಅಲ್ಲ ಎಂದರು.
ಈ ವಿಷಯದಲ್ಲಿ ಜಾತಿ ಬಣ್ಣ ಬಳಿಯಲು ನೋಡುತ್ತಿದ್ದಾರೆ. ನಾನೆಂದೂ ಜೀವನದಲ್ಲಿ ಜಾತಿ ರಾಜಕಾರಣ ಮಾಡಿಲ್ಲ. ನನಗೆ ಜಾತಿ ಇಲ್ಲ. ಎಲ್ಲರಿಗೂ ಮುಕ್ತ ಅವಕಾಶ ಕೊಟ್ಟಿದ್ದೇನೆ. ಜಾತಿ ಬಣ್ಣ ಬಳಿಯುವ ಇಂಥವರಿಂದ ಏನೂ ಸಾಧನೆ ಮಾಡಲಾಗೊಲ್ಲ. ಕಾನೂನೂಬದ್ದವಾಗಿ ಅಧಿಕಾರ ಯಾರಿಗೆ ಸಿಗಬೇಕಿತ್ತೋ ಅವರಿಗೆ ಸಿಕ್ಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯವನ್ನು ಮುಂದಿಟ್ಟುಕೊಂಡು ಜನರ ಎದುರು ಹೋರಾಟ ಮಾಡಿದರೆ ಅದಕ್ಕೆ ಮನ್ನಣೆ ಇರುತ್ತದೆ. ಅಸತ್ಯವನ್ನು ಮುಂದಿಟ್ಟುಕೊಂಡು ಹೋದರೆ ಜಯ ಸಿಗೊಲ್ಲ. ನಿಜವಾದ ಪ್ರಜಾಪ್ರಭುತ್ವದ ಆಡಳಿತ ಈ ತಾಲೂಕಲ್ಲಿ ೨೦೧೮ರಿಂದ ಪ್ರಾರಂಭಗೊಂಡಿದೆ. ಇದು ಸಹಿಸಲಾಗದ ಕೆಲವರು ಪ್ರಜಾಪ್ರಭುತ್ವದ ಕೊಲೆ ಅಂತಿದ್ದಾರೆ ಎಂದು ಲೇವಡಿ ಮಾಡಿದರು.
ತಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ತಹಶೀಲ್ದಾರ್ ಜಿ.ಎಸ್.ಮಳಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪುರೆ ವೇದಿಕೆಯಲ್ಲಿದ್ದರು. ಶಿವನಗೌಡ ಮುದ್ದೇಬಿಹಾಳ ಸೇರಿದಂತೆ ತಾಪಂ ಸದಸ್ಯರು, ಧುರೀಣರಾದ ಎಸ್.ಎಚ್.ಲೊಟಗೇರಿ, ಬಸವರಾಜ ಗುಳಬಾಳ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಪಾವಡೆಪ್ಪಗೌಡ ಹವಾಲ್ದಾರ್, ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಪಿಡಿಓಗಳು, ತಾಪಂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ಇದೇ ವೇಳೆ ಹಂಗಾಮಿ ಅಧ್ಯಕ್ಷರಾಗಿದ್ದ ಮಂಜುನಾಥಗೌಡರು ಅಧಿಕಾರವನ್ನು ಲಕ್ಷ್ಮೀಬಾಯಿಗೆ ಹಸ್ತಾಂತರಿಸಿದರು. ಸಮಾರಂಭದ ನಂತರ ನೂತನ ಅಧ್ಯಕ್ಷರು ತಮ್ಮ ಕೊಠಡಿಯಲ್ಲಿನ ಆಸನ ಅಲಂಕರಿಸಿ ಅಧಿಕಾರ ಪ್ರಾರಂಭಿಸಿದರು.
Be the first to comment