ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಪರಿಶೀಲನಾ ಸಭೆ: ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದತಿಗೆ ಸೂಚನೆ

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಯಾದಗಿರಿ :
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕು. ಖಾಸಗಿ ಆಸ್ಪತ್ರೆಗಳು ಸೇವೆ ನೀಡಲು ನಿರಾಕರಿಸಿದರೆ ಅವುಗಳ ಪರವಾನಗಿ ರದ್ದುಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿ, ಅವರು ಮಾತನಾಡಿದರು.
ಶಾಸಕರಾದ ರಾಜುಗೌಡ ಅವರು ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ತೆರೆಯುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದೆ ಎಂದು ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಗೃಹ ಸಚಿವಾಲಯದ ಆದೇಶದಂತೆ ಖಾಸಗಿ ಆಸ್ಪತ್ರೆಗಳು ತುರ್ತು ಸೇವೆಯಡಿಯಲ್ಲಿ ಬರುತ್ತವೆ. ಖಾಸಗಿ ವೈದ್ಯರು ಸೇವೆ ನೀಡದಿದ್ದರೆ ಸರ್ಕಾರಿ ವೈದ್ಯರ ಮೇಲೆ ಒತ್ತಡ ಹೆಚ್ಚುತ್ತದೆ. ಆದ್ದರಿಂದ ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಪಟ್ಟಿ ಮಾಡಿ ಪ್ರತಿದಿನ ಕಾರ್ಯನಿರ್ವಹಿಸುವಂತೆ ಸೂಚಿಸಬೇಕು. ಇಲ್ಲವಾದಲ್ಲಿ ಕ್ರಮ ಜರುಗಿಸಿ ಎಂದು ಸಲಹೆ ನೀಡಿದರು.
ವೈಯಕ್ತಿಕ ರಕ್ಷಣಾ ಸಾಧನಾ (ಪಿಪಿಇ), ಮಾಸ್ಕ್ ಸೇರಿದಂತೆ ಜಿಲ್ಲೆಯಲ್ಲಿ ವೈದ್ಯಕೀಯ ಸಾಮಗ್ರಿಗಳ ಕೊರತೆ ಇದೆ. ವೈರಸ್ ಹರಡದಂತೆ ಪರಿಣಾಮಕಾರಿ ತಡೆಗೆ ಇವುಗಳ ಪೂರೈಕೆ ಅತ್ಯಗತ್ಯ ಎಂದು ಶಾಸಕರಾದ ರಾಜುಗೌಡ ಅವರು ಮನವಿ ಮಾಡಿ, ಸುರಪುರದ ರಂಗಂಪೇಟೆಯಲ್ಲಿ ದಿನಕ್ಕೆ 20 ಸಾವಿರಕ್ಕಿಂತ ಹೆಚ್ಚು ಮಾಸ್ಕ್ ತಯಾರಿಸುವವರಿದ್ದಾರೆ ಎಂಬುದಾಗಿ ಸಭೆಯ ಗಮನಕ್ಕೆ ತಂದರು. ಸಚಿವರಾದ ಬಿ.ಶ್ರೀರಾಮುಲು ಅವರು ಮಾತನಾಡಿ, ಮಾಸ್ಕ್‍ಗಳ ಪೂರೈಸುವ ಸ್ವಸಹಾಯ ಸಂಘಗಳಿದ್ದರೆ ಅವರಿಗೆ ಮಾಸ್ಕ್ ತಯಾರಿಸಲು ಅನುಮತಿ ಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.
*ರಾಜ್ಯದಲ್ಲಿ 146 ಪಾಸಿಟಿವ್*: ಕೋವಿಡ್-19 ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 146 ಪ್ರಕರಣಗಳು ಪಾಸಿಟಿವ್ ಬಂದಿದ್ದು, ಇವರಲ್ಲಿ 4 ಜನ ಮರಣ ಹೊಂದಿದ್ದಾರೆ. 11 ಜನ ಗುಣಮುಖ ಹೊಂದಿದ್ದಾರೆ. ಸುಮಾರು 32 ಸಾವಿರ ಜನರನ್ನು ಅವಲೋಕನದಲ್ಲಿಡಲಾಗಿತ್ತು. ಈ ಪೈಕಿ 5 ಸಾವಿರ ಜನರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, 4,566 ಜನರ ಮಾದರಿ ನೆಗೆಟಿವ್ ಬಂದಿವೆ ಎಂದು ಸಚಿವರು ಮಾಹಿತಿ ನೀಡಿದರು.
*ಯುಟ್ಯೂಬ್ ಚಾನೆಲ್ ಆರಂಭ*: ಕೊರೊನಾ ವೈರಸ್ ಬಗ್ಗೆ ಸಾರ್ವಜನಿಕರು ಭಯಭೀತರಾಗಬಾರದು ಮತ್ತು ಅವರನ್ನು ಜಾಗೃತಿ ಮೂಡಿಸುವ ಉದ್ದೇಶದಿಂದ “ಜಾಗೃತಿ ಕರ್ನಾಟಕ” ಎಂಬ ಯುಟ್ಯೂಬ್ ಚಾನೆಲ್ ಆರಂಭಿಸಲಾಗಿದೆ. ಅದರಲ್ಲಿ ಈ ಕೋವಿಡ್ ಯಾವ ರೀತಿ ಆರಂಭವಾಯಿತು. ಹೇಗೆ ಹರಡುತ್ತದೆ ಮತ್ತು ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಎಲ್ಲಾ ಮಾಹಿತಿಗಳನ್ನು ನೀಡಲಾಗುತ್ತಿದೆ. ಅದೇ ರೀತಿ ರಾಜ್ಯದ ಜನರಿಗೆ ಮಾಹಿತಿ ಕೊಡುವ ನಿಟ್ಟಿನಲ್ಲಿ ಕೊರೊನಾ ವೈರಸ್ ಬಗ್ಗೆ ಅಪ್ಲಿಕೇಶನ್ ಕೂಡ ರಚಿಸಲಾಗಿದೆ ಎಂದು ತಿಳಿಸಿದರು.
*ಚಿಕಿತ್ಸೆಗೆ ಸಹಕಾರ ನೀಡಲು ಮನವಿ*: ಬೆಳಗಾವಿ ಮತ್ತು ಬೀದರ್‍ನಲ್ಲಿ ಕ್ವಾರಂಟೈನ್‍ನಲ್ಲಿರುವ ಮತ್ತು ನಿಜಾಮುದ್ದೀನ್ ತಬ್ಲಿಘಿ ಮಾರ್ಕಾಜ್ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ವ್ಯಕ್ತಿಗಳು ವೈದ್ಯರು ನೀಡುವ ಚಿಕಿತ್ಸೆಗೆ ಸ್ಪಂದಿಸದೇ ಅಸಭ್ಯವಾಗಿ ವರ್ತಿಸುತ್ತಿರುವುದು ನೋವಿನ ಸಂಗತಿ. ಎಲ್ಲಿಬೇಕಲ್ಲಿ ಉಗುಳುವುದು ಮತ್ತು ಇನ್ನಿಲ್ಲದ ಬೇಡಿಕೆ ಇಡುವುದು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯರು ತಮ್ಮ ಜೀವವನ್ನು ಮುಡಿಪಿಟ್ಟು ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಕ್ವಾರಂಟೈನ್‍ನಲ್ಲಿರುವ ಎಲ್ಲಾ ವ್ಯಕ್ತಿಗಳು ಚಿಕಿತ್ಸೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮಾತನಾಡಿ, ಜಿಲ್ಲೆಯಿಂದ ಕೊರೊನಾ ಪರೀಕ್ಷೆಗೆ ಕಳುಹಿಸಿದ್ದ ಒಟ್ಟು 16 ವ್ಯಕ್ತಿಗಳ ಮಾದರಿಗಳು ನೆಗೆಟಿವ್ ಬಂದಿವೆ. ಈ ಪೈಕಿ ನಿಜಾಮುದ್ದೀನ್ ತಬ್ಲಿಘಿ ಮಾರ್ಕಾಜ್ ಸಭೆಯಲ್ಲಿ ಭಾಗವಹಿಸಿ ಯಾದಗಿರಿ ಜಿಲ್ಲೆಗೆ ವಾಪಸ್ಸಾಗಿರುವ 5 ವ್ಯಕ್ತಿಗಳ ಮಾದರಿಗಳು ನೆಗೆಟಿವ್ ಬಂದರೂ ನಿರ್ದೇಶನದಂತೆ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ. ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರವಾದ ಮಾಹಿತಿಯನ್ನು ನೀಡಿದರು.
ಸಭೆಗೂ ಮುನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರು ಹೊಸ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಿರುವ “ಕೋವಿಡ್-19 ಆಸ್ಪತ್ರೆ”ಯನ್ನು ಪರಿಶೀಲಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ನಾಗನಗೌಡ ಕಂದಕೂರ, ವಿಧಾನಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲೆಯ ಮೇಲುಸ್ತುವಾರಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಎ.ಬಿ.ಇಬ್ರಾಹಿಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್ ಹಾಗೂ ಇತರರು ಹಾಜರಿದ್ದರು.

Be the first to comment

Leave a Reply

Your email address will not be published.


*