ಯಾದಗಿರಿ 05 : ಕೊರೊನಾ ವೈರಸ್ (ಕೋವಿಡ್-19) ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಕೇಂದ್ರ ಸರ್ಕಾರವು ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಣೆ ಮಾಡಿದ್ದು, ಜಿಲ್ಲೆಯಲ್ಲಿ ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಈ ಸಂಬಂಧ ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ, ಅವರು ಮಾತನಾಡಿದರು. ಬೀದರ್‍ನಲ್ಲಿ ಒಂದೇ ದಿನ ಕೊರೊನಾ ಸೋಂಕಿತರ ಸಂಖ್ಯೆ ಸ್ಫೋಟವಾಯಿತು. ಕೊರೊನಾ ಸಾಂಕ್ರಾಮಿಕ ರೋಗವಾಗಿರುವುದರಿಂದ ಇದರ ಗಂಭೀರತೆಯನ್ನು ಹರಿತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಲಾಕ್‍ಡೌನ್ ಅವಧಿಯಲ್ಲಿ ಯಾವುದೇ ಅಂಗಡಿಗಳನ್ನು ತೆರೆದಿಡುವಂತಿಲ್ಲ. ಸಾರ್ವಜನಿಕರು ಸಕಾರಣಗಳಿಲ್ಲದೆ ಮನೆಯಿಂದ ಹೊರಬಂದರೆ ಸೂಕ್ತ ಕ್ರಮ ಜರುಗಿಸಿ. ಅಲ್ಲದೇ, ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ಜಪ್ತಿ ಮಾಡಿ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು. ಹೊರಗಡೆಯಿಂದ ಬಂದವರನ್ನು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ನಲ್ಲಿಡಬೇಕು. ಅಗತ್ಯ ವೈದ್ಯಕೀಯ ಪರಿಕರಗಳನ್ನು ಖರೀದಿಸಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಮನೆಯಲ್ಲಿರುವ ಕಾರಣ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯುಂಟಾಗಬಾರದು ಎಂದು ಅವರು ತಿಳಿಸಿದರು.
*ಮಹಾಜನತೆಗೆ ಸಚಿವರ ಮನವಿ*:
ಕೊರೊನಾ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ವೈರಸ್ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ. ನಿಷಕಾಳಜಿಯಿಂದ ಜೀವಕ್ಕೆ ಅಪಾಯ ತಂದುಕೊಳ್ಳಬಾರದು. ಈ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೈಯನ್ನು ಪದೆಪದೇ ಸಾಬೂನಿನಿಂದ ತೊಳೆದುಕೊಳ್ಳಬೇಕು. ಲಾಕ್‍ಡೌನ್ ನಿಯಮಗಳನ್ನು ಮೀರಿ ಯಾರೂ ಮನೆಯಿಂದ ಹೊರಬರಬಾರದು ಎಂದು ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು. ಕೊರೊನಾದಿಂದ ಜಗತ್ತಿನಾದ್ಯಂತ ಈಗಾಗಲೇ ಸಾಕಷ್ಟು ಜೀವಹಾನಿಯಾಗಿದೆ. ಬೇರೆಬೇರೆ ದೇಶಗಳಲ್ಲಿ ಜನರು ರಸ್ತೆ ಮೇಲೆ ಹೆಣಗಳಾಗಿದ್ದಾರೆ. ನಮ್ಮ ದೇಶದಲ್ಲಿ ಅಂತಹ ಸ್ಥಿತಿ ಬರಬಾರದು. ನಾವು ಮತ್ತು ನಮ್ಮ ಕುಟುಂಬ ಈ ವಿಷಯದಲ್ಲಿ ಗಂಭೀರವಾಗಿರಬೇಕು. ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು ಎಂದು ಅವರು ಕೋರಿದರು.
*ಖಾಸಗಿ ವೈದ್ಯರ ಸೇವೆಗೆ ಮನವಿ*:
ಕೊವೀಡ್-19 ಪ್ರಕರಣಗಳಲ್ಲಿ ದಾಖಲಾಗುವ ರೋಗಿಗಳಿಗೆ ಅವಶ್ಯವಿರುವ ವೈದ್ಯಕೀಯ ಸೇವೆ ಒದಗಿಸಲು ಖಾಸಗಿ ವೈದ್ಯರು ಸಹಕಾರ ನೀಡಬೇಕೆಂದು ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಮನವಿ ಮಾಡಿದರು. ಸರಕಾರಿ ವೈದ್ಯರ ಕೊರತೆ ಇರುವಲ್ಲಿ ನುರಿತ ಖಾಸಗಿ ವೈದ್ಯರ ಸೇವೆಯನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಖಾಸಗಿ ವೈದ್ಯರು ಸಹ ಇದೊಂದು ರಾಷ್ಟ್ರೀಯ ವಿಪತ್ತಾಗಿರುವ ಕಾರಣ ಸಹಕರಿಸಬೇಕೆಂದು ಕೋರಿದರು. ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಿ.ಜಾಧವ್ ಅವರು ಮಾತನಾಡಿ, ಬೇಸಿಗೆ ಕಾಲ ಇರುವುದರಿಂದ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗಬಾರದು. ಕೊರೊನಾ ತಡೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡ ಸಮರ್ಪಕವಾಗಿ ನಿಭಾಯಿಸುವಂತೆ ಸೂಚಿಸಿದರು. ಶಾಸಕರಾದ ರಾಜೂಗೌಡ ಹಾಗೂ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಮಾತನಾಡಿ, ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವೈಯಕ್ತಿಕ ರಕ್ಷಣಾ ಸಾಧನಾ (ಪಿಪಿಇ), ಮಾಸ್ಕ್ ಸೇರಿದಂತೆ ವೈದ್ಯಕೀಯ ಸಾಮಗ್ರಿಗಳ ಕೊರತೆ ಇದೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಜೀವಭಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಸಚಿವರ ಗಮನಕ್ಕೆ ತಂದು ಸುದೀರ್ಘ ಚರ್ಚೆ ನಡೆಸಿದರು.
*5 ವ್ಯಕ್ತಿಗಳ ಮಾದರಿ ಮತ್ತೊಮ್ಮೆ ಪರೀಕ್ಷೆಗೆ*:
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಜಿಲ್ಲೆಯಿಂದ ಕೊರೊನಾ ಪರೀಕ್ಷೆಗೆ ಕಳುಹಿಸಿದ್ದ ಒಟ್ಟು 16 ವ್ಯಕ್ತಿಗಳ ಮಾದರಿಗಳು ನೆಗೆಟಿವ್ ಬಂದಿವೆ. ಈ ಪೈಕಿ ನಿಜಾಮುದ್ದೀನ್ ತಬ್ಲಿಘಿ ಮಾರ್ಕಾಜ್ ಸಭೆಯಲ್ಲಿ ಭಾಗವಹಿಸಿ ಯಾದಗಿರಿ ಜಿಲ್ಲೆಗೆ ವಾಪಸ್ಸಾಗಿರುವ 5 ವ್ಯಕ್ತಿಗಳ ಮಾದರಿಗಳು ನೆಗೆಟಿವ್ ಬಂದರೂ ನಿರ್ದೇಶನದಂತೆ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಹಾಯವಾಣಿ (08473-253950), ವಾಟ್ಸ್‍ಆ್ಯಪ್ (9449933946) ಆರಂಭಿಸಲಾಗಿದೆ. ವಿದೇಶಗಳಿಂದ ಬಂದ 71 ಜನರನ್ನು ಹೋಮ್ ಕ್ವಾರಂಟೈನ್‍ನಲ್ಲಿರಿಸಿದ್ದು, ಈ ಪೈಕಿ 11 ಜನ 28 ದಿನಗಳ ಅವಲೋಕನ ಪೂರೈಸಿದ್ದಾರೆ. ನಿಜಾಮುದ್ದೀನ್ ತಬ್ಲಿಘಿ ಮಾರ್ಕಾಜ್ ಸಭೆಯಲ್ಲಿ ಭಾಗವಹಿಸಿದ 5 ಜನ ಮತ್ತು ಬೆಂಗಳೂರಿನಲ್ಲಿ ಸೋಂಕಿತ ವ್ಯಕ್ತಿಗೆ ಸಂಪರ್ಕದಲ್ಲಿದ್ದರೆನ್ನಲಾದ 19 ಜನರನ್ನು ಅರಕೇರಾ (ಕೆ) ವಸತಿ ಶಾಲೆಯ ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ 5 ಜ್ವರ ತಪಾಸಣಾ ಕೇಂದ್ರಗಳನ್ನು ತೆರೆದು ಇಲ್ಲಿವರೆಗೆ 14623 ಜನ ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, 344 ಕಾರ್ಮಿಕರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. 6 ಆರ್‍ಆರ್‍ಟಿ ತಂಡಗಳ ಮೂಲಕ 3,640 ಜನರ ಸ್ಕ್ರೀನಿಂಗ್ ಮಾಡಲಾಗಿದೆ. ವೈದ್ಯಕೀಯ ಉಪಚಾರಕ್ಕಾಗಿ ವಿವಿಧೆಡೆ 850 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಕ್ಷಿಪ್ರ ಸಂಚಾರಿ ದಳ-6, ಕಣ್ಗಾವಲು ತಂಡ ಸೇರಿದಂತೆ ವಿವಿಧ ತಂಡಗಳನ್ನು ರಚಿಸಲಾಗಿದೆ. ಸಹಾಯಕ ಆಯುಕ್ತರ ನೇತೃತ್ವದಲ್ಲಿ ಇನ್‍ಸಿಡೆಂಟ್ ಕಮಾಂಡರ್ ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು. ವಿಧಾನಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಜಿಲ್ಲೆಯ ಮೇಲುಸ್ತುವಾರಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಎ.ಬಿ.ಇಬ್ರಾಹಿಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್ ಹಾಗೂ ಇತರರು ಹಾಜರಿದ್ದರು.
Be the first to comment