ರಾಜ್ಯ ಸುದ್ದಿಗಳು
ಬೆಂಗಳೂರು
ಜನವರಿ 28 :ನಮ್ಮದು ಅರಿವಿನ ಜೊತೆಗೆ ಅಂತ:ಕರಣವುಳ್ಳ ಮಾನವೀಯತೆಯ ಗುಣಧರ್ಮದ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ತಿಳಿಸಿದರು.ಅವರು ತಮ್ಮ ನೇತೃತ್ವದ ಸರ್ಕಾರ ಆರು ತಿಂಗಳ ಅವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಗತಿಯ ಮಾಹಿತಿ ನೀಡುವ ‘ ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ‘ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಅರಿವೇ ಗುರು ಎಂದು ನಂಬಿರುವ ನಮಗೆ ಜನರಿಂದ, ಜನರಿಗೋಸ್ಕರ, ಜನಕಲ್ಯಾಣಕ್ಕಾಗಿ ದುಡಿಯುಬೇಕೆಂಬ ಅರಿವಿದೆ. ನಾವು ತೆಗೆದುಕೊಳ್ಳುವ ಪ್ರತಿ ನಿರ್ಣಯದಲ್ಲಿ ಸಾರ್ವಜನಿಕ ಹಿತವೇ ಕೇಂದ್ರಬಿಂದುವಾಗಿದೆ. ಜನಹಿತದ ನಿರ್ಣಯಗಳಲ್ಲಿ ಸಚಿವ ಸಂಪುಟದ ಸಂಪೂರ್ಣ ಸಹಕಾರವಿದೆ ಎಂದರು.*ಕೋವಿಡ್ ಸಂದರ್ಭದಲ್ಲಿ 24,000 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮ*ಕೋವಿಡ್ ಸಂದರ್ಭದಲ್ಲಿಯೂ 24,000 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.
ಕರ್ನಾಟಕವನ್ನು ಮುನ್ನೆಡೆಸುವ ಕೆಲಸವನ್ನು ಮಾಡಲಾಗಿದೆ. ಪ್ರವಾಹದಿಂದಾದ ಬೆಳೆಹಾನಿಗೆ ಪರಿಹಾರವನ್ನು ದುಪ್ಪಟ್ಟು ಹೆಚ್ಚಿಸಲಾಗಿದ್ದು, 14 ಲಕ್ಷ ರೈತರಿಗೆ ಪರಿಹಾರವನ್ನು ನೀಡಲಾಗಿದೆ. ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ, ವಿಧವಾ ವೇತನವನ್ನು ಹೆಚ್ಚಿಸಲಾಗಿದ್ದು, 58 ಲಕ್ಷ ಹಿರಿಯರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಸಹಾಯ ಮಾಡುವ ಸರ್ಕಾರದ ಅಂತ:ಕರಣದ ಮತ್ತೊಂದು ಮುಖವಾಗಿದೆ ಎಂದು ತಿಳಿಸಿದರು.ರೈತಾಪಿ ಯುವಕರಿಗೆ ವಿದ್ಯೆ ಹಾಗೂ ಉದ್ಯೋಗ ನೀಡಲು ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದ್ದು, ಸುಮಾರು 4.50 ಲಕ್ಷ ಮಕ್ಕಳು ರೈತ ವಿದ್ಯಾ ನಿಧಿಯ ಲಾಭವನ್ನು ಪಡೆದಿದ್ದಾರೆ. ಕಾರ್ಮಿಕರ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡಲಾಗಿದ್ದು, 5 ಲಕ್ಷಕ್ಕೂ ಹೆಚ್ಚು ಮಕ್ಕಳು ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ ಎಂದರು.
ಸಮರ್ಥ ಆಡಳಿತ ನೀಡಿದ ಪರಂಪರೆಯನ್ನು ರಾಜ್ಯದಲ್ಲಿದೆ. ಕರ್ನಾಟಕದ ಎಲ್ಲ ಸರ್ಕಾರಗಳು ನಾಡು ಕಟ್ಟುವ ಕೆಲಸದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ನಾಡು ನುಡಿ, ಜಲ ವಿಷಯಗಳು ಬಂದಾಗ ರಾಜಕಾರಣ ಮರೆತು ಎಲ್ಲ ಪಕ್ಷದವರೂ ಒಂದಾಗಿ ಹೋರಾಡುವುದು ನಮಗೆ ಬಳುವಳಿಯಾಗಿ ಬಂದಿದೆ ಎಂದರು.ಭಾರತದಲ್ಲಿ ಅತ್ಯಂತ ಮೂಲಭೂತ ಕೈಗಾರಿಕಾ ಕೇಂದ್ರಗಳು ಕರ್ನಾಟಕದಲ್ಲಿವೆ. 180 ವಿಶ್ವದರ್ಜೆಯ ಸಂಶೋಧನಾ ಕೇಂದ್ರಗಳು ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿದು , ಇದರ ಸದ್ಬಳಕೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿರುವ ನೈಸರ್ಗಿಕವಾದ, ವೈಜ್ಞಾನಿಕ ಸಂಪನ್ಮೂಲ, ಮಾನವ ಸಂಪನ್ಮೂಲಗಳನ್ನು ಕ್ರೂಢೀಕರಿಸಿ ರಾಜ್ಯ ಕಟ್ಟಲು ಬಳಸುವುದರ ಮೇಲೆ ರಾಜ್ಯದ ಭವಿಷ್ಯ ತೀರ್ಮಾನವಾಗುತ್ತದೆ. ಐದು ಮುಖ್ಯಮಂತ್ರಿಗಳ ಜೊತೆಯಲ್ಲಿ ಕೆಲಸ ಮಾಡಿ ಆಡಳಿತ ವ್ಯವಸ್ಥೆಯನ್ನು ಸಮೀಪದಿಂದ ನೋಡಿದ್ದೇನೆ. ಆದರೆ ರಾಜ್ಯದಲ್ಲಿ ಪ್ರವಾಹ , ಆರೋಗ್ಯ ತುರ್ತು ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಜನರ ಜೀವನದ ಜೊತೆಗೆ ಅವರ ಬದುಕನ್ನೂ ಉಳಿಸಬೇಕಿತ್ತು. ಪ್ರಕೃತಿ ವಿಕೋಪದಿಂದ ಜನರನ್ನು ಉಳಿಸಿ ಅವರ ಬದುಕು ಕಟ್ಟಿಕೊಳ್ಳಲು ಬೆನ್ನೆಲುಬಾಗಿ ನಿಲ್ಲುವ ಜವಾಬ್ದಾರಿಯ ಜೊತೆಗೆ ಜನರಿಗೆ,ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಎಸ್ ಸಿ ಎಸ್‍ಟಿ ಜನರ ಅಭ್ಯುದಯಕ್ಕೆ ಕಟಿಬದ್ಧವಾಗಿದೆ ಎಂದರು.
*ರಾಜ್ಯದ ಸಮಗ್ರ ಅಭಿವೃದ್ಧಿ :*
ಜನರನ್ನು ಫಲಾನುಭವಿಗಳನ್ನಾಗಿ ಮಾಡುವುದಲ್ಲ, ಪಾಲುದಾರರನ್ನಾಗಿ ಮಾಡಬೇಕೆನ್ನುವುದು ಸರ್ಕಾರದ ಗುರಿ. ತಲಾವಾರು ಆದಾಯದಲ್ಲಿ ಕರ್ನಾಟಕ 4 ನೇ ಸ್ಥಾನದಲ್ಲಿದ್ದು, ಕೇವಲ ಶೇ.30 ರಷ್ಟು ಜನ ಮಾತ್ರ ಇದಕ್ಕೆ ಕೊಡುಗೆ ನೀಡುತ್ತಿದ್ದಾರೆ. 70% ಜನ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದಾರೆ. ದುಡಿಯುವ ವರ್ಗಕ್ಕೆ ಆರ್ಥಿಕ ಬಲವನ್ನು ತುಂಬುವ ಕಾರ್ಯಕ್ರಮ ರೂಪಿಸಲಾಗಿದೆ.7500 ಸ್ತ್ರೀಶಕ್ತಿ ಸಂಘಗಳಿಗೆ ಧನಸಹಾಯ, ಉದ್ಯೋಗ ನೀತಿಯ ಮೂಲಕ ಯುವಕರಿಗೆ ಉದ್ಯೋಗ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.
*ಕೃಷಿ ಕ್ಷೇತ್ರದ ಅಭಿವೃದ್ಧಿ:*
ರೈತರ ಆದಾಯ ದ್ವಿಗುಣಗೊಳಿಸುವ ಪ್ರಧಾನ ಮಂತ್ರಿಗಳ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸೆಕಂಡರಿ ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಲಾಗುತ್ತಿದೆ. ಹೈನುಗಾರಿಕೆ, ರೇಶ್ಮೆ, ತೋಟಗಾರಿಕೆ ಹಲವಾರು ಆಯಾಮಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
*ದುಡಿಮೆಯೇ ದೊಡ್ಡಪ್ಪ :*
ದುಡಿಯುವ ವರ್ಗದಿಂದಲೇ ಆರ್ಥಿಕತೆಯ ಬೆಳವಣಿಗೆ ಸಾಧ್ಯ. ದುಡಿಮೆಯೇ ದೊಡ್ಡಪ್ಪ ಎಂಬುದು ಸರ್ಕಾರದ ಧ್ಯೇಯ.ಕೈಗಾರಿಕೆಗಳಿಗೆ ಆಧುನಿಕತೆ ಸ್ಪರ್ಶ, ಕೈಗಾರಿಕಾ ಸ್ನೇಹಿ ನೀತಿಗಳು, ಸಂಶೋಧನೆಗಳು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿವೆ. ದೇಶದ ವಿದೇಶಿ ಬಂಡವಾಳದ ಶೇ.45 ಕರ್ನಾಟಕದಲ್ಲಿ ಆಗಲಿರುವುದ ಹೆಮ್ಮೆಯ ಸಂಗತಿ. ಈಸ್ ಆಫ್ ಡೂಯಿಂಗ್ ಬಿಸನೆಸ್, ಸ್ಟಾರ್ಟಪ್‍ಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. ತನ್ಮೂಲಕ ಕರ್ನಾಟಕದ ಜಿಡಿಪಿ ಅಭಿವೃದ್ಧಿಯಾಗುತ್ತದೆ. ದೂರದೃಷ್ಟಿ ಹಾಗೂ ಯೋಜನಾಬದ್ಧವಾದ ಕಾರ್ಯಕ್ರಮಗಳನ್ನು ಎಲ್ಲ ವಲಯಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
*ಗ್ರಾಮೀಣಾಭಿವೃದ್ಧಿ :*
ಅಮೃತ ಯೋಜನೆಗಳ ಮೂಲಕ 750 ಗ್ರಾಮ ಪಂಚಾಯತಿಗಳ ಅಭಿವೃದ್ಧಿ, ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ, ಗ್ರಾಮಸ್ಥರ ಜೀವನ ಗುಣಮಟ್ಟ ಸುಧಾರಣೆ, ಹಿಂದುಳಿದ ವರ್ಗ, ಎಸ್ ಸಿ ಎಸ್ ಟಿ ಗಳ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸ್ವಾಭಿಮಾನದ ಸ್ವಾವಲಂಬನೆಯ ಬದುಕು ನೀಡುವುದು ಸರ್ಕಾರದ ಚಿಂತನೆ ಎಂದು ತಿಳಿಸಿದರು.
Be the first to comment