ಜಿಲ್ಲಾ ಸುದ್ದಿಗಳು
ಭಟ್ಕಳ
ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮವು ಭಟ್ಕಳ ತಾಲೂಕಿನ ತೆರ್ನಮಕ್ಕಿ ಕರ್ನಾಟಕ ಪಬ್ಲಿಕ್ ಶಾಲೆಯ ಆವಣದಲ್ಲಿ ಜರುಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಎನ್ನುವ ಈ ಕಾರ್ಯಕ್ರಮ ಅತ್ಯಂತ ಯಶಸ್ವೀ ಕಾರ್ಯಕ್ರಮವಾಗಿದ್ದು ಸಂಪೂರ್ಣ ಆಡಳಿತವೇ ಹಳ್ಳಿಗೆ ಬಂದು ತಮ್ಮ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ನೀಡುವಂತಹ ಕಾರ್ಯಕ್ರಮವಾಗಿದೆ. ಇಂದು ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಅವರವರ ಇಲಾಖೆಗಳ ಸಮಸ್ಯೆಗಳಿದ್ದರೆ ಅವರು ಇಲ್ಲಿಯೇ ಪರಿಹಾರ ದೊರಕಿಸಿಕೊಡುತ್ತಾರೆ. ಕಂದಾಯ ಇಲಾಖೆಯ ಸಮಸ್ಯೆಗಳಿದ್ದರೆ, ಪಿಂಚಣಿ, ವಿಧವಾ ವೇತನ, ಅಂಗವಿಕಲರ ವೇತನ, ಪಹಣಿಯಲ್ಲಿನ ದೋಷ, ಆಧಾರ್ ಕಾರ್ಡ ತಿದ್ದುಪಡಿ ಇತ್ಯಾದಿ ಯಾವುದೇ ಇದ್ದರೂ ಸಹ ಅವುಗಳನ್ನು ಸ್ಥಳದಲ್ಲಿಯೇ ಮಾಡಿಕೊಡಲಾಗುವುದು ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಜನತೆ ಸೇರಿದ್ದು ನೋಡಿ ಸಂತಸವಾಗಿದೆ, ಜಿಲ್ಲಾಡಳಿತ ಪ್ರತಿನಿಧಿಸುವ ತಾಲೂಕಾ ಆಡಳಿತದಿಂದ ಕುಂದು ಕೊರತೆಗಳನ್ನು ನಿವಾರಿಸುವತ್ತ ಎಲ್ಲಾ ಪ್ರಯತ್ನ ಮಾಡುತ್ತೇವೆ. ನೀವಷ್ಟೇ ಅಲ್ಲ ನಿಮ್ಮಲ್ಲಿ ಇನ್ಯಾರಾದರೂ ಸಮಸ್ಯೆಯಿದ್ದವರಿದ್ದರೆ ಅವರಿಗೂ ಹೇಳಿ ಕಳುಹಿಸಿಕೊಡಿ ಎಂದು ಕೋರಿದರು.ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ತಹಸೀಲ್ದಾರ್ ಡಾ. ಸುಮಂತ್ ಬಿ.ಇ., ಅವರು ಜನತೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಇಲ್ಲಿ ಸಾಧ್ಯವಿರುವ ಎಲ್ಲಾ ಸಮಸ್ಯೆಗಳಿಗೂ ಇಲ್ಲಿಯೇ ಪರಿಹಾರ ನೀಡುತ್ತೇವೆ. ಕೆಲವೊಂದು ಸಮಸ್ಯೆಗಳ ಪರಿಹಾರಕ್ಕೆ ಸಂಬಂದ್ಧಪಟ್ಟ ಇಲಾಖೆಗಳಿಗೆ ಅರ್ಜಿಯನ್ನು ಕಳುಹಿಸಿ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಎ.ಸಿ.ಎಫ್. ಕೆ.ಟಿ. ಬೋರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಆರ್.ಎಫ್.ಓ. ಶರತ್ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಪದ್ಮಾ ನಾಯ್ಕ , ಉಪಾಧ್ಯಕ್ಷ ಶ್ರೀಧರ ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ, ಗ್ರಾಮ ಪಂಚಾಯತ್ ಸದಸ್ಯರು, ಭಟ್ಕಳ ಪುರಸಭೆಯ ಆರೋಗ್ಯಾಧಿಕಾರಿ ಸುಜಯ ಸೋಮನ್, ಜಾಲಿ ಪ.ಪಂ. ಮುಖ್ಯಾಧಿಕಾರಿ ರಾಮಚಂದ್ರ ವರ್ಣೆಕರ್,ಮಾವಳ್ಳಿ ಕಂದಾಯ ನಿರೀಕ್ಷಕ ಶ್ರೀನಿವಾಸ ಮಾಸ್ತಿ, ಗ್ರಾಮಲೆಕ್ಕಾಧಿಕಾರಿ ಸವಿತ ಗೌಡ ಮುಂತಾದವರು ಉಪಸ್ಥಿತರಿದ್ದರು.
Be the first to comment