ಕರೋನಾ ತಡೆ ಮುಂಜಾಗ್ರತಾ ಸಭೆಯಲ್ಲಿ ಶಾಸಕರ ಸಲಹೆ:ಜಿಲ್ಲಾಡಳಿತದ ಕ್ರಮಗಳು ಇನ್ನೂ ಚುರುಕಾಗಲಿ

ವರದಿ: ಚಂದ್ರಕಾಂತ ಹಳ್ಳಿಖೇಡಕರ್ ಬೀದರ

ಜೀಲ್ಲಾ ಸುದ್ದಿಗಳು

ಬೀದರ್, ಪಶು ಸಂಗೋಪಣೆ ವಕ್ಫ ಮತ್ತು ಹಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ಏ.8ರಂದು ನಡೆದ ಸಭೆಯಲ್ಲಿ “ಲಾಕಡೌನ್ ಕಟ್ಟುನಿಟ್ಟು ಜಾರಿ ಸೇರಿದಂತೆ ಜಿಲ್ಲಾಡಳಿತವು ಎಲ್ಲ ಕ್ರಮಗಳನ್ನು ಇನ್ನಷ್ಟು ಚುರುಕುಗೊಳಿಸುವುದರಿಂದ ಜಿಲ್ಲೆಯಲ್ಲಿ ಕರೋನಾ ನಿಯಂತ್ರಣ ಸಾಧ್ಯ’’ ಎನ್ನುವ ಪ್ರಮುಖ ಸಲಹೆಯು ಸಭೆಯಲ್ಲಿದ್ದ ಬಹುತೇಕ ಶಾಸಕರಿಂದ ಕೇಳಿ ಬಂದಿತು.

ವೈರಸ್ ಸೋಂಕೀತರಿಗೆ ಚಿಕಿತ್ಸೆ ನೀಡುವ ಮತ್ತು ಶಂಕಿತ ಶೋಂಕಿತರನ್ನು ಪತ್ತೆ ಹಚ್ಚುವ ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯ ವೈದ್ಯಕೀಯ ಸೌಕರ್ಯ ಕಲ್ಪಿಸುವುದಕ್ಕೆ ಹಾಗೂ ಅವರ ಸುರಕ್ಷತೆಗೆ ಒತ್ತು ಕೊಡುವುದು ಮತ್ತು ಲಾಕ್‌ಡೌನ್ ಆದೇಶ ಪಾಲನೆಯಿಂದಾಗಿ ಬಳಲುತ್ತಿರುವ ಜಿಲ್ಲೆಯಲ್ಲಿನ ನಿರಾಶ್ರೀತರು ಮತ್ತು ಕಡುಬಡವರಿಗೆ ಕೂಡ ಆಹಾರ ಧಾನ್ಯ ಪೂರೈಸುವುಕ್ಕೆ ಜಿಲ್ಲಾಡಳಿತವು ಮೊದಲಾದ್ಯತೆ ನೀಡಬೇಕು ಎಂದು ಎಲ್ಲ ಶಾಸಕರು ಸಲಹೆ ಮಾಡಿದರು.
“ನಮ್ಮನ್ನು ಅಪಾಯದಿಂದ ಪಾರು ಮಾಡಬಲ್ಲ ಗುಣಮಟ್ಟದ ಮಾಸ್ಕ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಬೇಕು. ಲಾಕ್‌ಡೌನ್ ಬಿಗಿಗೊಳಿಸಿದಾಗಲೇ ನಾವು ಈ ಕರೋನಾ ಸಂಕಟದಿಂದ ಪಾರಾಗಬಹುದು ಎಂಬುದಕ್ಕು ಕೂಡ ಎಲ್ಲ ಶಾಸಕರು ಧನಿಗೂಡಿಸಿದರು.
ಮನೆಯೊಳಗಿರುವುದೊಂದೇ ಕರೋನಾ ಕಾಯಿಲೆಗಿರುವ ಮದ್ದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗಿರುವ ವೈದ್ಯರು ಮತ್ತು ಅವರ ಸಿಬ್ಬಂದಿ. ಲಾಕ್‌ಡೌನ್ ಆದೇಶ ಪಾಲನೆ ಹಿನ್ನೆಲೆಯಲ್ಲಿ ಬೇರೆ ಬೇರೆ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಇನ್ನೀತರ ನೌಕರರು ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿತ್ಯವೂ ಮನೆಯ ಹೊರಗಿದ್ದು, ಜನ ಸೇವೆಯಲ್ಲಿದ್ದಾರೆ. ಇವರಿಗೆ ಗುಣಮಟ್ಟದ ಮಾಸ್ಕಗಳು ಸಿಕ್ಕಿವೆಯೇ? ಚೆಕ್‌ಪೋಸ್ಟನಲ್ಲಿ ಕಾರ್ಯನಿರತರಾದ ವೈದ್ಯರು ಮತ್ತು ಇನ್ನಿತರ ಅಧಿಕಾರಿಗಳಿಗೆ ಕಾಲಕಾಲಕ್ಕೆ ವೈದ್ಯಕೀಯ ಉಪಕರಣಗಳು ಮತ್ತು ಊಟ, ನೀರು ಇನ್ನೀತರ ಆಹಾರ ಸಿಗತ್ತಿದೆಯೇ? ಎಂದು ಸಾರ್ವಜನಿಕರು ನಮ್ಮನ್ನು ಕೇಳುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಇಲ್ಲಿವರೆಗೆ ಏನೇನು ಕ್ರಮವಹಿಸಿದೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದು ಶಾಸಕರು ಕೇಳಿದರು.
ಕರೋನಾ ನಿಯಂತ್ರಣ ಮತ್ತು ಅದು ಹರಡದಂತೆ ತೆಗೆದುಕೊಳ್ಳಬೇಕಾದ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ತೆಗೆದುಕೊಂಡಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪ್ರತಿದಿನ ಸಭೆ ನಡೆಸಿ ಚರ್ಚಿಸಲಾಗುತ್ತದೆ. ಮಾಸ್ಕಗಳು, ಸ್ಯಾನಿಟೈಜರ್, ಇನ್ನೀತರ ಅಗತ್ಯ ವೈದ್ಯಕೀಯ ಕಿಟ್‌ಗಳು ಈಗ ¯ಭ್ಯವಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಬ್ರಿಮ್ಸ್ ನಿರ್ದೇಶಕರು ಅವರೊಂದಿಗೆ ಪ್ರತಿದಿನ ಸಭೆ ನಡೆಸಿ ವೈದ್ಯಕೀಯ ಸೌಕರ್ಯಗಳ ಲಭ್ಯತೆ ಮತ್ತು ಕೊರತೆ ಮಾಹಿತಿ ಪಡೆದು, ಅಗತ್ಯ ಇರುವುದನ್ನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಆಗಾಗ ವಿಡಿಯೋ ಸಂವಾದ ನಡೆಸಿ ಅಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆಯಲಾಗುತ್ತಿದೆ. ಚೆಕ್‌ಪೋಸ್ಟ ಸೇರಿದಂತೆ ಎಲ್ಲಾ ಕಡೆಗೆ ಅಗತ್ಯ ಸೌಕರ್ಯ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಪ್ರತಿಕ್ರಿಯಿಸಿದರು.


ಸಚಿವರ ಅಸಮಾಧಾನ:

ತಾವು ಈ ಹಿಂದೆ ಎರಡ್ಮೂರು ಚೆಕ್‌ಪೋಸ್ಟಗಳಿಗೆ ಭೇಟಿ ನೀಡಿದಾಗ ಅಲ್ಲಿ ಅಗತ್ಯ ಸೌಕರ್ಯ ಸಿಗುತ್ತಿಲ್ಲ ಎಂದು ಅಲ್ಲಿನ ಕಾರ್ಯನಿರತ ಅಧಿಕಾರಿಗಳು ಮತ್ತು ಸಿಬ್ಬಂದಿ ದೂರಿದ್ದಾರೆ. ಹೀಗಾದರೇ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರಾದ ಪ್ರಭು ಚವ್ಹಾಣ್ ಅವರು, ತಾವು ಈಗಾಗಲೇ ಹಲವಾರು ಬಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಿಳಿಸಿದ್ದರೂ ಇನ್ನು ಕೆಲ ಕಡೆಗಳಲ್ಲಿ ವ್ಯವಸ್ಥೆ ಸರಿ ಹೋಗಿಲ್ಲ. ಹೊರಗಡೆ ಹೋದರೆ ಏನಾಗುತ್ತದೋ ಎಂದು ಜನ ಭಯಪಡುವ ಈ ವೇಳೆಯಲ್ಲಿ ಜನಸೇವೆಗಾಗಿ ಚೆಕ್‌ಪೋಸ್ಟನಲ್ಲಿ ಕಾರ್ಯನಿರತರಾದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತುರ್ತಾಗಿ ಎಲ್ಲ ಸೌಕರ್ಯ ಒದಗಿಸಬೇಕು. ಕರೋನಾ ಹಿಮ್ಮೆಟ್ಟಿಸುವ ಎಲ್ಲ ಕಾರ್ಯದಲ್ಲಿ ತೊಡಗಿದ ಎಲ್ಲ ನೌಕರರು ಮತ್ತು ಸಿಬ್ಬಂದಿಯ ಸುರಕ್ಷತೆಯತ್ತಲೂ ಗಮನ ಕೊಡಬೇಕು ಎಂದು ಸಚಿವರು ಇದೆ ವೇಳೆ ಜಿಲ್ಲಾಧಿಕಾರಿಗಳಿಗೆ ಸಲಹೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗೀತಾ ಪಂಡಿತರಾವ್ ಚಿದ್ರಿ, ಸಂಸದರಾದ ಭಗವಂತ ಖೂಬಾ, ಶಾಸಕರಾದ ರಾಜಶೇಖರ ಪಾಟೀಲ, ಈಶ್ವರ ಖಂಡ್ರೆ, ಬಂಡೆಪ್ಪ ಖಾಶೆಂಪೂರ, ರಹೀಂ ಖಾನ್, ಬಿ.ನಾರಾಯಣರಾವ್, ವಿಧಾನ ಪರಿಷತ್ ಸದಸ್ಯರಾದ ರಘುನಾಥ ಮಲ್ಕಾಪುರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಲಕ್ಷ್ಮಣ ಈಶ್ವರ ಬುಳ್ಳಾ, ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ, ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

Be the first to comment

Leave a Reply

Your email address will not be published.


*