ಜಿಲ್ಲೆಯ ಭಾಲ್ಕಿ ಹಾಗೂ ಬಸವಕಲ್ಯಾಣದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ವಿರುದ್ಧ ಸಂಘಟನೆಗಳಿಂದ ಪ್ರತಿಭಟನೆ ಮುಂದುವರೆದಿದೆ. ಗುರುವಾರ ಕೂಡಾ ಹುಮನಾಬಾದ್,ಬಸವಕಲ್ಯಾಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಹುಮನಾಬಾದ್ ಸೆ 03 : ಜಿಲ್ಲೆಯ ಭಾಲ್ಕಿ ಹಾಗೂ ಬಸವಕಲ್ಯಾಣದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ವಿರುದ್ಧ ಸಂಘಟನೆಗಳಿಂದ ಪ್ರತಿಭಟನೆ ಮುಂದುವರೆದಿದೆ. ಗುರುವಾರ ಕೂಡಾ ಹುಮನಾಬಾದ್,ಬಸವಕಲ್ಯಾಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು, ಜಿಲ್ಲೆಯಲ್ಲಿ ನಿರಂತರ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ.ಆದರೆ,ರಾಜ್ಯ ಸರಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆಪಾದಿಸಿದರು. ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ನಂತರ ಮಾನವ ಸರಪಳಿ ರಚಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಎಬಿವಿಪಿ ಮುಖಂಡರು, ಕೆಲ ದಿನಗಳ ಹಿಂದೆ ಕರ್ನಾಟಕ ಕಾಲೇಜಿನ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಬೆನ್ನಲೆ ಬಸವಕಲ್ಯಾಣ ಹಾಗೂ ಭಾಲ್ಕಿ ತಾಲೂಕಿನಲ್ಲಿ ನಡೆದ ಘಟನೆಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಆರೋಪಿಗಳಿಗೆ ಕಾನೂನಿನ ಭಯವಿಲ್ಲದಂತಾಗಿದೆ.ಹೀಗಾಗಿ ಅತ್ಯಾಚಾರ ಎಸಗಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕೊಲೆ,ಅತ್ಯಾಚಾರ,ಲೈಗಿಂಕ ಕಿರುಕುಳ, ಬ್ಲಾಕ್‌ಮೇಲ್ ನಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಲು ಮುಂದಾಗಬೇಕು. ಅತ್ಯಾಚಾರ ಕತ್ಯ ನಡೆಯದಂತೆ ಪೋಸ್ಕೋ ಕಾಯ್ದೆ ಬಲಪಡಿಸಬೇಕು. ಪೊಲೀಸರಿಗೆ ಸಂಪೂರ್ಣ ಅಧಿಕಾರ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಂತರ ಬೇಡಿಕೆ ಕುರಿತು ಗೃಹ ಸಚಿವ ಕೆ.ಜೆ.ಜಾರ್ಜ್‌ಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಮೂಲಕ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವಶಂಕರ ಸ್ವಾಮಿ, ನಗರ ಕಾರ್ಯದರ್ಶಿ ವಿನೋದ ಶೆಳಗಿ,ನಾಗರಾಜ ಪರೀಟ್, ಮಹಾದೇವ ಗವಾರೆ, ಚಂದು ಸೋಮಾ, ಶರಣು ಕೋಳಾರ್, ಮಾರುತಿ ವಿಶ್ವ, ಪ್ರಶಾಂತ ,ಬಸವರಾಜ ,ಸೈಯದ್ ಫೈಸಲ್,ವಿರೇಶ್ ಸೇರಿದಂತೆ ಅನೇಕರಿದ್ದರು.
Be the first to comment