ರಾಜ್ಯ ಸುದ್ದಿಗಳು
ಬೆಂಗಳೂರು, ಏಪ್ರಿಲ್ 5 :
ಎಸ್ ಸಿ, ಎಸ್ ಟಿ ವರ್ಗದವರಿಗಾಗಿ ಭೂ ಒಡೆತನ ಯೋಜನೆಯಡಿ ನೀಡಲಾಗುತ್ತಿದ್ದ 15 ಲಕ್ಷ ರೂ. ಸಹಾಯಧನವನ್ನು 20 ಲಕ್ಷ ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ: ಬಾಬು ಜಗಜೀವನ್ ರಾಮ್ ರವರ 115ನೇ ಜನ್ಮದಿನಾಚರಣೆಯ ಹಾಗೂ ಡಾ:ಬಾಬು ಜಗಜೀವನ ರಾಂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಸ್ಸಿ ಎಸ್ಟಿ ಸಮುದಾಯದವರು ಮನೆ ನಿರ್ಮಾಣಕ್ಕಾಗಿ ನೀಡಲಾಗುತ್ತಿದ್ದ 1,75,000 ರೂ.ಗಳ ಸಹಾಯಧನವನ್ನು 2 ಲಕ್ಷ ರೂ.ಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದರು.
ಸ್ವಯಂ ಉದ್ಯೋಗ ಯೋಜನೆ :
ಸ್ವಯಂ ಉದ್ಯೋಗ ಮಾಡುವ ಎಸ್ಸಿ ಎಸ್ಟಿ ಸಮುದಾಯಕ್ಕೆ ಪ್ರತಿ ತಾಲ್ಲೂಕಿನಲ್ಲಿ ಬಾಬು ಜಗಜೀವರಾಂ ಸ್ವಯಂ ಉದ್ಯೋಗ ಯೋಜನೆಯನ್ನು ತರಲು ತೀರ್ಮಾನಿಸಲಾಗಿದೆ. ಈ ಯೋಜನೆಯ ರೂಪುರೇಷೆಯನ್ನು ಸಿದ್ಧಪಡಿಸಿ ಕೂಡಲೇ ಒಂದು ತಿಂಗಳ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು.
75 ಯೂನಿಟ್ ವರೆಗೆ ಉಚಿತ ವಿದ್ಯುತ್ :
ಗ್ರಾಮೀಣ ಪ್ರದೇಶದಲ್ಲಿ ಕುಟಿರ ಯೋಜನೆಯಡಿ ಎಸ್ ಸಿ ಎಸ್ಟಿ ಸಮುದಾಯದವರಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ. ಮುಂದಿನ ವಾರದೊಳಗಾಗಿ ಸರ್ಕಾರಿ ಆದೇಶವನ್ನು ಹೊರಡಿಸಲಾಗುವುದು ಎಂದು ತಿಳಿಸಿದರು.
ವಸತಿ ಶಾಲೆಗಳಲ್ಲಿ ವಿಶೇಷ ತರಬೇತಿ:
ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ವಿಶೇಷ ತರಬೇತಿ ನೀಡುವ ವಿನೂತನ ಯೋಜನೆಯನ್ನು ಈ ವರ್ಷ ಪ್ರಾರಂಭ ಮಾಡಲಾಗುವುದು. ‘ಮುಖ್ಯಮಂತ್ರಿ ಮಾರ್ಗದರ್ಶಿನಿ ವೇದಿಕೆಯ ಮೂಲಕ 8 ರಿಂದ 12 ವರೆಗಿನ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಎಸ್ ಸಿ ಎಸ್ ಟಿ ಸಮುದಾಯಗಳಿಗಾಗಿ ಸ್ಟಾರ್ಟ್ ಅಪ್ ಯೋಜನೆಯಡಿ 50 ಲಕ್ಷ ರೂ.ಗಳ ಸಹಾಯಧನ ನೀಡುವ ಯೋಜನೆಯನ್ನು ಆಯವ್ಯಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆಹಾರ ಉತ್ಪಾದನೆಯ ಮೂಲಕ ಹಸಿರು ಕ್ರಾಂತಿ:
ಭಾರತ ದೇಶದ ಸಂವಿಧಾನದ ಅನುಷ್ಠಾನದಲ್ಲಿ ಬಾಬು ಜಗಜೀವನ ರಾಂ ಪಾತ್ರ ಮಹತ್ವವಾದದ್ದು. ಪ್ರಾಮಾಣಿಕತೆ, ನಿಷ್ಠೆ, ಬದ್ಧತೆಯ ಮೂರ್ತರೂಪವಾಗಿದ್ದರು. ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದಾಗ ಮಾತ್ರ ದೇಶ ಸ್ವಾವಲಂಬನೆಯಾಗಲು ಸಾಧ್ಯ ಎಂದು ನಂಬಿದ್ದರು. ಕೃಷಿ ಸಚಿವರಾಗಿ ಹಸಿರು ಕ್ರಾಂತಿ ಮಾಡುವ ಮೂಲಕ ಕೆಲವೇ ವರ್ಷಗಳಲ್ಲಿ ದೇಶದಲ್ಲಿ ಆಹಾರದ ಸ್ವಾವಲಂಬನೆಯನ್ನು ತಂದಂತ ಖ್ಯಾತಿ ಅವರಿಗೆ ಸಲ್ಲುತ್ತದೆ ಎಂದರು.
ಶಿಕ್ಷಣ, ಉದ್ಯೋಗ, ಸಾಮಾಜಿಕ ಗೌರವ, ಅವಕಾಶಗಳು ದೊರೆತಾಗ ಮಾತ್ರ ಸಮುದಾಯ ಮುಖ್ಯವಾಹಿನಿಗೆ ಬಂದಾಗ ಮಾತ್ರ ಭಾರತ ಸಮಗ್ರ ಅಭಿವೃದ್ಧಿ ಪೂರ್ಣವಾಗುತ್ತದೆ ಗ್ರಾಮೀಣ ಪ್ರದೇಶದಲ್ಲಿ ಭೂ ಒಡೆತನ ಹೊಂದಿರುವವರಿಗೆ ಸಾಮಾಜಿಕ ಗೌರವ ದೊರೆಯುತ್ತದೆ.ಸಮುದಾಯದವರ ಭೂ ಒಡೆತನಕ್ಕೆ ಸಂಬಂಧಿಸಿದಂತೆ ಭೂ ಸುಧಾರಣಾ ಕಾಯ್ದೆ ಜಾರಿ ಮಾಡಲಾಗಿದೆ. ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿರುವ ತೊಡಕುಗಳನ್ನು ನಿವಾರಿಸಿ ಸಮುದಾಯದವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದರು.
Be the first to comment