ಮಾಲವಿ ಜಲಾಶಯದ ಭಗೀರಥರು ಭೀಮಾನಾಯ್ಕ ಹಾಗೂ ಅಂಬಾಡಿ ನಾಗರಾಜ್

ಹೊಸಪೇಟೆ : ಜು 24 : ಮಾಲವಿ ಜಲಾಶಯಕ್ಕೆ ನೀರು ತುಂಬಿಸಲು ಕಳೆದ ನಲವತ್ತು ವರ್ಷಗಳ ಹೋರಾಟದ ಫಲವಾಗಿ ಇಂದು ದಿನಾಂಕ 24-07-2022ರಂದು ಜಲಾಶಯದಲ್ಲಿ ನೀರು ತುಂಬಲು ಆರಂಭವಾಗಿದೆ.

ಪಕ್ಷಾತೀತಾ, ಜಾತ್ಯಾತೀತ ಹೋರಾಟಗಾರ ಅಂಬಾಡಿ ನಾಗರಾಜ ಅವರು ಮಾಲವಿ ಜಲಾಶಯಕ್ಕೆ ನೀರು ತುಂಬಿಸಲೆಂದು, 2016ರ ಆಗಷ್ಟ್ 16 ಮತ್ತು 2017ರ ಜನವರಿ 30ರಂದು ಎರಡು ಬಾರಿ ಸಾವಿರಾರು ರೈತರೊಂದಿಗೆ ಸ್ವಂತ ಖರ್ಚಿನಲ್ಲಿ ಬೆಂಗಳೂರಿಗೆ ತೆರಳಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನ ಹೋರಾಟಕ್ಕೆ ಕರೆಯಿಸಿಕೊಂಡು ಮಾಲವಿ ಜಲಾಶಯಕ್ಕೆ ನೀರಿನ ಅಗತ್ಯ ಕುರಿತು ಮನದಟ್ಟು ಮಾಡಿಕೊಟ್ಟರು.

ಜಲಾಶಯದ ಡಿಪಿಆರ್ ಮಾಡಿಸಿ, ಸರ್ವೇ ಮಾಡಿಸಿ,ತಾಂತ್ರಿಕ ಅನುಮೋದನೆ ಮತ್ತು ಬಜೆಟ್ ನಲ್ಲಿ 156ಕೋಟಿ ರೂಪಾಯಿಗಳನ್ನು ಅನುದಾನ ಮೀಸಲಿಗೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಎಂ.ಬಿ.ಪಾಟೀಲರನ್ನು ಅಂಬಾಡಿ ನಾಗರಾಜ್ ಹಾಗೂ ಭೀಮಾನಾಯ್ಕರವರು ಒತ್ತಾಯಿಸಿದ್ದು ಸ್ಮರಣೀಯವಾಗಿದೆ.

ವಿಧಾನಸೌಧದ ಹೊರಗೆ ಹೋರಾಟನಿರತ ಅಂಬಾಡಿ ನಾಗರಾಜ್ ಅವರಿಗೆ ಕನ್ನಡಪರ ಸಂಘಟನೆ ಸೇರಿ ನಾನಾ ಸಂಘಟನೆಗಳು ಸಹ ಪರ್ಯಾಯ ಬೆಂಬಲ ನೀಡಿ ಮಾಲವಿ ಜಲಾಶಯಕ್ಕೆ ನೀರು ತುಂಬಿಸುವ ಹೋರಾಟದಲ್ಲಿ ಪಾಲ್ಗೊಂಡಿದ್ದವು.

ರೈತರಿಗಾಗಿ, ರೈತರ ಉಸಿರಾಗಿರುವ ಅಂಬಾಡಿ ನಾಗರಾಜ್ ರವರ ಹೋರಾಟಕ್ಕೆ ಇಂದು ಪ್ರತಿಫಲ ದೊರೆತಂತಾಗಿದೆ.

ಹಾಲಿ ಶಾಸಕ ಭೀಮಾನಾಯ್ಕರು ವಿಧಾನಸೌಧದ ಒಳಗಡೆ ಮಾಲವಿ ಜಲಾಶಯ ಕುರಿತು ನಿರಂತರ ಧ್ವನಿ ಎತ್ತುವ ಮೂಲಕ ಮಾಡಿದ ಹೋರಾಟವು ಕೂಡಾ ಇಲ್ಲಿ ಉಲ್ಲೇಖಾರ್ಹವಾಗಿದೆ. ಜೊತೆಗೆ ಹೋರಾಟಗಾರ, ಪತ್ರಕರ್ತ ಬುಡ್ಡಿ ಬಸವರಾಜ ಇವರ ಹೋರಾಟವನ್ನು ಮರೆಯುವಂತಿಲ್ಲ.

ರೈತಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಮಾಲವಿ ಜಲಾಶಯ ನೀರಾವರಿ ಹೋರಾಟ ಸಮಿತಿ ಮೊದಲಾದ ಸಂಘಟನೆಗಳ ಹೋರಾಟ ಕೂಡಾ ಇಂದು ಫಲಪ್ರದವಾಗಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ.

Be the first to comment

Leave a Reply

Your email address will not be published.


*