ಸರಕಾರದ ಸೌಲಭ್ಯ ಕಾರ್ಮಿಕರಿಗೆ ತಲುಪಿಸುವಲ್ಲಿ ಅಧಿಕಾರಿಗಳ ಇಚ್ಛಾಶಕ್ತಿ ಅವಶ್ಯಕ : ಸಚಿವ ಹೆಬ್ಬಾರ

ವರದಿ: ಶರಣಪ್ಪ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:

ಕೋವಿಡ್ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸರಕಾರದ ಯೋಜನೆಗಳು ತಲುಪಿಸುವ ಕಾರ್ಯದಲ್ಲಿ ಅಧಿಕಾರಿಗಳು ಇಚ್ಚಾಶಕ್ತಿಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವರಾದ ಅರಬೈಲ್ ಹೆಬ್ಬಾರ ತಿಳಿಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿಂದು ಜರುಗಿದ ಕಾರ್ಮಿಕ ಮತ್ತು ಸಕ್ಕರೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋವಿಡ್ ಹಿನ್ನಲೆಯಲ್ಲಿ ಲಾಕ್‍ಡೌನ್‍ದಿಂದಾಗಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಅವರ ಕುಟುಂಬ ಪೋಷಣೆಗೆ ಸರಕಾರ ಕಟ್ಟಡ ಕಾರ್ಮಿಕರು, ಅಗಸರು, ಕ್ಷೌರಿಕರಿಗೆ ಒಂದು ಬಾರಿ 5 ಸಾವಿರ ರೂ.ಗಳ ಪರಿಹಾರ ನೀಡಲು ನಿರ್ಧರಿಸಿದ್ದು, ಈ ಸೌಲಭ್ಯ ತಲುಪಿಸುವಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಲು ಸೂಚಿಸಿದರು.

ಬಾಗಲಕೋಟೆಯಲ್ಲಿ ಶೇ.92 ರಷ್ಟು ಈ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ಷೌರಿಕ ಕೆಲಸ ಮಾಡುತ್ತಿರುವರನ್ನು ಗುರುತಿಸಿ ಆಯಾ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ದೃಢೀಕರಣ ಪತ್ರ ನೀಡಬೇಕು. ಆನ್‍ನಲ್ಲಿ ಅರ್ಜಿಗಳು ಅಪ್ಲೋಡ್ ಆಗದ ಕಾರಣ ಅರ್ಜಿ ಸಲ್ಲಿಸುವ ಅವಧಿಯನ್ನು ಆಗಸ್ಟ 15 ವರೆಗೆ ವಿಸ್ತರಿಸಲಾಗಿದೆ. ಅಗಸರು ಮತ್ತು ಕ್ಷೌರಿಕರಿಗೆ 5 ಸಾವಿರ ಪರಿಹಾರ ನೀಡಲು ಸರಕಾರ 165 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಈಗಾಗಲೇ ರಾಜ್ಯದಲ್ಲಿ 48,500 ಜನ ಫಲಾನುಭವಿಗಳಿಗೆ ಕೋಟ್ಯಾಂತರ ರೂ.ಗಳ ಪ್ರೋತ್ಸಾಹಧನ ನೀಡಲಾಗಿದೆ ಎಂದರು.

ಬಾಗಲಕೋಟೆಯಲ್ಲಿ ರನ್ನ ಮತ್ತು ಸಾವರಿನ್ ಸಕ್ಕರೆ ಕಾರ್ಖಾನೆಗಳು ಹೊರತು ಪಡಿಸಿ ಉಳಿದೆಲ್ಲ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿ ಮೊತ್ತದಲ್ಲಿ ಶೇ.98 ರಷ್ಟು ಪಾವತಿ ಮಾಡಿದ್ದು, ಸಾವರಿನ್ ಸುಗರ್ಸ್ ಹರಾಜು ಪ್ರಕ್ರಿಯೆ ನಡೆದಿದ್ದು, ಕಾರ್ಖಾನೆಗಳಲ್ಲಿ ದುಡಿದ ಕಾರ್ಮಿಕರಿಗೆ ಬಾಕಿ ವೇತನ ಪಾವತಿಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳು ದಿನವಹಿ ಕಬ್ಬು ನುರಿಸುವ ಸಾಮರ್ಥ, ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿ ಮೊತ್ತಗಳ ವಿವರಗಳನ್ನು ಆಹಾರ ಇಲಾಖೆಯ ಉಪನಿರ್ದಶಕ ಶ್ರೀಶೈಲ ಕಂಕಣವಾಡಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಉಪ ಕಾರ್ಮಿಕ ಆಯುಕ್ತ ವೆಂಟಕೇಶ ಸಿಂದಿಹಟ್ಟಿ, ಕಾರ್ಮಿಕ ನಿರೀಕ್ಷಕ ಅಶೋಕ ಒಡೆಯರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕರು, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


ಜಿಲ್ಲೆಗೊಂದು ವಿಮಾ ಆಸ್ಪತ್ರೆ

ಪ್ರತಿ ಜಿಲ್ಲೆಗೊಂದು ಇಎಸ್‍ಐ ಆಸ್ಪತ್ರೆಯನ್ನು ತೆರೆಯಲಾಗುತ್ತಿದ್ದು, ಅದಕ್ಕೆ ಬೇಕಾದ ಜಾಗವನ್ನು ನೀಡಿದಲ್ಲಿ ಜಮೀನು ಖರೀದಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು. ಬಾಗಲಕೋಟೆಯ ವಿದ್ಯಾಗಿರಿಯ 63ಎನ ಬೃಂದಾವನ ಸೆಕ್ಟರನಲ್ಲಿ ಬಾಡಿಗೆ ಕಟ್ಟಡದಲ್ಲಿ ಕರ್ನಾಟಕ ರಾಜ್ಯ ವಿಮಾ ಆಸ್ಪತ್ರೆ ನಡೆಯುತ್ತಿದ್ದು, ಸ್ವಂತ ಕಟ್ಟಡಕ್ಕೆ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಅದಕ್ಕೆ ಬೇಕಾಗುವ ಅನುದಾನ ಬಿಡುಗಡೆ ಮಾಡಲಾಗುವುದು.

ಕಾರ್ಮಿಕ ಮತ್ತು ಸಕ್ಕರೆ ಸಚಿವ ಅರಬೈಲ್ ಹೆಬ್ಬಾರ 


ವಿವಿಧ ಸೌಲಭ್ಯಗಳ ಮಂಜೂರಾತಿ ಆದೇಶ ಪತ್ರ, ಬಾಂಡ್ ವಿತರಣೆ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ವಿವಿಧ ಸೌಲಭ್ಯಗಳ ಅಡಿ ಅಪಘಾತ ಮರಣ, ಅಂತ್ಯ ಸಂಸ್ಕಾರ, ಮದುವೆ, ಹೆರಿಗೆ, ಶೈಕ್ಷಣಿಕ ಸಹಾಯಧನ ಯೋಜನೆಗಳ ಸಹಾಯಧನದ ಚೆಕ್, ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿ ಯೋಜನೆಗಳ ಮಂಜೂರಾತಿ ಆದೇಶ ಪತ್ರ ಹಾಗೂ ಬಾಂಡ್‍ಗಳನ್ನು ಕಾರ್ಮಿಕ ಮತ್ತು ಸಕ್ಕರೆ ಸಚಿವ ಅರಬೈಲ್ ಹೆಬ್ಬಾರ ವಿತರಿಸಿದರು.

Be the first to comment

Leave a Reply

Your email address will not be published.


*