ಜಿಲ್ಲಾ ಸುದ್ದಿಗಳು
ರಾಯಚೂರು(ಮಸ್ಕಿ):
ದಾನಪ್ಪನವರು ಮೂಲತಹ ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ನಿಲೋಗಲ್ ಗ್ರಾಮದವರು. ಇವರ ಪೂರ್ಣ ಹೆಸರು ದಾನಪ್ಪ ಸಿ.ನಿಲೋಗಲ್ ದಲಿತರ ಭೂ ಹಕ್ಕಿಗಾಗಿ ಹೋರಾಟ ಮಾಡಿ ರಾಯಚೂರಿನಲ್ಲಿ ನೂರಾರು ಎಕರೆ ಭೂಮಿಯನ್ನು ತನ್ನ ಹೋರಾಟದ ಮೂಲಕ ದಲಿತರಿಗೆ ಕೊಡಿಸುವಲ್ಲಿ ಯಶಸ್ವಿಯಾದ ನಾಯಕ. ಅಂದು ಇವರಿಗೆ ದಲಿತ ಸಂಘರ್ಷ ಸಮಿತಿಯ ಸಂಪರ್ಕವಿರಲಿಲ್ಲ. ಮೊದಲು ಇವರಿಗೆ ಸಂಪರ್ಕವಾಗಿದ್ದು ಚಂದ್ರಶೇಖರ ಪಾಟೀಲರ ತಮ್ಮ ವಿಜಯ ಪಾಟೀಲ್,ಅನಂತರ ಅವರ ಮೂಲಕವೇ ಬಿ.ಕೃಷ್ಣಪ್ಪ ನವರ ಸಂಪರ್ಕಕ್ಕೆ ಬಂದರು. ಅಲ್ಲಿಂದ ದಲಿತ ಸಂಘರ್ಷ ಸಮಿತಿಯ ನಾಯಕತ್ವದ ಭಾಗವಾಗಿ ಕರ್ನಾಟಕದಾದ್ಯಂತ ಕೆಲಸ ಮಾಡಿದರು.ದಾ
ನಪ್ಪನವರು ದಲಿತ ಹೋರಾಟ, ರೈತ ಹೋರಾಟ, ಮಹಿಳಾ ಹೋರಾಟ ಹೀಗೆ ಹಲವು ಆಯಾಮಗಳಲ್ಲಿ ತಮ್ಮ ಹೋರಾಟವನ್ನು ವಿಸ್ತರಿಸಿಕೊಂಡು ಬಂದಿದ್ದಾರೆ. ಇವರ ಹೋರಾಟಗಳಿಗೆ ಅಂಬೇಡ್ಕರ್, ಫುಲೆ, ಶಾಹು ಮಹಾರಾಜರು ಮುಂತಾದ ಮಹನೀಯರು ಇವರ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದಾರೆ. ಇವರು ಹೋರಾಟಗಾರರಷ್ಟೆ ಅಲ್ಲ ಒಬ್ಬ ಸೂಕ್ಷ್ಮ ಕವಿಯೂ ಕೂಡ ಹೌದು.ನೀವು ಎಲ್ಲಾ ಕಡೆಯೂ ಕೇಳಿರಬಹುದು “ಅಂಬೇಡ್ಕರ ಹೇಳಿದ ಮಾತು ಮರೆಯಬೇಡಿ ಮರೆತು ಮಲಗಬೇಡಿ” ಎಂಬ ಶೀರ್ಷಿಕೆಯ ಹಾಡಿನ ರಚನಾಕಾರರು ಇವರೇ.ಕರ್ನಾಟಕದ ಉದ್ದಗಲಕ್ಕು ಇದು ಜನಪದೀಯವಾಗಿ ಮನೆಮಾತಾಗಿದೆ. ಅಂಬೇಡ್ಕರ್ ಜಯಂತಿಯ ದಿನದಂದು ಪ್ರತಿ ಹಳ್ಳಿಯಲ್ಲು ಈ ಹಾಡನ್ನು ಬಳಸಲಾಗುತ್ತದೆ. ಅಷ್ಟೊಂದು ಮಹತ್ತರವಾದ ಜನಪದೀಯವಾಗಿ ಬೆರೆತು ಹೋಗಿದೆ. ಇದಲ್ಲದೆ “ಜೋಡು ಗುಂಡಿಗೆ” ಎಂಬ ಕವನ ಸಂಕಲನವೂ ಕೂಡ ಇವರದ್ದೆ ಆಗಿದೆ.
ಕವಿಯಾಗಿ, ಹೋರಾಟಗಾರನಾಗಿ ೪೦ ವರ್ಷಗಳು ಸುಧೀರ್ಘ ಸೇವೆ ಸಲ್ಲಿಸಿದ್ದಾರೆ. ಇದೀಗ ಇವರಿಗೆ ೬೦ ವರ್ಷ ದಾಟಿ ಹೋದವು. ಅವರ ೪೦ ವರ್ಷ ಹೋರಾಟದ ಬದುಕಿನಲ್ಲಿ ಲೆಕ್ಕವಿಲ್ಲದಷ್ಟು ಹೋರಾಟಗಳನ್ನು ಮಾಡಿದ್ದಾರೆ. ೬೦ ವರ್ಷ ತುಂಬಿದರು ಎದೆಗುಂದದೆ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಸಿಡಿದು ಬಂದು ಬೀದಿಗೆ ನಿಲ್ಲುತ್ತಾರೆ. ಇವರ ಸಮಗ್ರ ಸೇವೆಯನ್ನು ಗುರುತಿಸಿ ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರವು ಡಾಕ್ಟರ್. ಬಾಬು ಜಗಜೀವನ ರಾಮ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ದಣಿವರಿಯದ ಜೀವ ದಾನಪ್ಪನವರಿಗೆ ಇಡೀ ರಾಯಚೂರು ಜಿಲ್ಲೆ ಸೇರಿ ರಾಜ್ಯದ ಜನತೆಯು ಹೃದಯಾಂತರಾಳದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
Be the first to comment