ಮುಂಗಾರು ಬಿತ್ತನೆಗೆ ಸಿದ್ದತೆ : 2.65 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಜೀಲ್ಲಾ ಸುದ್ದಿಗಳು

ಬಾಗಲಕೋಟೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು, ಈ ಹಂಗಾಮಿನಲ್ಲಿ 2.65 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ 2.65 ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಏಕದಳ ಧಾನ್ಯಗಳ 65,400 ಹೆಕ್ಟೇರ್, ದ್ವಿದಳ ಧಾನ್ಯಗಳ 61,800 ಹೆಕ್ಟೇರ್, ಎಣ್ಣೆ ಕಾಳುಗಳು 32,150 ಹೆಕ್ಟೇರ್, ವಾಣಿಜ್ಯ ಬೆಳೆಗಳು 1,05,650 ಹೆಕ್ಟೇರ್ ಗುರಿ ಹಾಕಿಕೊಳ್ಳಲಾಗಿದೆ. ಭೂಮಿಯ ಗುಣಧರ್ಮ, ಮಳೆ ಬೀಳುವ ಪ್ರಮಾಣ, ಮಣ್ಣಿನ ತೇವಾಂಶದ ಅನುಗುಣವಾಗಿ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವುದು. ಹವಾಮಾನಕ್ಕೆ ತಕ್ಕಂತೆ ಬೆಳೆಗಳನ್ನು ಬದಲಿಸಬೇಕು. ಒಂದೇ ಬೆಳೆ ಬೆಳೆಯುವುದಕ್ಕಿಂತ ಬಹು ಬೆಳೆ ಅಥವಾ ಮಿಶ್ರ ಬೆಳೆ ಬೆಳೆಯುವುದು ಉತ್ತಮವಾಗಿರುತ್ತದೆ. ಭೂಮಿಯಲ್ಲಿ ಸಾಕಷ್ಟು ತೇವಾಂಶವಿರುವುದನ್ನು ಗಮನಿಸಿ ಬಿತ್ತನೆ ಮಾಡಿದರೆ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿನ ಬೆಳೆಗಳಾದ ಸಜ್ಜೆ, ಮೆಕ್ಕೆ ಜೋಳ, ತೋಗರಿ. ಹೆಸರು, ಉದ್ದು, ನೆಲಗಡಲೆ, ಸೂರ್ಯಕಾಂತಿ, ಬೆಳೆಗಳ ತಳಿಗಳ ಬೀಜಗಳನ್ನು ರಿಯಾಯತಿ ದರದಲ್ಲಿ ವಿತರಿಸಲು ದಾಸ್ತಾನು ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಬೀಜ ವಿತರಣೆಗಾಗಿ 18 ರೈತ ಸಂಪರ್ಕ ಕೇಂದ್ರ, 1 ಹೆಚ್ಚುವರಿ ಹಾಗೂ ಅವಶ್ಯಕತೆಗನುಗುಣವಾಗಿ 29 ಪಿಕೆಪಿಎಸ್‍ಗಳು ಸೇರಿ ಒಟ್ಟಾರೆಯಾಗಿ 48 ಬಿತ್ತನೆ ಬೀಜ ವಿತರಣಾ ಕೇಂದ್ರಗಳ ಮುಖಾಂತರ ಬಿತ್ತನೆ ಬೀಜ ಪಡೆಯಲು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ.

ಪ್ರಮಾಣಿತ ಬಿತ್ತನೆ ಬೀಜ ವಿತರಿಸುವಾಗ ಸ್ವಪರಾಗಸ್ಪರ್ಶಿ ಬೆಳೆಗಳಲ್ಲಿ (ಉದಾ: ತೊಗರಿ, ಹೆಸರು, ಉದ್ದು) ಬೀಜ ಬದಲಾವಣೆ ಅನುಪಾತದನ್ವಯ ಒಮ್ಮೆ ಬಿತ್ತನೆ ಬೀಜಗಳನ್ನು ವಿತರಿಸಿದ ರೈತರಿಗೆ ಮುಂದಿನ 3 ವರ್ಷಗಳ ಬಳಿಕ ಅದೇ ಬೆಳೆ, ತಳಿಗಳ ಬಿತ್ತನೆ ಬೀಜಗಳನ್ನು ವಿತರಿಸಲು ಅವಕಾಶವಿದ್ದು, ರೈತರು ತಾವು ಒಂದು ವೇಳೆ ಸ್ವಪರಾಗಸ್ಪರ್ಶಿ ಪ್ರಮಾಣಿತ ಬಿತ್ತನೆ ಬೀಜಗಳನ್ನು ರಿಯಾಯತಿ ದರದಲ್ಲಿ ಪಡೆದಿದ್ದೇ ಆದಲ್ಲಿ ಮುಂದಿನ ವರ್ಷಗಳಿಗೆ ಬಿತ್ತನೆ ಬೀಜಗಳನ್ನು ಕಾಯ್ದಿಟ್ಟುಕೊಳ್ಳಲು ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಮಾಣಿಕೃತ ಹಾಗೂ ನಿಜ ಚೀಟಿ ಬಿತ್ತನೆ ಬೀಜಗಳನ್ನು ಅಧೀಕೃತ ಮಾರಾಟಗಾರರಿಂದ ಖರೀದಿಸಿ ಅವರಿಂದ ಬಿಲ್ಲು ಪಡೆದು ಅದನ್ನು ಬೆಳೆ ಕಾಟಾವು ಆಗುವವರೆಗೂ ಕಾಯ್ದಿರಿಸಿಕೊಳ್ಳಬೇಕು. ಇದರೊಂದಿಗೆ ಬೀಜದ ಜೊತೆಗಿನ ಚೀಲ ಹಾಗೂ ಲೆಬಲ್ ಕೂಡಾ ಇಟ್ಟುಕೊಳ್ಳುವುದು ಸೂಕ್ತ. ರೈತರು ತಮ್ಮಲ್ಲಿರುವ ಬಿತ್ತನೆ ಬೀಜ ಉಪಯೋಗಿಸಿದಲ್ಲಿ ಬೀಜದ ಮೊಳಕೆ ಪರೀಕ್ಷಿಸಿ ಖಚಿತಪಡಿಸಿಕೊಳ್ಳಬೇಕು. ಬಿತ್ತುವ ಮುನ್ನ ಬೀಜೋಪಚಾರ ಮಾಡಬೇಕು. ಇದಕ್ಕೆ ಬೇಕಾಗುವ ಪರಿಕರಗಳು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುತ್ತವೆ. ಬೀಜೋಪಚಾರ ಮಾಡುವುದರಿಂದ ಮಣ್ಣಿನಲ್ಲಿ ತಗಲುವ ಹಾಗೂ ಬೀಜದಿಂದ ಹರಡುವ ರೋಗಗಳನ್ನು ನಿಯಂತ್ರಿಸಬಹುದು. ಬಿತ್ತುವ 2-3 ವಾರಗಳಿಗೆ ಮುನ್ನವೆ ಕೊಟ್ಟಿಗೆ ಅಥವಾ ಕಾಂಪೊಸ್ಟ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಪರಿಕರಗಳು ರಿಯಾಯತಿ ದರದಲ್ಲಿ ಲಭ್ಯವಿದ್ದು, ಅವುಗಳ ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮುಂಗಾರು ಹಂಗಾಮಿನ ಮೇ 2020 ರವರೆಗೆ ಒಟ್ಟು 26,385 ಟನ್ ರಸಗೊಬ್ಬರ ಹಂಚಿಕೆಯಾಗಿದ್ದು, ಯೂರಿಯಾ-9750 ಟನ್, ಡಿಎಪಿ-9265 ಟನ್, ಕಾಂಪ್ಲೇಕ್ಸ-3300 ಟನ್, ಎಮ್‍ಓಪಿ-3350 ಟನ್, ಎಸ್‍ಎಸ್‍ಪಿ-720 ಟನ್ ಹಂಚಿಕೆಯಾಗಿದ್ದು, ಇದರಲ್ಲಿ 15221 ಟನ್ ಇಲ್ಲಿವರಗೆ ಸರಬರಾಜಾಗಿದ್ದು, ಅವಶ್ಯಕತೆಗನುಗುಣವಾಗಿ ರಸಗೊಬ್ಬರ ಸರಬರಾಜಿಗೆ ಕೃಷಿ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.

ಕೃಷಿ ಇಲಾಖೆಯ ಯಾವುದೇ ಸೌಲಭ್ಯ ಪಡೆಯಲು ರೈತರು ಕೆ-ಕಿಸಾನ್ ತಂತ್ರಾಂಶದಲ್ಲಿ ನೊಂದಣಿ ಮಾಡಿಸಿಕೊಂಡ ನಂತರ 13 ಅಂಕಿಯುಳ್ಳ ಗುರುತಿನ ಸಂಖ್ಯೆಯನ್ನು ಪ್ರತಿ ರೈತರಿಗೆ ನೀಡಲಾಗುವುದು. ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗದ ರೈತರು ಈಗಾಗಲೆ ಕೆ-ಕಿಸಾನ್ ತಂತ್ರಾಶದಲ್ಲಿ ಸಾಮಾನ್ಯ ವರ್ಗದಡಿ ನೊಂದಾಯಿಸಿಕೊಂಡಿದ್ದರೆ ಅಂತಹ ರೈತರು ಜಾತಿ ಪ್ರಮಾಣ ಪತ್ರ ತಂದು ತಿದ್ದುಪಡೆ ಮಾಡಿಕೊಂಡು ಕೃಷಿ ಇಲಾಖೆಯ ಎಲ್ಲ ಯೋಜನೆಗಳ ಸೌಲಭ್ಯ ಪಡೆಯಲು ಚೇತನಾ ಪಾಟೀಲ ಪ್ರಕಟಣೆಯಲ್ಲಿ ಕೋರಿದ್ದಾರೆ.

Be the first to comment

Leave a Reply

Your email address will not be published.


*