ರೈತರ ಕೃಷಿ ಉತ್ಪನ್ನಗಳ ಸಾಗಾಟ, ಮಾರಾಟಕ್ಕೆ ಅಡ್ಡಿ ಮಾಡಬಾರದು:ಸಚಿವ ಬಿ.ಸಿ. ಪಾಟೀಲ

ವರದಿ:-ಶರಣು ಕೋಲಿ ಕಲಬುರಗಿ ನಗರ

ಜೀಲ್ಲಾ ಸುದ್ದಿಗಳು

ಕಲಬುರಗಿ : ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಲಾಕ್‍ಡೌನ್ ಇದ್ದರೂ, ರೈತರ ಕೃಷಿ ಉತ್ಪನ್ನಗಳ ಸಾಗಾಣಿಕೆ, ಮಾರಾಟ ಹಾಗೂ ವ್ಯಾಪಾರಕ್ಕೆ ಯಾವುದೇ ಅಡ್ಡಿಯುಂಟಾಗಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೊವೀದ್-19 ಸಾಂಕ್ರಾಮಿಕ ರೋಗದ ನಿಮಿತ್ತ ಲಾಕ್‍ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡುತ್ತಾ, ಪೊಲೀಸರು ಸೇರಿದಂತೆ ಯಾವುದೇ ಇಲಾಖೆ ಅಧಿಕಾರಿಗಳು ತೊಂದರೆ ಉಂಟು ಮಾಡಬಾರದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ತೋಟಗಾರಿಕೆ ಉಪನಿರ್ದೇಶಕ ಸಂತೋಷ ಸಪ್ಪಂದಿ ಅವರು, ಕಲಬುರಗಿಯಲ್ಲಿ ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ 55 ಟಾಟಾ ಏಸ್ ಮೂಲಕ ತರಕಾರಿಗಳ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಈ ಕುರಿತು ಮಾತನಾಡಿದ ಸಚಿವರು ಬೆಂಗಳೂರಿನಲ್ಲಿ ಹಾಪ್‍ಕಾಮ್ಸ್ ರೀತಿಯಲ್ಲಿ ತರಕಾರಿ ಮಳಿಗೆ ತೆರೆದಿರುವಂತೆ ಜಿಲ್ಲೆಯಲ್ಲೂ ವಿಶೇಷ ಮಳಿಗೆ ತೆರೆಯುವಂತೆ ಅವರು ತೋಟಗಾರಿಕೆ ಇಲಾಖೆ ಆಧಿಕಾರಿಗಳಿಗೆ ಅವರು ತಿಳಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆಗೆ ಇಂತಿಷ್ಟೆ ಜನ ಬರಬೇಕೆಂದು ನಿರ್ಬಂಧ ಹೇರಬಾರದು. ಆದರೆ, ಎಲ್ಲಾ ಮಾರಾಟಗಾರರು, ವ್ಯಾಪಾರಿಗಳು ಹಾಗೂ ರೈತರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಕಲ್ಲಂಗಡಿ ಬೆಳೆಗಾರ ಚಂದ್ರಕಾಂತ ನಾಗೀಂದ್ರಪ್ಪ ಬಿರಾದರ ಅವರ ಆತ್ಮಹತ್ಯೆ ಪ್ರಸ್ತಾಪಿಸಿದ ಸಚಿವರು ಯಾವುದೇ ರೈತರು ದೃತಿಗೆಟ್ಟು ಆತ್ಮಹತ್ಯೆ ಮಾಡಿಕೊಳ್ಳಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮೊಂದಿಗಿವೆ ಎಂದು ಧೈರ್ಯತುಂಬಿದರು.

ಇನ್ನು ತೊಗರಿ ಖರೀದಿಗೆ ಕೈಗೊಂಡಿರುವ ಕ್ರಮಗಳ ಕುರಿತು ಕೇಳಲಾಗಿ ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶರತ್. ಬಿ ಅವರು, ಈಗಾಗಲೇ ಮಾರ್ಚ್ 28ರಿಂದ 5000 ಮಟ್ರಿಕ್ ಟನ್ ಕ್ಕಿಂತ ಹೆಚ್ಚು ತೊಗರಿಯನ್ನು ರಫ್ತು ಮಾಡಲಾಗಿದೆ. ಬೇಡಿಕೆಗೆ ಅನುಗುಣವಾಗಿ ಬೆಂಗಳೂರು ಮತ್ತಿತರೆಡೆ ಕಳುಹಿಸಲಾಗಿದೆ ಎಂದು ವಿವರ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ತೊಗರಿಯನ್ನು ಕೇವಲ ಬೆಂಗಳೂರು ಅಲ್ಲದೆ, ದೇಶದ ವಿವಿಧ ಭಾಗಗಳಿಗೆ ರಫ್ತು ಮಾಡುವ ಮೂಲಕ ರೈತರ ನೆರವಿಗೆ ಬರಬೇಕು ಎಂದು ತಿಳಿಸಿದರು.
ಮೇ-ಜೂನ್‍ನಲ್ಲಿ ಆರಂಭವಾಗುವ ಮುಂಗಾರು ಹಿನ್ನೆಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಔಷಧಿ ಮುಂತಾದವುಗಳ ಪೂರೈಕೆ ಕುರಿತು ಸಚಿವರು ಮಾಹಿತಿ ಕೇಳಿದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಿತೇಂದ್ರನಾಥ ಸೂಗೂರು 7,55,130 ಹೆಕ್ಟೇರ್‍ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 10280 ಕ್ವಿಂಟಲ್ ತೊಗರಿ, 10870 ಕ್ವಿಟಂಲ್ ಸೋಯಾ ಅವರೆ ಸೇರಿದಂತೆ 24,893 ಕ್ವಿಂಟಲ್ ಬಿತ್ತನೆ ಬೀಜ ಅಗತ್ಯವಿದೆ ಎಂದು ಮಾಹಿತಿ ನೀಡಿದ ಅವರು, ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಏನೂ ಸಮಸ್ಯೆ ಇಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅವರು ಮಾತನಾಡಿ, ಕಲ್ಲಂಗಡಿ ಬೆಳೆ ನಷ್ಟದಿಂದ ಸಾವನ್ನಪ್ಪಿದ ರೈತ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು, ತೊಗರಿ ಬೆಂಬಲ ಬೆಲೆಯನ್ನು 6100 ರಿಂದ 7500ಕ್ಕೆ ಹೆಚ್ಚಿಸಬೇಕು, ಪ್ರತಿ ರೈತರಿಂದ 10 ಕ್ವಿಂಟಲ್‍ನಿಂದ 20 ಕ್ವಿಂಟಲ್ ತೊಗರಿ ಖರೀದಿಸಬೇಕು, ರೈತರ ಉತ್ಪನ್ನ ಸಾಗಿಸುವ ಟ್ರ್ಯಾಕ್ಟರ್, ಟಂಟಂ ಮುಂತಾದ ವಾಹನಗಳನ್ನು ತಡೆಯಬಾರದು ಮುಂತಾದ ಮನವಿಯನ್ನು ಸಚಿವರಿಗೆ ಈ ಸಂದರ್ಭದಲ್ಲಿ ಸಲ್ಲಿಸಿದರು

ಕಲ್ಲಂಗಡಿ ಹಣ್ಣು ಸೇವಿಸಿದರೆ ಕೊರೋನಾ ರೋಗ ಬರುತ್ತದೆ ಎಂದು ಅಪಪ್ರಚಾರ ನಡೆಸಲಾಗುತ್ತಿದೆ. ಅದರೆ ಕಲ್ಲಂಗಡಿ ಮತ್ತು ಸೌತೇಕಾಯಿ ಸೇವನೆಯಿಂದ ಶಾಸ್ವಕೋಶ ತೊಂದರೆ ನಿವಾರಿಸಲಿವೆ. ನಿಂಬೆ ಹಣ್ಣು ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ ಎಂದು ಸಚಿವರು ತಿಳಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ, ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ, ವಿಧಾನಸಭಾ ಶಾಸಕರಾದ ದತ್ತಾತ್ರೇಯ ಪಾಟೀಲ ಸಿ. ರೇವೂರ, ಬಸವರಾಜ ಮತ್ತಿಮೂಡ, ಎಂ.ವೈ. ಪಾಟೀಲ, ಡಾ. ಅವಿನಾಶ ಜಾಧವ, ಕನೀಜ ಫಾತೀಮಾ, ಸುಭಾಷ ಗುತ್ತೇದಾರ, ವಿಧಾನ ಪರಿಷತ್ ಶಾಸಕ ಬಿ.ಜಿ. ಪಾಟೀಲ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ, ಡಾ.ಪಿ. ರಾಜಾ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Be the first to comment

Leave a Reply

Your email address will not be published.


*