ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ರಾಜ್ಯ ಸರಕಾರ ಚಾಲಕರಿಗಾಗಿ 5 ಸಾವಿರ ರೂಪಾಯಿ ಸಹಾಯಧನದಲ್ಲಿ ತಾರತಮ್ಯ ಮಾಡುತ್ತಿದ್ದು ಕೇವಲ ಕ್ಯಾಬ್ ಚಾಲಕರಿಗೆ ನೀಡುತ್ತಿರುವ ಸಹಾಯಧನವನ್ನು ಬ್ಯಾಡ್ಜ್ ಪರವಾಣಿಗೆ ಹೊಂದಿದ ಎಲ್ಲ ಚಾಲಕರಿಗೂ ನೀಡುವಂತೆ ಮಾಡಬೇಕು ಎಂದು ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಜಗದೇವರಾವ್ ಚಲವಾದಿ ಆಗ್ರಹಿಸಿದ್ದಾರೆ.
ಚಾಲಕರು ಕೊರೊನಾ ಲಾಕಡೌನನಲ್ಲಿ ಕೆಲಸವಿಲ್ಲದೇ ಪರದಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕೇವಲ ಕ್ಯಾಬ್ ಚಾಲಕರಿಗೆ ಮಾತ್ರ ಸರಕಾರದ ಸಹಾಯಧನ ದೊರಕುವಂತೆ ಮಾಡಿ ಬ್ಯಾಡ್ಜ್ ಪರವಾಣಿಗೆ ಹೊಂದಿರುವ ಚಾಲಕರ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಇದರಿಂದ ಕ್ಯಾಬ್ ಹಾಗೂ ಬ್ಯಾಡ್ಜ್ ಪರವಾಣಿಗೆ ಹೊಂದಿದವರಿಗೆ ಸ್ಪರಸ್ಪರ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕ್ಯಾಬ್ ಚಾಲಕರು ಬೆಂಗಳೂರಲ್ಲೆ ಹೆಚ್ಚು:
ಸರಕಾರ ನೀಡುತ್ತಿರುವ ಚಾಲಕರ ಸಹಾಯಧನ ಕೇವಲ ಬೆಂಗಳೂರಿಗೆ ಮೀಸಲಾಗಿದೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಕ್ಯಾಬ್ ಕಂಪನಿಗಳಾದ ಉಬರ್, ಓಲಾ ಸೇರಿದಂತೆ ಇನ್ನಿತರ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರಿಗೆ ಮಾತ್ರ ನೀಡಲಾಗುತ್ತಿದೆ. ಆದರೆ ರಾಜ್ಯ ಇತರೆ ಜಿಲ್ಲೆಗಳಲ್ಲಿ ಖಾಸಗಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ ಚಾಲಕರಿಗೆ ನೀಡುತ್ತಿಲ್ಲ. ಕೊರೊನಾದಿಂದ ಕೇವಲ ಕ್ಯಾಬ್‌ಗಳಲ್ಲಿ ಖಾಸಗಿಯಾಗಿ ದುಡಿಮೆ ಮಾಡುತ್ತಿರುವ ಮತ್ತು ಬ್ಯಾಡ್ಜ್ ಪರವಾಣಿಗೆ ಹೊಂದಿದ ಚಾಲಕರೂ ಇರುವುದು ಸರಕಾರದ ಕಣ್ಣಿಗೆ ಕಾಣುತ್ತಿಲ್ಲ. ಇದರಿಂದ ಬೆಂಗಳೂರಿನಲ್ಲಿರುವ ಕ್ಯಾಬ್ ಚಾಲಕರೇ ಸರಕಾರದ ಯೋಜನೆಗೆ ಬದ್ಧರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸ್ಥಳೀಯ ಶಾಸಕರು ಗಮನ ಹರಿಸಲಿ:
ಕ್ಯಾಬ್ ಚಾಲಕರಷ್ಟೆ ಖಾಸಗಿಯಾಗಿ ದುಡಿಮೆ ಮಾಡುತ್ತಿರುವ ಬ್ಯಾಡ್ಜ್ ಪರವಾಣಿಗೆ ಹೊಂದಿರುವ ಕಾರ್ ಚಾಲಕರಿಗೂ ಸರಕಾರದ ಯೋಜನೆ ದೊರಕುವಂತಾಗಬೇಕು. ಕಳೆದ ೫೦ ದಿನಗಳ ಕಾಲ ಯಾವುದೇ ಕಾರ್ ಬಾಡಿಗೆ ಬಾರದೇ ಮನೆಯಲ್ಲಿಯೇ ಇದ್ದು ಕೈಯಲ್ಲಿರುವ ಬಿಡಿಗಾಸು ಖಾಲಿಯಾಗಿವೆ. ಸರಕಾರ ಚಾಲಕರಿಗೆ ಯೋಜನೆ ಜಾರಿಗೆ ತಂದಿರುವ ಸುದ್ದಿ ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಲು ಹೋದರೆ ಅಲ್ಲಿ ಕ್ಯಾಬ್ ಪರವಾಣಿಗೆ ನಂಬರ್ ಒದಗಿಸುವಂತೆ ಕೋರಲಾಗುತ್ತಿದೆ. ಇದರ ಬಗ್ಗೆ ಸ್ಥಳೀಯ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಗಮನ ಹರಿಸಿ ಉಪ ಮುಖ್ಯಮಂತ್ರಿ ಸವದಿ ಅವರಿಗೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಸಿ ಬ್ಯಾಡ್ಜ್ ಪರವಾಣಿಗೆ ಹೊಂದಿರುವ ಚಾಲಕರಿಗೂ ಸರಕಾರದ ಯೋಜನೆ ಮುಟ್ಟುವಂತೆ ಮಾಡಬೇಕು ಎಂದು ಜಗದೇವರಾವ್ ಅವರು ಮನವಿ ಮಾಡಿದ್ದಾರೆ.
Be the first to comment