ಅಂಬಿಗ ನ್ಯೂಸ್ ಯಾದಗಿರಿ
ನೀರಾವರಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ
ಯಾದಗಿರಿ : ಕೃಷ್ಣಾ ಭಾಗ್ಯ ಜಲನಿಗಮ ಲಿಮಿಟೆಡ್‍ನಲ್ಲಿ ಮಂಜೂರಾದ ನೀರಾವರಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಮತ್ತು ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವಂತೆ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಸೂಚಿಸಿದರು.
ನಾರಾಯಣಪುರ ಬಸವಸಾಗರ ಜಲಾಯಶಯಕ್ಕೆ ಮಂಗಳವಾರ ಭೇಟಿ ನೀಡಿ, ಸ್ಥಳ ಪರಿಶೀಲಿಸಿದ ನಂತರ ನಾರಾಯಣಪುರದ ಪ್ರವಾಸಿ ಮಂದಿರದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರು ಮಾತನಾಡಿದರು.
ಏತ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳುವಾಗ ನೀರಿನ ಹಂಚಿಕೆಗೆ ಒಳಪಟ್ಟಿದ್ದರೆ ಮಾತ್ರ ಕಾಮಗಾರಿ ಕೈಗೆತ್ತಿಕೊಳ್ಳಬೇಕು.
ಬಸವಸಾಗರ ಜಲಾಶಯದ ನೀರಿನ ಲಭ್ಯತೆಗೆ ಅನುಗುಣವಾಗಿ ಹೊಸ ಯೋಜನೆಗಳನ್ನು ರೂಪಿಸಬೇಕು. ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ಗುಣಮಟ್ಟ ಕಾಯ್ದುಕೊಂಡು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ತಾಕೀತು ಮಾಡಿದರು.
ಕೋವಿಡ್-19 ಸಂಬಂಧ ಲಾಕ್‍ಡೌನ್ ವಿಧಿಸಿದರೂ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಕೈಗೊಳ್ಳಬಹುದಾಗಿದೆ.
ನೀರಾವರಿಗೆ ಸಂಬಂಧಪಟ್ಟ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಬೇಕು. ರೈತರ ವಿಷಯದಲ್ಲಿ ನಿರ್ಲಕ್ಷ್ಯ ತಾಳುವ ಅಧಿಕಾರಿಗಳು ಅಥವಾ ಇಂಜಿನೀಯರ್‍ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ನೀರಿನ ಸದ್ಬಳಕೆ ಸಂಬಂಧ ಎಡದಂಡೆ ಕಾಲುವೆಗೆ ಅಳವಡಿಸಿರುವ ಸ್ಕಾಡಾ ಅಟೊಮೇಶನ್ (ಸ್ವಯಂ ಚಾಲಿತ) ಫೇಸ್-1 ಕಾಮಗಾರಿ ಪ್ರಥಮ ಹಂತದಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ. ನೀರು ಪೋಲು ತಡೆಯುವ ಮತ್ತು ಕೊನೆಯಭಾಗದ ರೈತರಿಗೆ ನೀರು ಒದಗಿಸುವ ಈ ಮಾದರಿ ರಾಜ್ಯದ ಎಲ್ಲಾ ಜಲಾನಯನ ಪ್ರದೇಶಗಳಲ್ಲಿ ಅಳವಡಿಸಲು ಚಿಂತನೆ ನಡೆಸಲಾಗುವುದು. ಫೇಸ್-1 ಕಾಮಗಾರಿ ಯಶಸ್ವಿಯನ್ನು ಆಧರಿಸಿ ಪ್ರಗತಿಯಲ್ಲಿರುವ ಫೇಸ್-2 ಕಾಮಗಾರಿಯನ್ನು ಕೂಡ ಪೂರ್ಣಗೊಳಿಸಲು ಅವರು ನಿರ್ದೇಶನ ನೀಡಿದರು.
ನಾರಾಯಣಪುರ ಬಲದಂಡೆ ಕಾಲುವೆಯ 19ನೇ ಕಿ.ಮೀ ನಿಂದ ಉಗಮಗೊಳ್ಳುವ ವಿತರಣಾ ಕಾಲುವೆ 5ಎ ಲಿಂಗಸೂಗೂರು ಮತ್ತು ಮಸ್ಕಿ ಕ್ಷೇತ್ರಗಳಲ್ಲಿ ನೀರಾವರಿಯಿದ ವಂಚಿತವಾಗಿರುವ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ತಾಂತ್ರಿಕ ಸಾಧ್ಯಾಸಾಧ್ಯತೆ ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಿದರು. ರಾಂಪೂರ ಮತ್ತು ನಂದವಾಡಗಿ ಏತ ನೀರಾವರಿ ಕಾಮಗಾರಿಗಳನ್ನು ಕೂಡ ತ್ವರಿತವಾಗಿ ಪೂರ್ಣಗೊಳಿಸಲು ಸಚಿವರು ಸೂಚಿಸಿದರು.
ಇನ್ನು
ಇದೇ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ನರಸಿಂಹ ನಾಯಕ (ರಾಜೂಗೌಡ), ಬಸವನಗೌಡ ದದ್ದಲ, ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್, ಮಾನಪ್ಪ ಡಿ.ವಜ್ಜಲ್ ಅವರು ಉಪಸ್ಥಿತರಿದ್ದರು.
ಸಭೆಯಲ್ಲಿ ನಾರಾಯಣಪುರ ಮುಖ್ಯ ಇಂಜಿನೀಯರ್ ರಂಗರಾಮ್, ಭೀಮರಾಯನಗುಡಿ ಮುಖ್ಯ ಇಂಜಿನೀಯರ್ ಪ್ರದೀಪ್ ಮಿತ್ರಾ ಮಂಜುನಾಥ್, ಸುಪರಿಂಟಿಂಡೆಂಟ್ ಇಂಜಿನೀಯರ್ ಎನ್.ಡಿ. ಪವಾರ್, ಲಕ್ಷ್ಮಣ ನಾಯಕ್, ಜಗದೀಶ್ ಕುಮಾರ ನಾಯಕ್, ಕಾರ್ಯನಿರ್ವಾಹಕ ಇಂಜಿನೀಯರ್ ಶಂಕರ್ ನಾಯ್ಕೋಡಿ, ವೆಂಕಟೇಶಲು, ಕಾರ್ಯನಿರ್ವಾಹಕ ಇಂಜಿನೀಯರ್ ಸುರೇಂದ್ರಬಾಬು, ಎಇಇ ಆರ್.ಎಲ್.ಹಳ್ಳೂರು, ರಾಮಚಂದ್ರ ಸೇರಿದಂತೆ ಇತರರು ಹಾಜರಿದ್ದರು
Be the first to comment