ರಾಜ್ಯ ಸುದ್ದಿಗಳು
ದೇವನಹಳ್ಳಿ
ಹಚ್ಚಹಸಿರಿನ ವಾತಾವರಣ ಸೃಷ್ಠಿಯಾಗಬೇಕಾದರೆ ಪ್ರತಿಯೊಬ್ಬರು ಒಂದೊಂದು ಗಿಡವನ್ನು ನೆಡುವಂತಾಗಬೇಕು ಎಂದು ಕುಂದಾಣ ನಾಡಕಚೇರಿ ಉಪತಹಶೀಲ್ದಾರ್ ಚೈತ್ರಾ ತಿಳಿಸಿದರು.ದೇವನಹಳ್ಳಿ ತಾಲೂಕಿನ ಕುಂದಾಣ ಬೆಟ್ಟದಲ್ಲಿ ಕುಂದಾಣ ನಾಡಕಚೇರಿ ವತಿಯಿಂದ ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಸಸಿಗಳನ್ನು ನೆಡುವುದರ ಮೂಲಕ ಅವರು ಮಾತನಾಡಿದರು. ಚಾರಣೀಗರನ್ನು ಕೈಬೀಸಿ ಕರೆಯುವಂತಹ ಐತಿಹಾಸಿಕ ನೆಲೆಯುಳ್ಳ ಕುಂದಾಣ ಬೆಟ್ಟದಲ್ಲಿ ಹಲವಾರು ರೀತಿಯ ಸಸ್ಯ ಪ್ರಭೇದಗಳನ್ನು ನೋಡಬಹುದು. ಇಲ್ಲಿನ ವಾತಾವರಣ ಎಂತಹವರಿಗೂ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಕೆಲಸದ ಒತ್ತಡದ ಸಮಯದಲ್ಲಿಯೂ ಸಹ ಪರಿಸರದ ಕಾಳಜಿಯನ್ನಿಟ್ಟುಕೊಂಡು ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಿದಾಗ ಮಾತ್ರ ಹಸಿರೀಕರಣ ನೋಡಲು ಸಾದ್ಯವಾಗುತ್ತದೆ. ಪ್ರತಿ ವಾರದಲ್ಲಿ ಒಂದು ಬಾರಿಯಾದರೂ ಇಂತಹ ಕೆಲಸಗಳನ್ನು ಮಾಡುವಂತಾಗಬೇಕು. ಈ ತಾಣವನ್ನು ಪ್ರವಾಸಿಗರ ತಾಣವನ್ನಾಗಿಸಲು ಸಂಬಂಧಿಸಿದ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ. ಇಲ್ಲಿನ ಕುಂದಾಣ ಬೆಟ್ಟದಲ್ಲಿನ ವಾತಾವರಣವನ್ನು ಕಣ್ಮುಂಬಿಕೊಂಡರೆ ಎಷ್ಟೋ ಖುಷಿ ಸಿಗುವಂತಾಗಿದೆ ಎಂದರು.
ಸ್ವಚ್ಛತೆಗೆ ಆದ್ಯತೆ ನೀಡಲು ನಾಮಫಲಕ ಅಳವಡಿಕೆ: ಇಲ್ಲಿನ ಪರಿಸರವನ್ನು ಪ್ರವಾಸಿಗರು ಮತ್ತು ಚಾರಣಿಗರು ಬಂದು ಸಮಯ ಕಳೆಯುತ್ತಾರೆ. ಇಲ್ಲಿನ ವಾತಾವರಣವನ್ನು ಕಲುಷಿತಗೊಳಿಸದಿರಲು ಸ್ವಚ್ಛತೆಗೆ ಆದ್ಯತೆಯನ್ನು ನೀಡಲು ಇಲ್ಲೊಂದು ನಾಮಫಲಕವನ್ನು ಹಾಕಿಸಲಾಗುತ್ತದೆ ಎಂದು ಹೇಳಿದರು.ಕುಂದಾಣ ಗ್ರಾಪಂ ಸದಸ್ಯ ಪ್ರವೀಣ್ ಮಾತನಾಡಿ, ಬೆಳೆಯುತ್ತಿರುವ ನಾಗರೀಕರಣದ ಜತೆಯಲ್ಲಿ ಮನುಷ್ಯ ಸಾಗುತ್ತಿದ್ದಾನೆ. ಹಿಂದಿನ ಕಾಲದಲ್ಲಿ ಬೆಟ್ಟ-ಗುಟ್ಟ, ರಸ್ತೆ ಅಕ್ಕ-ಪಕ್ಕ, ಗುಂಡು ತೋಪು, ಕೆರೆ-ಕಟ್ಟೆ, ಸರಕಾರಿ ಜಾಗಗಳು, ಸರಕಾರಿ ಶಾಲಾವರಣ, ಸರಕಾರಿ ಇಲಾಖಾ ಕಚೇರಿಗಳು, ಖಾಸಗಿ ಸ್ವತ್ತುಗಳಲ್ಲಿಯೂ ಸಹ ಗಿಡ-ಮರಗಳನ್ನು ನೋಡುತ್ತಿದ್ದೇವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಪರಿಸರದ ಬಗ್ಗೆ ಕಾಳಜಿಯನ್ನು ಹೊಂದಿದ್ದಾರೆ. ಎಲ್ಲರೂ ಒಗ್ಗೂಡಿ ಸಸಿಗಳನ್ನು ನೆಟ್ಟು ಪೋಷಿಸಿದರೆ ಸಮೃದ್ಧ ಹಸಿರಿನ ವಾತಾವರಣ ಸೃಷ್ಠಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.ಈ ವೇಳೆಯಲ್ಲಿ ಕುಂದಾಣ ನಾಡಕಚೇರಿಯ ಗ್ರಾಮಲೆಕ್ಕಿಗರಾದ ಸುಬ್ರಹ್ಮಣ್ಯ, ಲಾವಣ್ಯ, ಗ್ರಾಮ ಸಹಾಯಕ ಶ್ರೀನಿವಾಸ್, ಅರ್ಚಕ ಶೇಷಗಿರಿ ದೀಕ್ಷಿತ್, ಬೀರಸಂದ್ರ ರವಿ ಮತ್ತಿತರರು ಇದ್ದರು.
Be the first to comment