ರಾಜ್ಯ ಸುದ್ದಿಗಳು
ಕುಕ್ಕೆಸುಬ್ರಹ್ಮಣ್ಯ
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಕ್ಷೇತ್ರಕ್ಕೆ ದೇಶದ ವಿವಿಧ ಭಾಗಗಳಿಂದ ವರ್ಷಕ್ಕೆ ಕೋಟ್ಯಾಂತರ ಭಕ್ತರು ಬರುತ್ತಾರೆ. ಬಂದ ಭಕ್ತರಿಗೆ ಸರಿಯಾಗಿ ತಂಗಲು ವ್ಯವಸ್ಥೆಗಳಿಲ್ಲ, ಪಾರ್ಕಿಂಗ್ ಇಲ್ಲ, ಶೌಚಾಲಯದ ವ್ಯವಸ್ಥೆ ಇಲ್ಲ ಎನ್ನುವುದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಪ್ರತಿಯೊಬ್ಬ ಭಕ್ತರ ಅಭಿಪ್ರಾಯವಾಗಿದೆ. ಆದರೆ ಈ ಸಮಸ್ಯೆಯನ್ನು ನಿವಾರಿಸಲು ರಾಜ್ಯ ಸರ್ಕಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ 300 ಕೋಟಿ ರೂಪಾಯಿಯ ಬೃಹತ್ ಯೋಜನೆಯನ್ನು ಜಾರಿಗೆ ತರಲಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಗಡುವನ್ನೂ ಹಾಕಿಕೊಳ್ಳಲಾಗಿದೆ.
ಮುಖ್ಯವಾಗಿ ದೇವಸ್ಥಾನದ ರಥಬೀದಿಯ ಇಕ್ಕೆಲಗಳಲ್ಲೂ ಶಿಲಾಮಯ ಪಾರಂಪರಿಕ ಶೈಲಿಯ ಕಟ್ಟಡಗಳು ತಲೆ ಎತ್ತಲಿದೆ. ಈ ಕಟ್ಟಡಗಳನ್ನು ಮೂರು ಪಾರಂಪರಿಕ ವಿನ್ಯಾಸದಲ್ಲಿ ಕಟ್ಟಲಾಗುತ್ತಿದ್ದು, ಕಟ್ಟಡದ ಮುಂಭಾಗವು ವಿಜಯನಗರ ಶೈಲಿ, ಒಳ ಭಾಗವು ಮೈಸೂರು ಶೈಲಿ ಮತ್ತು ಛಾವಣಿಯು ತುಳುನಾಡು ಶೈಲಿಯಲ್ಲಿ ನಿರ್ಮಾಣವಾಗಲಿದೆ.ಭದ್ರತೆ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಟ್ಟಡಗಳ ರಚನೆಯಾಗಲಿದ್ದು, ಮುಂದಿನ 2000 ವರ್ಷಗಳವರೆಗೂ ಕಟ್ಟಡದ ವಿನ್ಯಾಸವನ್ನು ಬದಲಿಸದಂತಹ ರೀತಿಯಲ್ಲಿ ಈ ಕಟ್ಟಡಗಳ ನಿರ್ಮಾಣವಾಗಲಿದೆ. ರಥಬೀದಿಯ ಎರಡೂ ಬದಿಯಲ್ಲಿ ನಿರ್ಮಾಣಗೊಳ್ಳಲಿರುವ ಇವುಗಳು ಒಂದೇ ಅಂತಸ್ತಿಗೆ ಸೀಮಿತವಾಗಿದ್ದು, ಇದನ್ನು ಸೇವಾ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ.
ಹೂವಿನ ಅಂಗಡಿ, ಹಣ್ಣು-ಕಾಯಿ ಅಂಗಡಿ, ವಿಶ್ರಾಂತಿಗೆ ಬೇಕಾದ ವ್ಯವಸ್ಥೆಗಳು, ಅಡಿಯೋ-ವಿಡಿಯೋ ಥಿಯೇಟರ್, ತುಳುನಾಡಿನ ಧಾರ್ಮಿಕ ಕ್ಷೇತ್ರಗಳ ಕುರಿತ ಮಾಹಿತಿಯೂ ಇದರಲ್ಲಿರಲಿದೆ. ಆಶ್ಲೇಷ ಬಲಿ ಪೂಜೆಗೆ ಹೊಸ ಆಶ್ಲೇಷ ಬಲಿ ಮಂಟಪವೂ ಸಿದ್ಧಗೊಳ್ಳಲಿದ್ದು, ಒಂದೇ ಬಾರಿಗೆ 250 ಪೂಜೆಗಳನ್ನು ಕುಟುಂಬ ಸಮೇತ ನಡೆಸಲು ಅನುವು ಮಾಡಿಕೊಡುವಂತಹ ನಾಲ್ಕು ಮಂಟಪ ನಿರ್ಮಾಣಗೊಳ್ಳಲಿದೆ. ಈ ಮೂಲಕ ದಿನವೊಂದಕ್ಕೆ 1000 ಪೂಜೆಗಳನ್ನು ನಡೆಸುವಂತಹ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಅನ್ನಛತ್ರದ ನಿರ್ಮಾಣವೂ ಈ ಕಾಮಗಾರಿಯಲ್ಲಿ ಒಳಗೊಳ್ಳಲಿದ್ದು, ಒಂದೇ ಬಾರಿಗೆ 3500 ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸುವಂತಹ ಛತ್ರ ನಿರ್ಮಾಣಗೊಳ್ಳಲಿದೆ. ಮಕ್ಕಳು, ವಯೋವೃದ್ಧರು, ವಿಶೇಷ ಸಾಮರ್ಥ್ಯದವರಿಗೂ ಪ್ರತ್ಯೇಕ ಅನ್ನಛತ್ರದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ದೇವಸ್ಥಾನದಿಂದ ಅಂಡರ್ ಪಾಸ್ ಮೂಲಕ ಈ ಅನ್ನಛತ್ರಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನೂ ಯೋಜನೆಯಲ್ಲಿ ಹಾಕಿಕೊಳ್ಳಲಾಗಿದೆ. ಇನ್ನು ಈ ಯೋಜನೆಯಲ್ಲಿ ವಸತಿ ಗೃಹಗಳ ನಿರ್ಮಾಣವೂ ನಡೆಯಲಿದ್ದು, ದೇವಸ್ಥಾನದ ವತಿಯಿಂದ ಪ್ರಕೃತಿ ಮತ್ತು ಯೋಗ ಚಿಕಿತ್ಸಾಲಯವನ್ನು ನಿರ್ಮಾಣಗೊಳ್ಳಲಿದೆ. ಕುಕ್ಕೆ ಸುಬ್ರಹ್ಮಣ್ಯ ನಾಗನಿಗೆ ಸಂಬಂಧಪಟ್ಟ ಕ್ಷೇತ್ರವಾಗಿರುವ ಕಾರಣ ವಿಷ ಜಂತುಗಳ ಕಡಿತಕ್ಕೊಳಗಾದವರ ಚಿಕಿತ್ಸೆಗಾಗಿ ವಿಶೇಷ ಚಿಕಿತ್ಸಾಲಯವನ್ನೂ ಈ ಮಾಸ್ಟರ್ ಪ್ಲಾನ್ ಕಾಮಗಾರಿಯಲ್ಲಿ ಜೋಡಿಸಲಾಗಿದೆ.
Be the first to comment