ಜಿಲ್ಲಾ ಸುದ್ದಿಗಳು
ಹೊನ್ನಾವರ
ಪ್ರಭಾತನಗರದ ಸಾರ್ವಜನಿಕ ಶೌಚಾಲಯದ ಸುತ್ತಮುತ್ತಲು ಪೊದೆಗಳು ಬೆಳೆದಿದ್ದು ಶೌಚಾಲಯಕ್ಕೆ ತೆರಳಲು ದಾರಿ ಕಾಣದಂತಾಗಿದೆ. ಪೊದೆಗಳು ಬೆಳೆದ ಪರಿಣಾಮ ಶೌಚಾಲಯ ನೋಡಲು ಮಾತ್ರ ಸೀಮಿತವಾಗಿದ್ದು ಕೆಲವು ತಿಂಗಳುಗಳಿಂದ ಸಾರ್ವಜನಿಕರ ಬಳಕೆಗೆ ಸಿಗುತ್ತಿಲ್ಲ.
ಹೊನ್ನಾವರ ಪಟ್ಟಣದ ಪ್ರಮುಖ ಸ್ಥಳವಾಗಿರುವ ಪ್ರಭಾತನಗರವು ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಇರುವುದರಿಂದ ಪ್ರತಿನಿತ್ಯವೂ ಸಾವಿರಾರು ಜನರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ನಿರ್ಮಿಸಿದ ಶೌಚಾಲಯದ ಸುತ್ತಲೂ ಮುಳ್ಳು ಪೊದೆಗಳಿಂದ ಕೂಡಿದ್ದು ಸಾರ್ವಜನಿಕರಿಗೆ ಯಾವ ಕಡೆಯಿಂದ ಹೋಗಬೇಕು ಎನ್ನುವುದು ಗೋಚರವಾಗುತ್ತಿಲ್ಲ. ಇದರ ಸುತ್ತಮುತ್ತ ಇಷ್ಟು ಪೊದೆಗಳು ದಟ್ಟವಾಗಿ ಬೆಳೆದಿದ್ದರೂ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಇದನ್ನು ಸರಿಪಡಿಸಲು ಮುಂದಾಗುತ್ತಿಲ್ಲ.
ಸಾರ್ವಜನಿಕರ ಸಮಸ್ಯೆ ಕುಂದು ಕೊರತೆ ನಿವಾರಿಸಲು ಆಯ್ಕೆಯಾದ ಪಟ್ಟಣ ಪಂಚಾಯತ್ ಪ್ರತಿನಿಧಿಗಳು ಇಂಥ ವಿಷಯದ ಬಗ್ಗೆ ಚಕಾರವೆತ್ತುತ್ತಿಲ್ಲ. ತಮ್ಮ ಪಕ್ಷದ ನಾಯಕರು ಬಂದಾಗ ಅವರೊಡನೆ ಹೆಜ್ಜೆ ಹಾಕಿ ವೇದಿಕೆಯಲ್ಲಿ ಪಕ್ಕ ಕುಳಿತುಕೊಳ್ಳುವುದರ ಹೊರತಾಗಿ ವಾರ್ಡ್ ಸಮಸ್ಯೆ ಬಗೆಹರಿಸುತ್ತಿಲ್ಲ ಎನ್ನುವುದು ಪಟ್ಟಣ ನಿವಾಸಿಗಳು ಹಾಗೂ ಸಾರ್ವಜನಿಕರ ಆರೋಪವಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಕೊಡಬೇಕಾಗಿದೆ.
Be the first to comment