ಮುಡಾ ಮಾಜಿ ಆಯುಕ್ತರ ಸಸ್ಪೆಂಡ್ ನಿಂದ ಹಗರಣ ಸಾಬೀತು : ಎನ್.ರವಿಕುಮಾರ್!

 

ಬೆಂಗಳೂರು:- ಮುಡಾ ಮಾಜಿ ಆಯುಕ್ತರ ಸಸ್ಪೆಂಡ್ ನಿಂದ ಹಗರಣ ಸಾಬೀತಾಗಿದೆ ಎಂದು ಎನ್.ರವಿಕುಮಾರ್ ಹೇಳಿದ್ದಾರೆ.

ಅಕ್ರಮವಾಗಿ ಸಿಕ್ಕಿದ ಮೈಸೂರು ಮುಡಾದ 14 ನಿವೇಶನಗಳನ್ನು ವಾಪಸ್ ಮಾಡಬೇಕು ಹಾಗೂ ಅಕ್ರಮದ ಆ ತಪ್ಪಿಗೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದರು.

ನಮ್ಮ ಕಾನೂನು, ನಿಯಮ, ನಿರ್ದೇಶನಗಳಿಗೆ ಅವರು ವಿರುದ್ಧವಾಗಿ ವರ್ತಿಸಿದ್ದರು ಎಂಬ ಕಾರಣಕ್ಕೆ ಮುಡಾದ ಹಿಂದಿನ ಅಧಿಕಾರಿ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಿದ್ದಾರೆ. ಈ ಮೂಲಕ ಮುಡಾದ ನಿರ್ಣಯಗಳು, ನಿರ್ದೇಶನಗಳು, ನಿರ್ಧಾರಗಳು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದೀರಿ ಎಂದು ವಿಶ್ಲೇಷಿಸಿದರು.

ಮುಖ್ಯಮಂತ್ರಿಗಳಿಗೆ ಸಮಾನಾಂತರ ಬಡಾವಣೆಯಲ್ಲಿ ಸೈಟ್ ಸಿಕ್ಕಿದ್ದಲ್ಲ. ಬಹಳ ದೊಡ್ಡ ಮಟ್ಟದಲ್ಲಿ ಬೆಲೆಬಾಳುವ ನಿವೇಶನಗಳಿರುವ ಬಡಾವಣೆ ಅದಾಗಿದೆ. ಚದರಡಿಗೆ 1 ಸಾವಿರ ರೂ. ಸಿಗುವ ಜಾಗ ಬಿಟ್ಟು 10 ಸಾವಿರದಿಂದ 12 ಸಾವಿರ ರೂ.ಗೆ ಚದರಡಿ ಇರುವಂಥ ಪ್ರದೇಶದಲ್ಲಿ ಸೈಟ್ ಪಡೆದುದು ಅಕ್ರಮ ಎಂದು ತಿಳಿಸಿದರು. ದಿನೇಶ್ ಕುಮಾರ್ ಅಮಾನತು ತಮಗೆ ಗೊತ್ತಿಲ್ಲ ಎಂದು ಸಿಎಂ ಹೇಳುತ್ತಿದ್ದಾರೆ. ಮೈಸೂರು ಮುಡಾದ ಅಕ್ರಮ ಸಂಬಂಧದಲ್ಲೇ ಅಧಿಕಾರಿ ಅಮಾನತಾಗಿದ್ದಾರೆ. ನಿಮ್ಮ ಜಾಣ ಉತ್ತರವು ಕರ್ನಾಟಕದ ಜನರನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ ಎಂದು ಹೇಳಿದರು.

ದಿನೇಶ್ ಕುಮಾರ್ ಅಮಾನತು ತಮಗೆ ಗೊತ್ತಿಲ್ಲ ಎಂಬ ಉತ್ತರವು ಕರ್ನಾಟಕದ ಜನರನ್ನು ದಿಗ್ಭ್ರಾಂತರನ್ನಾಗಿ ಮತ್ತು ಮೂಢರನ್ನಾಗಿ ಮಾಡುವಂಥದ್ದು. ನಿವೇಶನ ಅಭಿವೃದ್ಧಿ ವೇಳೆ 15%ರಷ್ಟು ಉದ್ಯಾನ ಸಂಬಂಧಿಸಿದ ಜಮೀನು, 10%ರಷ್ಟು ನಾಗರಿಕ ಸೌಲಭ್ಯಕ್ಕೆ ಜಾಗ ಕೊಟ್ಟಿಲ್ಲ ಎಂಬುದು ಅಮಾನತಿಗೆ ಒಂದು ಕಾರಣ. 2009ರಿಂದ ಜಾರಿಗೊಂಡ 50-50 ಅನುಪಾತದ ನಿಯಮಗಳು ಅನ್ವಯವಾಗುವುದಿಲ್ಲವಾದ್ದರಿಂದ ಪ್ರಾಧಿಕಾರದಿಂದ ಬದಲಿ ನಿವೇಶನ ಮಂಜೂರಾತಿಗೆ ಶೇ. 50-50 ಅನುಪಾತದಂತೆ ಕೈಗೊಂಡಿರುವ ಯಾವುದೇ ಕ್ರಮವೂ ಕಾನೂನು ಬಾಹಿರವಾಗಿರುತ್ತದೆ ಎಂದು ಇನ್ನೊಂದು ಪ್ರಮುಖ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನಾವೂ ಇದೇ ಪ್ರಶ್ನೆಯನ್ನು ಎತ್ತಿದ್ದೆವು ಎಂದು ವಿವರಿಸಿದರು.

Be the first to comment

Leave a Reply

Your email address will not be published.


*