ಜೀಲ್ಲಾ ಸುದ್ದಿಗಳು
#davangerepolice
ದಾವಣಗೆರೆ ಏ.27 )- ದಾವಣಗೆರೆ ಜಿಲ್ಲೆಯು ಇಂದಿನಿಂದ ಹಸಿರು ವಲಯಕ್ಕೆ (ಗ್ರೀನ್ ಝೋನ್) ಸೇರ್ಪಡೆಯಾಗಿದೆ ಎಂದು ತಿಳಿದು ಗ್ರೀನ್ ಝೋನ್‍ನಲ್ಲಿ ನಡೆಸಬಹುದಾದಂತಹ ಆರ್ಥಿಕ ಚಟುವಟಿಕೆಗಳನ್ನು ಸಮರ್ಪಕ ಕ್ರಮಗಳನ್ನು ವಹಿಸುವ ಮೂಲಕ ಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಗ್ರೀನ್ ಸಿಗ್ನಲ್ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಡಿಸಿ, ಎಸ್‍ಪಿ ಮತ್ತು ಸಿಇಓ ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ ಅವರು ದಾವಣಗೆರೆ ಜಿಲ್ಲೆಯಲ್ಲಿ ಕಳೆದ 28 ದಿನಗಳಿಂದ ಯಾವುದೇ ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲದೇ ಜಿಲ್ಲೆ ಪಾಸಿಟಿವ್ ಮುಕ್ತವಾದ ಕಾರಣ ನಿಯಮಾನುಸಾರ ಗ್ರೀನ್ ಝೋನ್‍ನಲ್ಲಿ ಬರುತ್ತದೆ. ಆದ ಕಾರಣ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಣ್ಣಪುಟ್ಟ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವಂತೆ ಹಾಗೂ ಜಿಲ್ಲೆಗೆ ಅವಶ್ಯಕವಾದ ಚಟುವಟಿಕೆಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಆರಂಭಿಸುವಂತೆ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಮಾತನಾಡಿ, ಇಂದು ಜಿಲ್ಲೆಯ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಎಲ್ಲಿಯೂ ಯಾವುದೇ ರೀತಿಯ ತೊಂದರೆ ಇಲ್ಲ. ಜಿಲ್ಲೆಯನ್ನು ಅಧಿಕೃತವಾಗಿ ಗ್ರೀನ್ ಝೋನ್ ಎಂದು ಘೋಷಿಸುವುದು ಬಾಕಿ ಇತ್ತು. ಇದೀಗ ತಾವು ಗ್ರೀನ್ ಝೋನ್ ಆಗಿದೆ ಎಂದು ಘೋಷಿಸಿದ ನಂತರ ಹಂತ ಹಂತವಾಗಿ ಆರ್ಥಿಕ ಚಟುವಟಿಕೆ ಆರಂಭಿಸಲಾಗುವುದು ಎಂದರು.
ಸಂಸದರಾದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ಬಟ್ಟೆ ಮತ್ತು ಬಂಗಾರದ ಅಂಗಡಿಗಳ ಕಾರ್ಯ ಚಟುವಟಿಕೆಗೆ ಅನುವು ಮಾಡಿಕೊಟ್ಟರೆ ಆರ್ಥಿಕ ಚೇತರಿಕೆ ಸಾಧ್ಯವಾಗುತ್ತದೆ. ಹಾಗೂ ಗ್ರೀನ್ ಝೋನ್‍ಗಳಾಗಿರುವ ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ನಡುವೆ ಸಾರಿಗೆ ಓಡಾಟಕ್ಕೆ ಅವಕಾಶ ನೀಡಿದಲ್ಲಿ ಅನುಕೂಲವಾಗುತ್ತದೆ ಎಂದರು.
ಸಿಎಂ ಪ್ರತಿಕ್ರಿಯಿಸಿ, ದೊಡ್ಡ ದೊಡ್ಡ ಬಟ್ಟೆ ಮಾಲ್‍ಗಳು ಮತ್ತು ದೊಡ್ಡ ದೊಡ್ಡ ಅಂಗಡಿಗಳನ್ನು ಹೊರತುಪಡಿಸಿ ಸಣ್ಣಪುಟ್ಟ ಬಟ್ಟೆ ಮತ್ತು ಬಂಗಾರದ ಅಂಗಡಿಗಳ ವಹಿವಾಟು ಆರಂಭಿಸಬಹುದು. ಆದರೆ ಮೇ 3 ರವರೆಗೆ ಅಂತರ್ ಜಿಲ್ಲೆ ಓಡಾಟ ಬೇಡ ಎಂದು ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕಳೆದ 28 ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯಲ್ಲಿ ದುರ್ಬಲ ಆರೋಗ್ಯವಿರುವವರ ಸಮೀಕ್ಷೆಯನ್ನು ನಡೆಸಲಾಗಿ 60 ವರ್ಷ ಮೇಲ್ಪಟ್ಟವರು 1,36,355 ಜನರಿದ್ದಾರೆ. 5 ವರ್ಷಕ್ಕಿಂತ ಕೆಳಗಿನವರು 84 ಸಾವಿರ ಮಕ್ಕಳಿದ್ದಾರೆ. 38 ಸಾವಿರ ಜನರಿಗೆ ನಾನ್ ಕಮ್ಯುನಿಕಬಲ್ ಡಿಸೀಸ್‍ಗಳಾದ ಬಿಪಿ, ಶುಗರ್ ಇದೆ. 120 ಜನರು ಡಯಾಲಿಸಿಸ್ ರೋಗಿಗಳಿದ್ದು 620 ಕ್ಷಯ ರೋಗಿಗಳಾಗಿದ್ದಾರೆ. ಹೆಚ್‍ಐವಿ 300 ರೋಗಿಗಳಿದ್ದಾರೆ.
ದಾವಣಗೆರೆಯಲ್ಲಿ ಸಣ್ಣ ಪುಟ್ಟ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಬಹುದಾಗಿದ್ದು ಆಟೋ ಮತ್ತು ಟ್ಯಾಕ್ಸಿ ಡ್ರೈವರ್‍ಗಳಿಗೆ ಕೆಲಸವಿಲ್ಲದೆ ಕಷ್ಟವಾಗುತ್ತಿದೆ. ದಾನಿಗಳಿಂದ ಸುಮಾರು 18170 ಕಿಟ್‍ಗಳನ್ನು ದಾನಿಗಳು ನೀಡಿದ್ದು 17000 ಕಿಟ್‍ಗಳನ್ನು ಅವಶ್ಯಕತೆ ಇರುವವರಿಗೆ ವಿತರಿಸಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಪರೀಕ್ಷೆ ನಡೆಸುವ ಲ್ಯಾಬ್‍ನ್ನು ಆರಂಭಿಸಲು ಅನುಮೋದನೆ ನೀಡಲಾಗಿದ್ದು ಕೆಲಸ ಆರಂಭಿಸಲಾಗುತ್ತಿದೆ. ಏಪ್ರಿಲ್ 30 ರಿಂದ ಎಸ್‍ಎಸ್ ಆಸ್ಪತ್ರೆಯಲ್ಲಿ ಕೋವಿಡ್ 19 ಪರೀಕ್ಷೆ ಆರಂಭವಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 200 ಬೆಡ್‍ಗಳಿಗೆ ಹೈಫ್ಲೋ ಆಕ್ಸಿಜನ್ ವ್ಯವಸ್ಥೆ ಮಾಡಿಲಾಗಿದೆ ಮತ್ತು 4 ತಾಲ್ಲೂಕು ಆಸ್ಪತ್ರೆಗಳಲ್ಲಿ ಸಹ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಸರಾಗ ವಹಿವಾಟು ಆಗುತ್ತಿದ್ದು, ಭತ್ತ, ಮೆಕ್ಕೆಜೋಳ, ರಾಗಿ ಮತ್ತು ಶೇಂಗಾ ಆವಕ ಈ ಬಾರಿ ದುಪ್ಪಟ್ಟು ಆಗಿದೆ. ನಗರದ ನಿಜಲಿಂಗಪ್ಪ ಬಡಾವಣೆ ಮತ್ತು ಜಿಎಂಐಟಿ ಪ್ರದೇಶದಲ್ಲಿದ್ದ ಎರಡು ಎಪಿಸೆಂಟರ್‍ಗಳನ್ನು ಪ್ರಕರಣ ದಾಖಲಾದ 28 ದಿನಗಳ ನಂತರ ಡಿ-ನೋಟಿಫೈ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ 83 ಸಾವಿರ ಜನರು ಕಾರ್ಮಿಕರಿದ್ದು ಸುಮಾರು 71 ಸಾವಿರ ಜನರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರದಿಂದ ರೂ.2000 ಜಮೆ ಆಗಿದೆ. ತೋಟಗಾರಿಕೆ ಇಲಾಖೆಯ ಹಾಪ್ ಕಾಮ್ಸ್ ವತಿಯಿಂದ ಗ್ರಾಹಕರ ಮನೆಗಳಿಗೆ ಹಣ್ಣು ತರಕಾರಿ ತಲುಪಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.45 ಲಕ್ಷ ದೇಣಿಗೆ ಬಂದಿದೆ ಎಂದರು.
ನಿರ್ಬಂಧ ಸಡಿಲಿಕೆ ನಂತರ ನಗರದಲ್ಲಿ ಹಾರ್ಡ್‍ವೇರ್, ಪ್ಲೈವುಡ್, ಬುಕ್ ಶಾಪ್‍ಗಳನ್ನು ಆರಂಭಿಸಲಾಗಿದೆ. ಖಾಸಗಿ ಕಟ್ಟಡ ನಿರ್ಮಾಣ ಆರಂಭಿಸಿದಲ್ಲಿ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗಲಿದೆ. ಇಟ್ಟಂಗಿಭಟ್ಟಿಯನ್ನು ಶುರು ಮಾಡಲು ಸೂಚಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಆಧಾರಿತ ಸಂಸ್ಕರಣಾ ಘಟಕಗಳನ್ನು ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಇನ್ನು ಮುಂದೆಯೂ ನಿಯಮಾನುಸಾರ ಸಾಮಾಜಿಕ ಅಂತರ ಕಾಯ್ದುಕೊಂಡು ಆರ್ಥಿಕ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ವಿಸಿ ಯಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ, ಪ್ರೊ.ಲಿಂಗಣ್ಣ, ಎಸ್.ಪಿ.ಹನುಮಂತರಾಯ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
Be the first to comment