ಪಿಎಚ್‌ಸಿ, ಸಿಎಚ್‌ಸಿ ಆರೋಗ್ಯ ಕೇಂದ್ರಗಳಿಗೆ ಸಚಿವರಾದ ಪ್ರಭು ಚವ್ಹಾಣ್ ಭೇಟಿ: ಪರಿಶೀಲನೆ

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಬೀದರ್ ಏಪ್ರಿಲ್ 22 (ಅಂಬಿಗ ನ್ಯೂಸ್ ): ಔರಾದ್ ತಾಲೂಕು ವ್ಯಾಪ್ತಿಯಲ್ಲಿನ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 2 ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಪಶು ಸಂಗೋಪಣೆ ಹಜ್ ಮತ್ತು ವಕ್ಫ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಏ.22ರಂದು ಬೆಳಗ್ಗೆಯಿಂದ ಸಂಜೆವರೆಗೆ ನಿರಂತರ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು.
ಔರಾದ್ ತಾಲೂಕಿನ ದಾಬಕಾ, ಡೋಣಗಾಂವ್, ಮುದೋಳ, ತೋರಣಾ, ಹೋಳಸಮುದ್ರ, ಠಾಣಾ ಕುಶನೂರ, ಹೆಡಗಾಪೂರ, ಸಂತಪೂರ, ಚಿಂತಾಕಿ ಗ್ರಾಮಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಕಮಲನಗರ ಮತ್ತು ವಡಗಾಂವ್ ಗ್ರಾಮಗಳಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಔರಾದ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಚಿವರು ಅಲ್ಲಿನ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಹಲವಾರು ಮಾಹಿತಿ ಪಡೆದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಸ್ಪತ್ರೆಗಳಲ್ಲಿ ಮೂಲಭೂತ ವೈದ್ಯಕೀಯ ಸೌಕರ್ಯವಿದೆಯೇ? ರೋಗಿಗಳಿಗೆ ಸಮರ್ಪಕ ಚಿಕಿತ್ಸೆ, ಔಷದಿ, ಇಂಜೆಕ್ಷನ್ ಇದೆಯೇ? ಅವಶ್ಯಕ ವೈದ್ಯಕೀಯ ಉಪಕರಣಗಳಿವೆಯೇ? ಎಂಬುದು ಸೇರಿದಂತೆ ಹಲವಾರು ಮಾಹಿತಿಯನ್ನು ಸಚಿವರು ಖುದ್ದು ಪಡೆದುಕೊಂಡರು.
*ರೋಗಿಗಳ ಮೇಲೆ ನಿಗಾಯಿಡಿ:* ಹೊರಗಿನಿಂದ ಬಂದು ಚಿಕಿತ್ಸೆಗೆ ದಾಖಲಾಗುವವ ರೋಗಿಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಹೇಳಿಕೊಂಡು ಬರುವ ರೋಗಿಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಜನರು ದೂರದಂತೆ ತಾವುಗಳು ಕಾಳಜಿ ವಹಿಸಿ ಜನರಿಗೆ ಸ್ಪಂದಿಸಿ ಚಿಕಿತ್ಸೆ ನೀಡಿರಿ. ಆಸ್ಪತೆಯಲ್ಲಿ ಶುಚಿತ್ವಕ್ಕೆ ಮೊದಲಾದ್ಯತೆ ನೀಡಿರಿ. ಆಸ್ಪತ್ರೆಗೆ ಹೋದರೆ ಅಲ್ಲಿದ್ದವರ ಕಾಯಿಲೆ ನಮಗೂ ಹರಡುತ್ತದೆ ಎನ್ನುವ ಭಾವನೆ ಜನರಲ್ಲಿ ಬಾರದಂತೆ, ಒಬ್ಬರಿಂದ ಒಬ್ಬರಿಗೆ ಸಾಂಕ್ರಾಮಿಕ ಹರಡದಂತೆ ಆಸ್ಪತ್ರೆಗಳಲ್ಲಿ ತೆಗೆದುಕೊಳ್ಳಬಹುದಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು ಎಂದು ಸಚಿವರು ಇದೆ ವೇಳೆಯಲ್ಲಿ ಎಲ್ಲ ವೈದ್ಯಾಧಿಕಾರಿಗಳು ಮತ್ತು ಆಸ್ಪತ್ರೆಯಲ್ಲಿನ ಸಿಬ್ಬಂದಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

*ಹಳ್ಳಿಗಳಿಗೂ ಭೇಟಿ*: ಆಸ್ಪತ್ರೆಗಳ ಭೇಟಿ ಕಾರ್ಯಕ್ರಮದ ಸಂದರ್ಭದಲ್ಲಿ ಸಚಿವರು ದಾರಿಯಲ್ಲಿ ಬರುವ ಕೆಲವು ಹಳ್ಳಿಗಳಿಗು ಸಹ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಪ್ರತಿಯೊಂದು ಗ್ರಾಮಗಳಲ್ಲಿ ಗಟಾರು ಶುಚಿಗೊಳಿಸಿ, ಬ್ಲೀಚಿಂಗ್ ಹಾಕಿ ಶುಚಿತ್ವಕ್ಕೆ, ಬೀದಿ ದೀಪ, ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ವ್ಯವಸ್ಥೆ ಮಾಡಬೇಕು ಎಂದು ಇದೆ ವೇಳೆ ಸಚಿವರು ಸ್ಥಳದಲ್ಲಿದ್ದ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಇದರ ಮೇಲುಸ್ತುವಾರಿ ನೋಡಿಕೊಳ್ಳಲು ತಾಪಂ ಕಾರ್ಯನಿರ್ವಹಣಾಧಿಕಾರಿ ಮಾಣಿಕರಾವ್ ಪಾಟೀಲ ಅವರಿಗೆ ಸಚಿವರು ಸೂಚಿಸಿದರು.
ಆಹಾರಧಾನ್ಯ ಪೂರೈಸಲು ಸೂಚನೆ: ತಾಲೂಕಿನಲ್ಲಿ ಈ ಲಾಕ್‌ಡೌನ್ ಅವಧಿಯಲ್ಲಿ ಯಾರೂ ಕೂಡ ಉಪವಾಸ ಇರಬಾರದು. ರೇಷನ್ ಕಾರ್ಡು ಇಲ್ಲದವರಿಗೂ ಕೂಡ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ನೀಡಲು ವ್ಯವಸ್ಥೆ ಮಾಡಬೇಕು ಎಂದು ಸಚಿವರು ಸ್ಥಳದಲ್ಲಿದ್ದ ತಹಸೀಲ್ದಾರ ಚಂದ್ರಶೇಖರ ಮತ್ತು ಆಹಾರ ಪೂರೈಕೆ ಇಲಾಖೆಯ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

Be the first to comment

Leave a Reply

Your email address will not be published.


*