ವಿಜಯಪುರ :
ಹಿಂದುಳಿದ ಅಲೆಮಾರಿ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್ಟಿ) ಗೆ ಸೇರಿಸಬೇಕೆಂಬ ಬಹುದಿನಗಳ ಬೇಡಿಕೆಯ ಈಡೇರಿಕೆಗೆ ಸರಕಾರದ ಗಮನ ಸೆಳೆಯಲು ಬರುವ ಮೇ ಇಲ್ಲವೇ ಜೂನ್ ತಿಂಗಳಲ್ಲಿ ಹೆಳವ ಸಮಾಜದ ರಾಜ್ಯಮಟ್ಟದ ಬೃಹತ್ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯಾಧ್ಯಕ್ಷ ಎಂ.ನಾಗರಾಜ ಗುರೂಜಿ ಹೇಳಿದರು.
ವಿಜಯಪುರ ನಗರದ ವ್ಹಿಕೆಜಿ ಹೊಟೇಲ್ ಸಭಾಭವನದಲ್ಲಿ ರವಿವಾರ ನಡೆದ ಜಿಲ್ಲಾ ಹೆಳವ ಸಮಾಜದ ಜನಜಾಗೃತಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಈ ಸಮಾವೇಶದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಹೆಳವ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಾಜದ ಒಗ್ಗಟ್ಟು ಪ್ರದರ್ಶಿಸಬೇಕೆಂದು ಕಳಕಳಿಯ ಮನವಿ ಮಾಡಿಕೊಂಡರು.
ಎಸ್ಟಿ ಸೇರ್ಪಡೆ ಕುರಿತಂತೆ ರಾಜ್ಯಮಟ್ಟದ ಸಮಾವೇಶದಲ್ಲಿ ಸರಕಾರಕ್ಕೆ ಮೊದಲಿಗೆ ನಮ್ಮ ಬೇಡಿಕೆ ಮಂಡಿಸಿ ಎರಡು ತಿಂಗಳ ಗಡುವು ನೀಡಲಾಗುವುದು. ಅದಕ್ಕೆ ಸರಕಾರ ಸ್ಪಂದಿಸದೇ ಹೋದರೆ ಮುಂದೆ ಬೆಂಗಳೂರಿನ ಫ್ರೀಡಂ ಪಾಕ್೯ ನಲ್ಲಿ ನಿರಂತರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಸ್ಟಿ ಹೋರಾಟಕ್ಕೆ ಹೆಳವ ಸಮಾಜದ ಪ್ರತಿಯೊಬ್ಬರ ಬೆಂಬಲ ಅವಶ್ಯವಾಗಿ ಬೇಕು. ರಾಜ್ಯ ಸರಕಾರ ಹೆಳವ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡುವವರೆಗೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಕರೆ ನೀಡಿದರು. ಹೆಳವ ಸಮಾಜಕ್ಕೆ ಸರಕಾರ ಯಾವ ನೆರವೂ ನೀಡಬೇಕಾಗಿಲ್ಲ. ಬರೀ ಈ ಸಮಾಜವನ್ನು ಎಸ್ಟಿಗೆ ಸೇರಿಸಿದರೆ ಸಾಕು. ಎಸ್ಟಿಗೆ ಸೇರಿದರೆ ಹೆಳವ ಸಮಾಜದವರು ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ ಎಂದರು.
ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಹೆಳವರ ಮಾತನಾಡಿ,ನಮ್ಮ ಸಂಘಟನೆಯ ಹೋರಾಟದ ಫಲವಾಗಿ ಕುಲಶಾಸ್ತ್ರೀಯ ಅಧ್ಯಯನ ವರದಿ ಸರಕಾರಕ್ಕೆ ಸಲ್ಲಿಕೆಯಾದರೂ ಆ ವರದಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿದೆ. ನಮ್ಮ ಬೇಡಿಕೆ ಈಡೇರಲು ಮುಂದಿನ ಹೋರಾಟ ತೀವ್ರಗೊಳ್ಳಬೇಕಿದೆ ಎಂದರು.
ರಾಜ್ಯ ಖಜಾಂಚಿ ಆಂಜನಪ್ಪ, ಆಂತರಿಕ ಲೆಕ್ಕ ಪರಿಶೋಧಕ ಹಣಮಂತ ಗೋಗಿ ವಕೀಲರು (ಸುರಪುರ) ಮಾತನಾಡಿ, ಎಸ್ಟಿ ಹೋರಾಟದಲ್ಲಿ ಹೆಳವ ಸಮಾಜ ಬಾಂಧವರು ಸಕ್ರಿಯವಾಗಿ ಭಾಗವಹಿಸಬೇಕು. ಹೋರಾಟಕ್ಕೆ ಹಿಂಜರಿಯಬಾರದು.ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ನಮ್ಮ ಬೇಡಿಕೆ ಈಡೇರಲು ಸಾಧ್ಯ ಎಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಳ್ಳಿಮನಿ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಅವರು ಅತಿಥಿಗಳಾಗಿ ಮಾತನಾಡಿ, ಸಾಮಾಜಿಕವಾಗಿ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತೀ ಹಿಂದುಳಿದ ಹೆಳವ ಸಮಾಜ ಎಸ್ಟಿ ಗೆ ಸೇರಲು ಎಲ್ಲ ಅರ್ಹತೆಗಳಿವೆ.ಈ ಸಮಾಜದ ಎಸ್ಟಿ ಹೋರಾಟಕ್ಕೆ ನಾವು ಸಂಪೂರ್ಣ ಬೆಂಬಲ ನೀಡುವ ಜೊತೆಗೆ ತನು-ಮನ-ಧನದಿಂದ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.ಸಮಾಜ ಮುಖಂಡ ಸಿದ್ದಪ್ಪ ಹೆಳವರ ಕೊಲ್ಹಾರ ಮಾತನಾಡಿ, ಹೆಳವ ಸಮಾಜವನ್ನು ಎಸ್ಟಿಗೆ ಸೇರಿಸುವವರೆಗೆ ನಾನು ಬೆಂಗಳೂರ ಪ್ರೀಡಂ ಪಾಕ್೯ನಲ್ಲಿ ನಿರಂತರ ಸತ್ಯಾಗ್ರಹ ನಡೆಸಲು ತಯಾರಿದ್ದೇನೆ ಎಂದು ಘೋಷಿಸಿದರು.
ಬಸವರಾಜ ಗುರೂಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಳವ ಸಮಾಜಬಾಂಧವರು ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮರೆತು ಸಮಾಜದ ಏಳ್ಗೆಗೆ ಒಗ್ಗೂಡಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ಶೀಮತಿ ಬೆನಕಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಿವಶರಣ ಹೆಳವರ ಸ್ವಾಗತಿಸಿದರು.ಪತ್ರಕರ್ತ ದೇವೇಂದ್ರ ಹೆಳವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಐಹೊಳೆ ಕಾರ್ಯಕ್ರಮ ನಿರೂಪಿಸಿದರು.
Be the first to comment