ಇ – ವೇ ಬಿಲ್ ಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಕಿರುಕುಳ ನಿವಾರಣೆಗೆ ಕ್ರಮ : ಪೀಣ್ಯಾ ಕೈಗಾರಿಕಾ ಸಂಘಕ್ಕೆ ವಾಣಿಜ್ಯ ತೆರಿಗೆ ಇಲಾಖೆ ಭರವಸೆ

ಬೆಂಗಳೂರು, ಜೂ, 16; ಇ – ವೇ ಬಿಲ್ ಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಕೈಗಾರಿಕಾ ವಲಯಕ್ಕೆ ಆಗುತ್ತಿರುವ ಕಿರುಕುಳವನ್ನು ಶೀಘ್ರ ನಿವಾರಣೆ ಮಾಡುವುದಾಗಿ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ (ಜಾರಿ) ರಘುನಂದನ್ ಮೂರ್ತಿ ಭರವಸೆ ನೀಡಿದ್ದಾರೆ.

ನಗರದ ಪಿ.ಐ.ಎ ಆಡಿಟೋರಿಯಂ ನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಸಹಯೋಗದಲ್ಲಿ ಜಾಬ್ ವರ್ಕ್ ಮತ್ತು ಇ-ವೇ ಬಿಲ್ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇ-ವೇ ಬಿಲ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲಾಗುವುದು. ಇಲಾಖೆ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳವನ್ನು ಈ ವಲಯಕ್ಕೆ ಸಂಬಂಧಿಸಿದ ನೋಡಲ್ ಅಧಿಕಾರಿಯೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. .
ಸಭೆಯಲ್ಲಿ ಪೀಣ್ಯಾ ಕೈಗಾರಿಕಾ ಸಂಘದ ಅಧ್ಯಕ್ಷ ಮುರಳಿ ಕೃಷ್ಣ ಮಾತನಾಡಿ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಶೇ 80 ರಷ್ಟು ಕೈಗಾರಿಕೆಗಳು ಜಾಬ್ ವರ್ಕ್ ನೀಡುತ್ತಿವೆ. ಗುಜರಾತ್ ಹಾಗೂ ಕೇರಳದಲ್ಲಿ ಅನುಸರಿಸಿದಂತೆ ಜಾಬ್ ವರ್ಕ್ ಮಾಡುವ ಮೌಲ್ಯಮಾಪಕರು ಅಥವಾ ಬೆಂಗಳೂರು ನಗರ ಪ್ರದೇಶದ ಕೈಗಾರಿಕಾ ವಲಯಕ್ಕೆ ಇ-ವೇ ಬಿಲ್‌ಗಳಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದರು.

ಎಚ್ಚರಿಕೆ ಸೂಚನೆಗಳೊಂದಿಗೆ ಎರಡು ಅಥವಾ ಮೂರು ಬಾರಿ ಜಾಬ್ ವರ್ಕ್ ಸಂಸ್ಥೆಗಳಿಂದ ಇ-ವೇಬಿಲ್‌ನಲ್ಲಿ ಯಾವುದಾದರೂ ಮುದ್ರಣ ದೋಷಗಳಿದ್ದರೆ ಅವುಗಳಿಗೆ ವಿನಾಯಿತಿ ನೀಡಬೇಕು. ಜಿಎಸ್‌ಟಿ ಸಮಸ್ಯೆಗಳ ಬಗ್ಗೆ ತಿಳುವಳಿಕೆ ನೀಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮೂರು ತಿಂಗಳಿಗೊಮ್ಮೆ ಪೀಣ್ಯ ಕೈಗಾರಿಕಾ ಸಂಘದ ಆವರಣದಲ್ಲಿ ಜಿಎಸ್‌ಟಿ ಅಧಾಲತ್ ಆಯೋಜಿಸಲು ಮನವಿ ಮಾಡಿದರು. ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ವಿಷಯವನ್ನು ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ಶೀಘ್ರವಾಗಿ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

 

ಸಭೆಯಲ್ಲಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಜಾಗೃತಿ) ಬಸವರಾಜ್, . ವಿಭಾಗೀಯ ಸರಕು ಮತ್ತು ಸೇವಾ ತೆರಿಗೆಗಳ ಕಛೇರಿ, (ಆಡಳಿತ 6) ನಾಗಸ್ವಾಮಿ, ಪೀಣ್ಯ ಕೈಗಾರಿಕಾ ಸಂಘದ ಗೌರವ ಕಾರ್ಯದರ್ಶಿ ಶಿವಕುಮಾರ್. ಆರ್, ಚುನಾಯಿತ ಅಧ್ಯಕ್ಷ ಮಂಜುನಾಥ್ ಹೆಚ್, ಹಿರಿಯ ಉಪಾಧ್ಯಕ್ಷ ಆರಿಫ್ ಎಚ್.ಎಂ, ಜಂಟಿ ಕಾರ್ಯದರ್ಶಿ ಕುಮಾರ್ ಆರ್, ಖಜಾಂಚಿ ಪಾಟೀಲ್ ಡಿ ಹೆಚ್, ಜಂಟಿ ಖಜಾಂಚಿ ಬಸವರಾಜು, ಎಸ್.ಟಿ ಸಮಿತಿ ಅಧ್ಯಕ್ಷ ದಾನಪ್ಪ ಡಿ.ಪಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*