CA Site controversy – ಸಚಿವ ಎಂಬಿ ಪಾಟೀಲ್ ವಿರುದ್ಧ ಸರ್ಕಾರಿ ಭೂಮಿ ದುರ್ಬಳಕೆ ಬಗ್ಗೆ ವಿಧಾನ ಪರಿಷತ್ ವಿಪಕ್ಷಗಳ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸೆ. 2ರಂದು ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಅದರ ಮರುದಿನವೇ, ವಿಧಾನ ಪರಿಷತ್ ನಲ್ಲಿರುವ ಕಾಂಗ್ರೆಸ್ ಸದಸ್ಯರ ನಿಯೋಗವೊಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ಹೊಸಕೋಟೆಯಲ್ಲಿ ಸಿಎ ಸೈಟೊಂದನ್ನು ಶಾಲೆ ಕಟ್ಟುವುದಾಗಿ ಹೇಳಿ ಪಡೆದಿದ್ದ ನಾರಾಯಣಸ್ವಾಮಿಯವರು ಅಲ್ಲಿ ಧಮ್ ಬಿರಿಯಾನಿ ಹೋಟೆಲ್ ನಡೆಸುತ್ತಿದ್ದಾರೆಂದು ಆರೋಪಿಸಲಾಗಿದೆ.
ಬೆಂಗಳೂರು: ಶಿಕ್ಷಣ ಉದ್ದೇಶಕ್ಕಾಗಿ ಪಡೆದುಕೊಂಡು ಹೌಸಿಂಗ್ ಬೋರ್ಡ್‌ನಲ್ಲಿರುವ ಸಿ.ಎ ಸೈಟ್‌ನಲ್ಲಿ ಧಮ್ ಬಿರಿಯಾನಿ ಹೋಟೆಲ್ ನಡೆಸಲು ಬಾಡಿಗೆ ಕೊಡಲಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾಗಿ ರಾಜ್ಯಪಾಲರಿಗೆ ವಿಧಾನಪರಿಷತ್ ಸದಸ್ಯರನ್ನು ಒಳಗೊಂಡ ಕಾಂಗ್ರೆಸ್ ನಿಯೋಗ ದೂರು ನೀಡಿದೆ.
ಹೌಸಿಂಗ್ ಬೋರ್ಡ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಛಲವಾದಿ ನಾರಾಯಣ ಸ್ವಾಮಿ ಅವರು ಕೆಐಎಡಿಬಿಯಿಂದ ಸಿಎ ಸೈಟ್ ಪಡೆದುಕೊಂಡಿದ್ದರು. ಅದೇ ಸಂದರ್ಭದಲ್ಲಿ ಅವರು ಆದರ್ಶ ಸ್ಕೂಲ್ ಎಜುಕೇಶನ್ ಗ್ರೂಪ್ ನ ಸಂಚಾಲಕರೂ ಆಗಿದ್ದರು. ಶಿಕ್ಷಣ ಸಂಸ್ಥೆ ನಡೆಸಲು ಪಡೆದುಕೊಂಡ ಸೈಟ್‌ನಲ್ಲಿ ಇದೀಗ ಆನಂದ್ ಧಂ ಬಿರಿಯಾನಿ ಹೋಟೆಲ್ ನಡೆಯುತ್ತಿದೆ ಎಂದು ಆರೋಪಿಸಿದರು.
ಶಿಕ್ಷಣ ಉದ್ದೇಶಕ್ಕೆ ಪಡೆದ ಜಾಗವನ್ನು ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂಬುವುದು ನಿಯಮವಾಗಿದೆ. ಆದರೆ, ಶಿಕ್ಷಣ ಉದ್ದೇಶಕ್ಕಾಗಿ ಪಡೆದಿರುವ ಸಿಎ ಸೈಟ್ ನಲ್ಲಿ ಧಂ ಬಿರಿಯಾನಿ ಹೊಟೇಲ್ ನಡೆಸುತ್ತಿದ್ದಾರೆ. ರಾಜ್ಯಪಾಲರಿಗೆ ಇದನ್ನು ವಿವರವಾಗಿ ತಿಳಿಸಿದ್ದೇವೆ. ಈ ಕೂಡಲೇ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಯನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ವಿಪಕ್ಷ ನಾಯಕನ ಸ್ಥಾನದ ಗಾಂಭೀರ್ಯ ತೆಗೆ ಧಕ್ಕೆ ತಂದಿದ್ದಾರೆ. ಕಳಂಕಿತರು ಆ ಸ್ಥಾನದಲ್ಲಿ ಇರಬಾರದು. 2002 ರಿಂದ 2004 ರವರೆಗೆ ಛಲವಾದಿಯವರು, ಕರ್ನಾಟಕ ಹೌಸಿಂಗ್ ಬೋರ್ಡ್ ಮೆಂಬರ್ ಆಗಿರ್ತಾರೆ. ಅವರ ಸ್ಥಾನ ದುರುಪಯೋಗ ಮಾಡಿಕೊಂಡು ಹೌಸಿಂಗ್ ಬೋರ್ಡ್ ಗೆ ಭೂಸ್ವಾಧೀನ ಆಗಿದ್ದ ಭೂಮಿಯನ್ನು ತಾವು ಪಡೆಯುತ್ತಾರೆ.
ವಶಕ್ಕೆ ಪಡೆದುಕೊಂಡು ಹಂಚಿಕೆ ಮಾಡದೇ ಮಿಕ್ಕಿದ್ದ ಜಾಗವನ್ನು ಬಿಟ್ಟುಕೊಡಿ ಎಂದು ಮೂಲ ಜಮೀನು ಮಾಲೀಕರು ಹೌಸಿಂಗ್ ಬೋರ್ಡ್ ಗೆ ಅರ್ಜಿ ಹಾಕ್ತಾರೆ. ಆಗ ಬೋರ್ಡ್ ನಿರ್ದೇಶಕರಾಗಿದ್ದ ಛಲವಾದಿ ನಾರಾಯಣಸ್ವಾಮಿ 2004 ರಲ್ಲಿ ತಮಗೇ ಆ ಸಿಎ ಸೈಟ್ ನೀಡಿ ಎಂದು ಅರ್ಜಿ ಹಾಕಿಕೊಳ್ತಾರೆ. ತಾವೇ ನಿರ್ದೇಶಕರಾಗಿದ್ದರೂ ಕೂಡ ಕಾನೂನು ಬಾಹಿರವಾಗಿ ಇದನ್ನು ಪಡೆಯುತ್ತಾರೆ ಎಂದು ಆರೋಪಿದ್ದಾರೆ.
ಆದರ್ಶ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರಾಗಿದ್ದುಕೊಂಡು ಸಿಎ ಸೈಟ್ ಪಡೆಯುತ್ತಾರೆ. ಐದು ವರ್ಷದಲ್ಲಿ ಶಾಲೆಯ ಕಟ್ಟಡ ಕಟ್ಟಬೇಕು ಎಂಬ ಕಂಡಿಷನ್ ಮೇಲೆ ಹೌಸಿಂಗ್ ಬೋರ್ಡ್ ನಿವೇಶನ ಪಡೆದುಕೊಳ್ಳುತ್ತಾರೆ. ಆದರೆ ಇದೇ ನಿವೇಶನವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ, ಈಗ ಹೋಟೆಲ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಶಾಲೆ ಕಟ್ಟುವ ಬದಲು ಟೆಲಿ ಕಮ್ಯುನಿಕೇಷನ್ ಆ್ಯಂಡ್ ಪಬ್ಲಿಕ್ ಸರ್ವೀಸ್ ಕಂಪನಿ ಹೆಸರಿಗೆ ಈ ಜಾಗವನ್ನು ಮಾರ್ಪಾಡು ಮಾಡ್ತಾರೆ. ಸೇಲ್ ಡೀಡ್ ಆಗುವ ಮೊದಲೇ ಈ ರೀತಿ ಮಾರ್ಪಾಟು ಮಾಡಿರುತ್ತಾರೆ. ಯಾವಾಗ ಟೆಲಿ ಕಮ್ಯುನಿಕೇಷನ್ ನಲ್ಲಿ ಛಲವಾದಿ ನಾರಾಯಣಸ್ವಾಮಿ ಎಕ್ಸಪರ್ಟ್ ಆದ್ರೋ ಅವರೇ ಹೇಳಬೇಕು ಎಂದು ಸವಾಲು ಹಾಕಿದರು.
Be the first to comment