ರಾಜ್ಯ ಸುದ್ದಿಗಳು
ಬೆಂಗಳೂರು
*ಬೆಂಗಳೂರು, ಜನವರಿ 28*: ಕೋವಿಡ್ ವಿಚಾರದಲ್ಲಿ ತಮಗೆ ಬೇಕಾದಂತೆ ವಾರಾಂತ್ಯ ಕಫ್ರ್ಯೂ, ಲಾಕ್‍ಡೌನ್ ಮಾಡುವ ಮೂಲಕ ರಾಜ್ಯ ಸರಕಾರ ಮತ್ತು ಅಧಿಕಾರಿಗಳು ಜನರ ಜತೆ ದೊಂಬರಾಟ ಆಡುತ್ತಿದ್ದಾರೆ *ಎಂದು ಸಂಸದ ಡಿ.ಕೆ. ಸುರೇಶ್* ಖಂಡಿಸಿದರು. ಕಾಂಗ್ರೆಸ್ ಪ್ರಚಾರ ಸಮಿತಿ ಸಂಚಾಲಕ ತಿಬ್ಬೇಗೌಡ ಅವರ ಜನ್ಮ ದಿನದ ಅಂಗವಾಗಿ ರಾಜರಾಜೇಶ್ವರಿನಗರ ಕಾಂಗ್ರೆಸ್ ಕಾರ್ಯಕರ್ತರು ಬಾಲಕೃಷ್ಣ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕೋವಿಡ್‍ಗಾಗಿ ಉಚಿತ ಬೂಸ್ಟರ್ ಡೋಸ್, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ವಿತರಣೆ, ಆರೋಗ್ಯ ಶಿಬಿರ, ನೇತ್ರದಾನ ಮತ್ತು ರಕ್ತದಾನ ಶಿಬಿರಗಳನ್ನು ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು.
ಮೇಕೆದಾಟು ಹೋರಾಟದ ಸಂದರ್ಭದಲ್ಲಿ ಸರಕಾರ ವೀಕೆಂಡ್ ಕಫ್ರ್ಯೂ ಜಾರಿಗೆ ತಂದಿತು. ಒಂದು ಸಾವಿರ ಕೇಸ್‍ಗಳಿದ್ದ ಸಂದರ್ಭದಲ್ಲಿ ಲಾಕ್‍ಡೌನ್ ಮಾಡುವ ಸರಕಾರ 50 ಸಾವಿರ ಕೇಸುಗಳಿರುವಾಗ ಲಾಕ್‍ಡೌನ್ ತೆರವುಗೊಳಿಸುತ್ತದೆ. ಇದು ಎಂತಹ ವಿಪರ್ಯಾಸ ನೋಡಿ. ನಾವು ಅಂದೇ ಹೇಳಿದ್ದೆವು. ಇದು ಬಿಜೆಪಿ ಕರ್ಫ್ಯೂ, ಬಿಜೆಪಿ ಲಾಕ್‍ಡೌನ್ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ರಾಜ್ಯ ಸರಕಾರ ಜನರ ಜತೆ ದೊಂಬರಾಟ ಆಡುತ್ತಿದೆ. ಅಧಿಕಾರಿಗಳು ದೊಂಬರಾಟ ಆಡಿಸುತ್ತಿದ್ದಾರೆ. ಜನರ ಆರೋಗ್ಯದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಲಾಕ್‍ಡೌನ್ ಮಾಡಿದರೆ ಪರಿಹಾರ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಸಚಿವರು, ಅಧಿಕಾರಿಗಳು, ಸಚಿವ ಸಂಪುಟದ ಸಹೋದ್ಯೋಗಿಗಳ ನಡುವೆ ಯಾರಿಗೂ ಪರಸ್ಪರ ಹೊಂದಾಣಿಕೆ ಇಲ್ಲ. ಒಬ್ಬೊಬ್ಬರೂ ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೆಲ್ಲವನ್ನೂ ಜನ ಗಮನಿಸುತ್ತಿದ್ದಾರೆ. ಬಿಜೆಪಿಗೆ ತಕ್ಕ ಪಾಠ ಕಲಿಸಲು ಸಜ್ಜಾಗುತ್ತಿದ್ದಾರೆ ಎಂದು ಡಿ.ಕೆ. ಸುರೇಶ್ ನುಡಿದರು.
*ಕಾಂಗ್ರೆಸ್ ಪ್ರಚಾರ ಸಮಿತಿ ಸಂಚಾಲಕ ತಿಬ್ಬೇಗೌಡ ಮಾತನಾಡಿ*, ಕೋವಿಡ್ ಮಹಾಮಾರಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಆದರೆ ಸರಕಾರ ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ನಮ್ಮ ಪಕ್ಷ ಮತ್ತು ಅಭಿಮಾನಿಗಳು ಸೇರಿ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಮತ್ತು ಇತರರಿಗೆ ಕೋವಿಶೀಲ್ಡ್, ಕೋವ್ಯಾಕ್ಸಿನ್ ನೀಡಲು ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಸರಕಾರ ಜನರ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸುತ್ತದೆ ಎಂದು ಗೊತ್ತಿಲ್ಲ. ಆದರೆ ನಮ್ಮ ಸೇವೆ ನಿರಂತರವಾಗಿ ಬಡವರ ಪರ ಇರುತ್ತದೆ ಎಂದರು.
*ಬಾಕ್ಸ್*ಬಿಜೆಪಿಗೆ ಬಿಬಿಎಂಪಿ ಚುನಾವಣೆ ಬೇಕಿಲ್ಲ ಬಿಜೆಪಿ ಪಕ್ಷವು ಆರ್‍ಎಸ್‍ಎಸ್ ಕಚೇರಿಯಲ್ಲೇ ಬಿಬಿಎಂಪಿ ಚುನಾವಣೆ ಮಾಡಲು ತಯಾರಾಗಿದೆ. ಆರ್‍ಎಸ್‍ಎಸ್ ಕಚೇರಿಯಲ್ಲಿ ಶಾಸಕರು, ಬಿಜೆಪಿ ಮುಖಂಡರು ಸೇರಿಕೊಂಡು ಬಿಬಿಎಂಪಿ ವಾರ್ಡ್ ವಿಂಗಡಣೆ ಮಾಡುವುದು, ತಮಗೆ ಬೇಕಾದಂತೆ ಮೀಸಲಾತಿ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಖಂಡಿಸಿದರು. ಸಾರ್ವಜನಿಕವಾಗಿ ಚರ್ಚೆಗೆ ತರದೆ ಆ ರೀತಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಇವರಿಗೆ ಬಿಬಿಎಂಪಿ ಚುನಾವಣೆ ಬೇಕಿಲ್ಲ. ಕೆಲ ಸಚಿವರು, ಶಾಸಕರು ಅವರಿಗೆ ಬೇಕಾದ ರೀತಿ ವಾರ್ಡ್‍ಗಳನ್ನು ವಿಂಗಡಣೆ ಮಾಡಿಕೊಳ್ಳುವುದು, ಮೀಸಲಾತಿ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಗಳೂರು 198 ವಾರ್ಡ್‍ಗಳಿದ್ದಾಗಲೇ ಇವರಿಗೆ ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ಈಗ 243 ವಾರ್ಡ್‍ಗಳನ್ನು ಮಾಡಲು ಹೊರಟಿದೆ. ವಾರ್ಡ್‍ಗಳ ವಿಸ್ತರಣೆಗೆ ಮಾನದಂಡ ಏನು ಎಂಬುದರ ಬಗ್ಗೆ ಮೊದಲು ಸುತ್ತೋಲೆ ಹೊರಡಿಸಬೇಕು. ತಮ್ಮದೇ ಸರಕಾರ, ತಮ್ಮದೇ ಅಧಿಕಾರ ಎಂದು ತಮಗೆ ಬೇಕಾದಂತೆ ಹುಚ್ಚು ಹುಚ್ಚಾಗಿ ವಾರ್ಡ್‍ಗಳನ್ನು ಮಾಡಿ, ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಹಾಳು ಮಾಡಲು ನಾವು ಬಿಡುವುದಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದರು.
Be the first to comment