ಜೀಲ್ಲಾ ಸುದ್ದಿಗಳು
ಬೀದರ್, ಬೀದರ ಸಿಟಿ ಜನರಿಗೆ ರಿಯಾಯಿತಿ ದರದಲ್ಲಿ ನಾನಾ ತರಕಾರಿಗಳು ಮತ್ತು ಹಣ್ಣು ವಿತರಿಸುವ ಕಾರ್ಯಕ್ರಮದ ಭಾಗವಾಗಿ ಸಂಚರಿಸಲಿರುವ 14 ವಾಹನಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ ಅವರು ಏ.10ರಂದು ಜಿಲ್ಲಾಧಿಕಾರಿ ಅವರ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಿಇಓ ಅವರು, ಕೋವಿಡ್-19 ವೈರಸ್ ಬಂದಿರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರ ಬರಬಾರದು. ಅವರಿಗೆ ಮನೆಮನೆಗೆ ತರಕಾರಿ ಮತ್ತು ಹಣ್ಣುಗಳನ್ನು ಅತೀ ಕಡಿಮೆ ಬೆಲೆಗೆ ವಿತರಿಸುವ ಮಹತ್ವದ ಕಾರ್ಯಕ್ರಮ ಇದಾಗಿದೆ. ಈ ವಾಹನಗಳು ಸಿಟಿಯಲ್ಲಿನ ಎಲ್ಲಾ ಏರಿಯಾಗಳಿಗೆ ಬೆಳಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ಸಂಚರಿಸಲಿದೆ. ಒಂದು ವಾಹನ ಎರಡು ವಾರ್ಡಗಳನ್ನು ಕವರ್ ಮಾಡಲಿದೆ. ಬೀದರನ 37 ವಾರ್ಡಗಳು ಮತ್ತು ಕಂಟೈನ್‌ಮೆಂಟ್ ಏರಿಯಾ ಘೋಷಿತ ಪ್ರದೇಶದಲ್ಲಿನ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಕರೋನಾ ಹರಡದಂತೆ ನೋಡಿಕೊಳ್ಳುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿ ಮಾಡಿದ್ದು, ಅದನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕಿದೆ. ವಿಶೇಷವಾಗಿ ಕಂಟೈನಮೆಂಟ್ ಏರಿಯಾ ಎಂದು ಗುರುತಿಸಿದ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಲಾಗಿದೆ.
ಇಂತಹ ಸಂದರ್ಭದಲ್ಲಿ ಪಟ್ಟಣದ ಜನತೆಗೆ ತೊಂದರೆಯಾಗಬಾರದು. ಅವರಿಗೆ ನಿಯಮಾನುಸಾರ ಎಲ್ಲವನ್ನು ಅವರ ಮನೆಗಳಿಗೆ ತಲುಪಿಸಬೇಕು ಎನ್ನುವ ನಿರ್ದೇಶನವಿದೆ. ಹೀಗಾಗಿ ಈ ಲಾಕ್‌ಡೌನ್ ಅವಧಿಯಲ್ಲಿ ಔಷಧಿ ಮತ್ತು ಕಿರಾಣಿ ಅವಶ್ಯವಿರುವಂತೆ ಎಲ್ಲ ತರಕಾರಿಗಳು ಮತ್ತು ಹಣ್ಣುಗಳನ್ನು ಜನರ ಮನೆಬಾಗಿಲಿಗೆ ಹಾಪಕಾಮ್ಸದಿಂದ ರಿಯಾಯಿತಿ ದರದಲ್ಲಿ ತಲುಪಿಸಲಾಗುತ್ತಿದೆ ಎಂದು ಸಿಇಓ ಅವರು ತಿಳಿಸಿದರು.
*ಯಾವ ತರಕಾರಿಗೆ ಎಷ್ಟು ಬೆಲೆ*: ಜಿಲ್ಲಾ ಹಾಪ್ ಕಾಮ್ಸ್ ಬೀದರ ಇವರಿಂದ ತಲಾ ಒಂದು ಕೆ..ಜಿ.ಗೆ ಈ ಕೆಳಗಿನಂತೆ ರಿಯಾಯಿತಿ ಬೆಲೆ ನಿಗದಿಪಡಿಸಲಾಗಿದೆ. ಟೊಮೆಟೋ 10.ರೂ., ಮೆಣಿಸಿನಕಾಯಿ 60 ರೂ., ಆಲೂ 30 ರೂ., ಬದನೆಕಾಯಿ 40 ರೂ., ಸೌತೆಕಾಯಿ 40 ರೂ., ಹೀರೇಕಾಯಿ 50 ರೂ., ಸಿಮ್ಲಾ ಮಿರ್ಚ 40 ರೂ., ಪಾಲಕ 40 ರೂ., ಹಾಗಲಕಾಯಿ 60 ರೂ., ಬಿನ್ನಿಸ್ 60 ರೂ., ಕಲ್ಲಂಗಡಿ 15 ರೂ., ಉಳ್ಳಾಗಡ್ಡಿ 30 ರೂ., ಸೋರೆಕಾಯಿ 20 ರೂ., ಪತ್ತ ಗೂಬಿ 40 ರೂ., ಬೆಂಡಿ 50 ರೂ., ನುಗ್ಗೆಕಾಯಿ 60 ರೂ., ಅಲ್ಲಾ 100 ರೂ.
*ರೈತರಿಂದಲೂ ನಾಲ್ಕ ವಾಹನ*: ಜಿಲ್ಲಾಡಳಿತದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಪ್ರತಿದಿನ 1 ರಿಂದ 2 ಟನ್‌ವರೆಗೆ ತರಕಾರಿ ಮಾರಾಟವಾಗುತ್ತಿದೆ. 14 ವಾಹನಗಳ ಜೊತೆಗೆ ರೈತರಿಂದಲೂ ನಾಲ್ಕು ವಾಹನಗಳು ಸಿಟಿಯಲ್ಲಿ ಸಂಚರಿಸುತ್ತಿವೆ ಎಂದು ಹಾಪಕಾಮ್ಸ್ನ ಎಮ್.ಡಿ ನೀಲಾಂಜನೆ, ಅಧ್ಯಕ್ಷರಾದ ಉಮಾಕಾಂತ ಸ್ವಾಮಿ ಅವರು ತಿಳಿಸಿದ್ದಾರೆ.
ಈ ವೇಳೆ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಬಾವುಗೆ ಹಾಗೂ ಇತರರು ಇದ್ದರು.
Be the first to comment