ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಕೇಂದ್ರ ಅಧ್ಯಯನ ತಂಡವು ಜಿಲ್ಲೆಯ ಜಮಖಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ಅತಿವೃಷ್ಟಿ ಮತ್ತು ನೆರೆಯಿಂದಾದ ಹಾನಿ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲನೆ ಮಾಡಲಾಯಿತು.
ಭಾರತ ಸರಕಾರದ ಜಲಶಕ್ತಿ ಮಂತ್ರಾಲಯದ ಅಧೀಕ್ಷಕ ಇಂಜಿನೀಯರ್ ಗುರುಪ್ರಸಾದ ಕೇಂದ್ರ ಹಣಕಾಸು ಮಂತ್ರಾಲಯದ ಉಪಕಾರ್ಯದರ್ಶಿ ಮಹೇಶಕುಮಾರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ವಿಜ್ಞಾನಿ ಎಸ್.ಎಸ್.ಗವಾಸ್ಕರ ಅವರನ್ನೊಂಗೊಂಡ ಅಧ್ಯಯನ ತಂಡವು ಜಮಖಂಡಿ ಉಪವಿಭಾಗದ ವ್ಯಾಪ್ತಿಯ ಮುಧೋಳ, ರಬಕವಿ-ಬನಹಟ್ಟಿ, ಜಮಖಂಡಿ ತಾಲೂಕಿನ ಆಯ್ದ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಧೋಳ ತಾಲೂಕಿನ ಚಿಚಖಂಡಿ ಸೇತುವೆಗೆ ಭೇಟಿ ನೀಡಿದ ಕೇಂದ್ರ ತಂಡವು ಭೀಮನಗೌಡ ಪಾಟೀಲರ, ರಾಘವೇಂದ್ರ ಪಾಟೀಲ ಹಾಗೂ ಯಂಕನಗೌಡ ಪಾಟೀಲರ ಕಬ್ಬುಬೆಳೆ ಹಾನಿ ವೀಕ್ಷಿಸಿದರು. ಹೆಸ್ಕಾಂಗೆ ಸಂಬಂಧಿಸಿದ 58 ವಿದ್ಯುತ್ ಕಂಬ, 5 ಟಿಸಿ, 11.6 ಕಿ.ಮೀ ಕಂಡಕ್ಟರ ಹಾನಿಯಾಗಿರುವದನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಚಿಚಖಂಡಿಯ ಮಿನಿ ವಾಟರ್ ಯೋಜನೆಯ ಹಾನಿಯನ್ನು ಸಹ ವೀಕ್ಷಣೆ ಮಾಡಿದರು.
ಸೋರಗಾವಿ ಗ್ರಾಮಕ್ಕೆ ತೆರಳಿ ಪ್ರವಾಹದಿಂದಾದ ಮನೆಗಳ ಹಾನಿ, ಯಾದವಾಡ ಸೇತುವೆಗೆ ತೆರಳಿ ಲೋಕೋಪಯೋಗಿಯ ರಸ್ತೆ, ಸೂರ್ಯಕ್ರಾಂತಿ ಬೆಳೆ ಹಾನಿ, ವಿದ್ಯುತ್‍ಗೆ ಸಂಬಂಧಿಸಿದ ಮೂಲಸೌಕರ್ಯಗಳು, ಮಿರ್ಜಿ ಗ್ರಾಮದಲ್ಲಿ ಹಾನಿಗೊಳಗಾದ ಮನೆ, ಬಟ್ಟೆ, ಪಾತ್ರೆ, ಮನೆಯ ಹಿಡುವಳಿ ವಸ್ತುಗಳ ನಷ್ಟ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಹಾನಿ, ಹೆಸ್ಕಾಂನ ಮೂಲಸೌಕರ್ಯಗಳ ಹಾನಿಗಳನ್ನು ಪರಿಶೀಲಿಸಿದರು.
ರಬಕವಿ-ಬನಹಟ್ಟಿ ತಾಲೂಕಿನ ಡವಳೇಶ್ವರದಲ್ಲಿ ಕುಡಿಯುವ ನೀರಿನ, ಹೆಸ್ಕಾಂನ ಮೂಲಸೌಕರ್ಯ ಹಾನಿ, ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ, ಲೋಕೋಪಯೋಗಿಗೆ ಸಂಬಂಧಿಸಿದ ಹಾನಿಗೊಳಗಾದ ರಸ್ತೆ, ಬೆಳೆ ಹಾನಿ ಪರಿಶೀಲನೆ ನಡೆಸಿದರು. ಅಲ್ಲದೇ ರೈತರಿಂದ ಹಾನಿಯ ಕುರಿತಂತೆ ಮಾಹಿತಿ ಪಡೆದುಕೊಂಡರು.
ಜಿಲ್ಲೆಯ ಹಾನಿ ಪ್ರದೇಶಗಳಿಗೆ ಭೇಟಿ ನೀಡುವ ಪೂರ್ವದಲ್ಲಿ ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಅತಿವೃಷ್ಟಿ, ನೆರೆಯಿಂದಾದ ಹಾನಿಯ ಮಾಹಿತಿಯನ್ನು ಪಿಪಿಟಿ ಮೂಲಕ ಮನವರಿಕೆ ಮಾಡಿಕೊಟ್ಟರು.
ಪ್ರಸಕ್ತ ಸಾಲಿನ ಜುಲೈ ಕೊನೆಯವಾರದಲ್ಲಿ ಉಂಟಾದ ಪ್ರವಾಹದಿಂದ ಅಂದಾಜು ಒಟ್ಟು 420.17 ಕೋಟಿ ರೂ.ಗಳಷ್ಟು ಹಾನಿಯಾಗಿರುತ್ತದೆ. ಕೃಷಿ 24405 ಹೆಕ್ಟರ್ ಪ್ರದೇಶ ಹಾನಿಯಿಂದ 220.19 ಕೋಟಿ, ತೋಟಗಾರಿಕೆ 875.6 ಹೆಕ್ಟೆರ್ ಹಾನಿಯಿಂದ 7.39 ಕೋಟಿ, ರೇಷ್ಮೆ 6.7 ಹೆಕ್ಟೆರ್ ಹಾನಿಯಿಂದ 32 ಸಾವಿರ, ಲೋಕೋಪಯೋಗಿ ಇಲಾಖೆ ಸಂಬಂಧಿಸಿದ 268 ಕಿ.ಮೀ ರಸ್ತೆ, 7 ಸೇತುವೆ ಹಾನಿಯಿಂದ 125.79 ಕೋಟಿ, ಗ್ರಾಮೀಣ ಪ್ರದೇಶದ 710 ಕಿಮೀ ರಸ್ತೆ ಹಾಗೂ 18 ಸೇತುವೆ ಹಾನಿಯಿಂದ 13.91 ಕೋಟಿ ರೂ.ಗಳಷ್ಟು ಹಾನಿಯಾಗಿರುತ್ತದೆ ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯಿಂದ 18 ಕೆನಾಲ್, 11 ಎಂಬಕಮೆಂಟ್, 4 ಲಿಪ್ಟ ನೀರಾವರಿ ಯೋಜನೆ ಹಾನಿಯಿಂದ 21.86 ಕೋಟಿ, ಶಿಕ್ಷಣ ಇಲಾಖೆ 30 ಶಾಲೆಗಳು, 77 ಕೊಠಡಿ ಹಾನಿಯಿಂದ 1.44 ಕೋಟಿ, ನಗರ ಅಭಿವೃದ್ದಿ ಇಲಾಖೆಯಿಂದ 30 ಕಿಮೀ ರಸ್ತೆ, 1 ಕುಡಿಯುವ ನೀರಿನ ಯೋಜನೆ ಹಾನಿಯಿಂದ 3.39 ಕೋಟಿ, 13 ದೊಡ್ಡ ಜಾನುವಾರು, 18 ಸಣ್ಣ ಜಾನುವಾರು, 21 ಆಡುಗಳು ಮೃತಪಟ್ಟಿದ್ದು, 52 ಪರಿಹಾರಧನ ಪೈಕಿ 7.80 ಲಕ್ಷ ವಿತರಿಸಲಾಗಿದೆ. ಗ್ರಾಮೀಣ ಕುಡಿಯುವ ನೀರಿನ 33 ಯೋಜನೆಗಳು, 29097 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.ಎ ಕೆಟಗರಿ 7, ಬಿ-17 ಹಾಗೂ ಸಿ-122 ಸೇರಿ ಒಟ್ಟು 146 ಮನೆಗಳು ಹಾನಿಗೊಳಿಗಾರಿರುವುದಾಗಿ ತಿಳಿಸಿದರು.
ಬೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಒ ಟಿ.ಭೂಬಾಲನ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ, ಲೊಕೋಪಯೋಗಿ ಇಲಾಖೆಯ ಮುಖ್ಯ ಇಂಜಿನೀಯರ್ ಪ್ರಶಾಂತ, ಮುಧೋಳ, ಜಮಖಂಡಿ ತಹಶೀಲ್ದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ವಿವಿಧ ಬೇಡಿಕೆ ಸಲ್ಲಿಸಿದ ರೈತರು
ಮುಧೋಳ ತಾಲೂಕಿನ ಚಿಚಖಂಡಿಗ್ರಾಮ ವ್ಯಾಪ್ತಿಗೆ ಭೇಟಿ ನೀಡಿದ ಕೇಂದ್ರ ತಂಡಕ್ಕೆ ಅಲ್ಲಿನ ರೈತರು ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು. ಘಟಪ್ರಭಾ ನದಿಯಿಂದ ಪ್ರವಾಹದಿಂದಾದ ಕಳೆದ 3 ವರ್ಷಗಳಿಂದ 20 ಸಾವಿರ ಹೆಕ್ಟೆರ್ ಕೃಷಿ ಭೂಮಿಯಲ್ಲಿರುವ ಬೆಳೆಗಳು ಪ್ರತಿ ವರ್ಷ ಹಾಳಾಗುತ್ತಿದೆ. ಸಾಕಷ್ಟು ಮನೆ, ಜಾನುವಾರು, ಜನರ ಶೆಡ್, ಕಣಿಕೆ ಬಣಿವೆಗಳು ಹಾಳಾಗುತ್ತಿವೆ. ಕಬ್ಬಿನ ಬೆಳೆ ಪ್ರತಿ ಹೆಕ್ಟೇರ್‍ಗೆ ಮಿತಿಯನ್ನು ಹಾಕದೇ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡರು.
ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜ್ ಕಂ ಬ್ರಿಡ್ಜ್‍ಗಳು ಹಾಗೂ ಬ್ಯಾರೇಜಗಳನ್ನು ಇನ್ನು 100 ಮೀಟರ್‍ವರೆಗೆ ಅಗಲೀಕರಣ ಮಾಡಿ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು. ಕಬ್ಬು ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸುವದ ಜೊತೆಗೆ ನದಿ ದಡದಲ್ಲಿರುವ ಜಿಲ್ಲಾ ರಸ್ತೆ, ಗ್ರಾಮೀಣ ರಸ್ತೆಗಳು ಕೊಚ್ಚಿಕೊಂಡು ಹೋಗಿದ್ದು, ಅವುಗಳನ್ನು ಶೀಘ್ರವೇ ದುರಸ್ಥಿತಿಯಾಗುವಂತೆ ಮಾಡಬೇಕೆಂದು ಮನವಿ ಮಾಡಿಕೊಂಡರು. ಈ ಬಗ್ಗೆ ಗಮನ ಸೆಳೆಯುವುದಾಗಿ ಕೇಂದ್ರ ಅಧ್ಯಯನ ತಂಡ ತಿಳಿಸಿತು.
Be the first to comment