ಮೃತ ವ್ಯಕ್ತಿಯ ಸಂಪರ್ಕದ 35 ಜನರಿಗೆ ಕೊರೋನಾ ವೈರಸ್ ಇಲ್ಲ :ಜಿಲ್ಲಾಧಿಕಾರಿ ಬಿ.ಶರತ್

ವರದಿ:- ರಾಜೇಂದ್ರ ಕಲಬುರಗಿ

ಜೀಲ್ಲಾ ಸುದ್ದಿಗಳು

ಒಟ್ಟು 64 ಜನರ ಸಾಂಪನಲ್ಲಿ 35 ಜನರ ರಿಪೋರ್ಟ್ ಬಂದಿದೆ

ಕಲಬುರಗಿ ಮಾ.26 : ಕಲಬುರಗಿ ಜಿಲ್ಲೆಯಿಂದ ಇದೂವರೆಗೆ ಕೋವಿಡ್-19 ಪರೀಕ್ಷೆಗೆ ಮೃತ ವಯೋವೃದ್ಧ ವ್ಯಕ್ತಿ ಸೇರಿದಂತೆ ಒಟ್ಟಾರೆ 64 ಸ್ಯಾಂಪಲ್ಸ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರಲ್ಲಿ ಮಾರ್ಚ್ 26ರ ಸಾಯಂಕಾಲ 6 ಗಂಟೆ ವರೆಗೆ 35 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುರುವಾರ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಒಟ್ಟಾರೆ 64 ಪ್ರಕರಣಗಳ ಪೈಕಿ ಇದೂವರೆಗೆ 3ರಲ್ಲಿ (ಮೃತ ವ್ಯಕ್ತಿ ಸೇರಿದಂತೆ) ಪಾಸಿಟಿವ್ ಬಂದಿದೆ. 2 ಪ್ರಕರಣಗಳಲ್ಲಿ ತಾಂತ್ರಿಕ ಕಾರಣದಿಂದ ಪರೀಕ್ಷೆಯಾಗಿರುವುದಿಲ್ಲ. ಇನ್ನೂ 24 ಪ್ರಕರಣಗಳಲ್ಲಿ ವೈದ್ಯಕೀಯ ಪರೀಕ್ಷೆಯ ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಹೊಂದಿದ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ 99 ಜನ ಹಾಗೂ ಎರಡನೇ ಸಂಪರ್ಕ ಹೊಂದಿರುವ 388 ಜನರನ್ನು ಗುರುತಿಸಲಾಗಿದೆ. ಇದಲ್ಲದೆ ವಿದೇಶದಿಂದ ಆಗಮಿಸಿದ 474 ಜನರನ್ನು ಸಹ ಪತ್ತೆ ಹಚ್ಚಲಾಗಿ ಒಟ್ಟಾರೆ ಇದೂವರೆಗೆ 961 ಜನರನ್ನು ಹೋಂ ಕ್ವಾರಂಟೈನ್‍ನಲ್ಲಿಟ್ಟು ಎಲ್ಲರ ಆರೋಗ್ಯದ ಮೇಲೆ ನಿಗಾ ವಹಿಸಿದೆ. ಇನ್ನೂ 22 ಜನರನ್ನು ಐಸೋಲೇಟೆಡ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಂಕಿ-ಸಂಖ್ಯೆಯೊಂದಿಗೆ ವಿವರ ನೀಡಲಾಗಿದೆ.

7827 ಮನೆ ಸರ್ವೇ, ಸ್ಕ್ರೀನಿಂಗ್:- ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ ಪಾಸಿಟಿವ್ (ಮೃತ ವ್ಯಕ್ತಿ ಸೇರಿದಂತೆ) ದೃಢವಾದ ಹಿನ್ನೆಲೆಯಲ್ಲಿ ಕಲಬುರಗಿ ನಗರದ ವಾರ್ಡ್ ಸಂಖ್ಯೆ 30 ಮತ್ತು 14 ಎರಡು ಕಂಟೇನ್‍ಮೆಂಟ್ ಝೋನ್ ಎಂದು ಗುರುತಿಸಿ ಪಾಸಿಟಿವ್ ಪ್ರಕರಣದ ರೋಗಿಗಳ ಮನೆ ಸುತ್ತಮುತ್ತ ಒಟ್ಟಾರೆ 7827 ಮನೆಗಳನ್ನು ಸರ್ವೆ ಮಾಡಿ ಅಲ್ಲಿ ಮುಂಜಾಗೃತ ಕ್ರಮವಾಗಿ ಸ್ಕ್ರೀನಿಂಗ್, ಸ್ಯಾನಿಟೈಜೇಷನ್ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

ಕೊರೋನಾ ಸಹಾಯವಾಣಿ ಸಂಖ್ಯೆ: 08472-278648/ 278698 / 278604/ 278677. ಡಿ.ಎಸ್.ಯು ಹೆಲ್ಪ್‍ಲೈನ್ ಸಂಖ್ಯೆ: 08472-268648 ಇರುತ್ತದೆ.

ಹೊರದೇಶದಿಂದ ಬಂದವರು 14 ದಿನ ಮನೆಯಲ್ಲಿರಿ: ಇತ್ತೀಚೆಗೆ ಕೋವಿಡ್-19 ಬಾಧಿತ ದೇಶಗಳಿಂದ ಜಿಲ್ಲೆಗೆ ಹಿಂದಿರುಗಿದವರು ಯಾವುದೇ ರೋಗದ ಲಕ್ಷಣ ಕಾಣದಿದ್ದರು ಕಡ್ಡಾಯವಾಗಿ 14 ದಿನ ಹೋಂ ಕ್ವಾರಂಟೈನ್‍ನಲ್ಲಿರಬೇಕು ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ರೋಗದ ಲಕ್ಷಣ ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು ಅಥವಾ ಹೆಲ್ಪ್‍ಲೈನ್ ಸಂಖ್ಯೆ: 104 ಕರೆ ಮಾಡಿ ಸಹಾಯ ಪಡೆಯಬಹುದು.

ಯಾವುದೇ ವ್ಯಕ್ತಿ ಕೆಮ್ಮುವಾಗ, ಸೀನುವಾಗ ಕಡ್ಡಾಯವಾಗಿ ಕರವಸ್ತ್ರ ಉಪಯೋಗಿಸಬೇಕು. ಪರಸ್ಪರ ಮಾತಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆಗಾಗ ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಮತ್ತು ಹೆಚ್ಚಿನ ಜನಸಂದಣಿಯಲ್ಲಿ ಭಾಗವಹಿಸದಂತೆ ಎಚ್ಚರಿಕೆ ವಹಿಸಿದಲ್ಲಿ ಕೊರೋನಾ ಸೊಂಕು ತಡೆಗಟ್ಟಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*