ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 3 ಉಚಿತ ಸಿಲೆಂಡರ್ ವಿತರಣೆ

ವರದಿ: ರಾಜೇಂದ್ರ ರಾಜವಾಳ ಕಲಬುರಗಿ

ಜೀಲ್ಲಾ ಸುದ್ದಿಗಳು

ಕಲಬುರಗಿ : ಕೊರೋನಾ ಸಾಂಕ್ರಾಮಿಕದಿಂದ ವಾಣಿಜ್ಯ-ವಹಿವಾಟು ಸ್ಥಗಿತಗೊಂಡು ಆರ್ಥಿಕ ಪರಿಣಾಮ ಎದುರಿಸುತ್ತಿರುವ ಬಡ ಜನರ ಆರ್ಥಿಕ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರವು ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದಿರುವ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 2020ರ ಏಪ್ರಿಲ್ ಮಾಹೆಯಿಂದ ಜೂನ್ ಮಾಹೆ ವರೆಗೆ 3 ತಿಂಗಳ ಕಾಲ ಉಚಿತ ಸಿಲೆಂಡರ್ ವಿತರಣೆ ಮಾಡಲಾಗುತ್ತಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಕಲಬುರಗಿ ಎಲ್.ಪಿ.ಜಿ. ಸೇಲ್ಸ್ ಘಟಕದ ಎಸ್.ಓ. ಮಾಯಾಂಕ್ ಪ್ರಿಯದರ್ಶಿ ತಿಳಿಸಿದ್ದಾರೆ.

ಈ ಯೋಜನೆಯಡಿ ಮೂರು ತಿಂಗಳ ವರೆಗೆ 14 ಕೆ.ಜಿ. ಸಿಲೆಂಡರ್ ಮೂರು ಬಾರಿ ಅಥವಾ 5 ಕೆ.ಜಿ. ಸಿಲೆಂಡರ್ ಎಂಟು ಬಾರಿ ನೀಡಲಾಗುವುದು. ಉಜ್ವಲ್ ಯೋಜನೆಯ ಗ್ರಾಹಕರ ಗ್ಯಾಸ್ ಸಂಪರ್ಕ ಸಂಖ್ಯೆಗೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಸರ್ಕಾರವು ಪ್ರತಿ ಮಾಹೆ ಮೊದಲನೇ ವಾರದಲ್ಲಿ ರಿಫಿಲ್ ಸಿಲೆಂಡರ್ ನಿಗದಿಪಡಿಸಿದ ಕ್ಯಾಶ್ ಮೆಮೋದಲ್ಲಿರುವಂತೆ ಮೊತ್ತವನ್ನು ಜಮಾ ಮಾಡಲಿದ್ದು, ಇದರ ಎಸ್.ಎಂ.ಎಸ್. ಸಂದೇಶ ಗ್ರಾಹಕರ ಮೋಬೈಲ್‍ಗೆ ಬರಲಿದೆ. ನಂತರ ಗ್ರಾಹಕರು ಈ ಮೊತ್ತವನ್ನು ಪಡೆದು ಗ್ಯಾಸ್ ಏಜೆನ್ಸಿಗಳಿಂದ ರಿಫಿಲ್ ಸಿಲೆಂಡರ್ ಪಡೆಯುವಾಗ ನಿಗದಿತ ಮೊತ್ತ ಪಾವತಿಸಿ ಸಿಲೆಂಡರ್ ಪಡೆಯಬಹುದಾಗಿದೆ.
ಒಂದು ವೇಳೆ ಕಳೆದ ಮಾಹೆಯಲ್ಲಿ ಮುಂಗಡ ಹಣ ಪಡೆದುಕೊಂಡು ಸಿಲೆಂಡರ್ ಪಡೆಯದೆ ಇದ್ದಲ್ಲಿ ಮುಂದಿನ ಮಾಹೆಗೆ ಸಿಲೆಂಡರ್ ರಿಫಿಲ್ ಮೊತ್ತ ಬ್ಯಾಂಕ್ ಖಾತೆಗೆ ಜಮಾವಾಗುವುದಿಲ್ಲ ಎಂದು ಮಾಯಾಂಕ್ ಪ್ರಿಯದರ್ಶಿ ಅವರು ಸ್ಪಷ್ಟಪಡಿಸಿದ್ದಾರೆ.
ರಿಫಿಲ್ ಸಿಲೆಂಡರ್ ಮನೆ ಬಾಗಿಲಿಗೆ ವಿತರಣೆ ಮಾಡುವುದರಿಂದ ಗ್ರಾಹಕರು ಡಿಸ್ಟ್ರಿಬೂಟರ್ ಕಚೇರಿಗಳಿಗೆ ಹೋಗಬಾರದು. ಅಲ್ಲದೆ ಉಜ್ವಲ್ ಯೋಜನೆಯ ನಿಯಮಿತ ಗ್ರಾಹಕರಿಗೆ ಈ ಯೋಜನೆಯ ಲಾಭ ಪಡೆಯಲು ಯಾವುದೇ ಹೆಚ್ಚುವರಿ ದಾಖಲಾತಿ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಆನ್‍ಲೈನ್ ಮೂಲಕ ಪೇಮೆಂಟ್ ಮಾಡಲು ಸಲಹೆ: ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲ್ಲಿ ಗ್ರಾಹಕರು ದೂರವಣಿ ಮೂಲಕ ಐವಿಆರ್‍ಎಸ್, ಎಸ್.ಎಂ.ಎಸ್., ವ್ಯಾಟ್ಸ್ಯಾಪ್, ಆನ್‍ಲೈನ್, ಪೇಟಿಎಂ ಮೂಲಕ ರಿಫಿಲ್ ಬುಕ್ಕಿಂಗ್ ಮಾಡಬಹುದಾಗಿದೆ. ಎಫಿಲ್ ಸಿಲೆಂಡರ್ ಮೊತ್ತವನ್ನು ಸಾಧ್ಯವಾದಷ್ಟು ಆನ್‍ಲೈನ್ ಮೂಲಕ ಪಾವತಿ ಮಾಡುವ ಮೂಲಕ ಕೊರೋನಾ ಸೊಂಕು ಹೋಗಲಾಡಿಸಲು ಸಹಕರಿಸಬೇಕು.
ಇನ್ನೂ ಈ ಯೋಜನೆ ಬಗ್ಗೆ, ಬ್ಯಾಂಕ್ ಖಾತೆ ಜೋಡಣೆ, ಬ್ಯಾಂಕ್ ಖಾತೆ ಬದಲಾವಣೆ ಸೇರಿದಂತೆ ಇನ್ನೀತರ ಯಾವುದೇ ಮಾಹಿತಿಗೆ ಗ್ಯಾಸ್ ಏಜೆಂಸಿ ಡಿಸ್ಟ್ರಿಬೂಟರ್‍ಗಳನ್ನು ದೂರವಾಣಿ ಮೂಲಕ ಸಂಪಕಿಸುವುದು. ಅನಾವಶ್ಯಕವಾಗಿ ಗ್ಯಾಸ್ ಏಜೆನ್ಸಿ ಕಚೇರಿಗಳಿಗೆ ಹೋಗಿ ಜನಸಂದಣಿ ಸೃಷ್ಟಿಸಬಾರದು ಮತ್ತು ಕಡ್ಡಾಯವಾಗಿ ಎಲ್ಲೆಡೆ ಸಾಮಾಜಿಕ ಅಂತರ ಪರಿಪಾಲನೆ ಮಾಡಬೇಕು ಗ್ರಾಹಕರಲ್ಲಿ ಮನವಿ ಮಾಡಿರುವ ಮಾಯಾಂಕ್ ಪ್ರಿಯದರ್ಶಿ ಅವರು ಆರೋಗ್ಯ ತುರ್ತು ಪರಿಸ್ಥಿಯಲ್ಲಿ ಗ್ರಾಹಕರ ಬೇಡಿಕೆಯಂತೆ ಗ್ಯಾಸ್ ಸಿಲೆಂಡರ್ ಲಭ್ಯವಿದ್ದು, ಅನಗತ್ಯ ದಾಸ್ತಾನು ಮಾಡಿಕೊಳ್ಳಬಾರದು ಅವರು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*