ಕೇಂದ್ರ ಸರಕಾರದಿಂದ ನಾರಾಯಣ ಗುರುಗಳ ಅಪಮಾನ ಖಂಡನೀಯ: ಕಾಂಗ್ರೆಸ್ ಮುಖಂಡ , ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

 

ಮಂಗಳೂರು

CHETAN KENDULI

ರಾಷ್ಟ್ರಕವಿ ರವೀಂದ್ರನಾಥ ಠ್ಯಾಗೂರ್, ಮಹಾತ್ಮಾಗಾಂಧಿ ಮತ್ತು ಭಾರತಕ್ಕೆ ಸಂವಿಧಾನ ನೀಡಿದ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಅವರಿಂದ ಗೌರವಿಸಲ್ಪಟ್ಟ ಶ್ರೀ ನಾರಾಯಣ ಗುರುಗಳನ್ನು ಇಂದಿನ ಸಂಘ ಪರಿವಾರ ನಿಯಂತ್ರಿತ ಕೇಂದ್ರ ಸರ್ಕಾರ ಅಪಮಾನಿಸಿರುವುದು ಖಂಡನೀಯ ಎಂದು ಕಾಂಗ್ರೆಸ್‌ ಹಿರಿಯ ಮುಖಂಡರು ಹಾಗೂ ವಿಧಾನ ಪರಿಷತ್‌ ಸದಸ್ಯ ಬಿ. ಕೆ. ಹರಿಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ದೇಶದ ಸಾಂಸ್ಕೃತಿಕ, ಧಾರ್ಮಿಕ ಐತಿಹಾಸಿಕ, ಅಭಿವೃದ್ದಿ ಮತ್ತು ಮಿಲಿಟರಿ ಸಾಮರ್ಥ್ಯವನ್ನು ಪ್ರತಿ ಬಿಂಬಿಸುವ ಸ್ತಬ್ದ ಚಿತ್ರಗಳ ಪ್ರದರ್ಶನವನ್ನ ಏರ್ಪಡಿಸಲಾಗುತ್ತದೆ. ಹಾಗೆಯೇ, ರಾಜ್ಯಗಳು ತಮ್ಮ ನೆಲದ ಹೆಮ್ಮೆಯನ್ನು ಪ್ರತಿಬಿಂಬಿಸುವ ಸ್ಥಬ್ದ ಚಿತ್ರಗಳನ್ನು ಕಳುಹಿಸುವ ಪರಿಪಾಠವಿದೆ.  

 

ಅದರಂತೆ, ಕೇರಳ ರಾಜ್ಯ ಕಳುಹಿಸಿದ್ದ ತನ್ನ ನೆಲದ ಹೆಮ್ಮೆಯನ್ನು ಪ್ರತಿಬಿಂಬಿಸುವ ಕ್ರಾಂತಿಕಾರಿ ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಈ ಮೂಲಕ ಭಾರತದ ಚಾರಿತ್ರಿಕ, ಮಹತ್ವದ ಕ್ರಾಂತಿಕಾರಿ ಸಮಾಜ ಸುಧಾರಕನಿಗೆ ಅಪಮಾನಿಸಿದೆ. ಜೊತೆಗೆ ಶೋಷಣೆ, ಮಹಿಳಾ ಅಸಮಾನತೆ, ಜಾತಿ ಪ್ರತಿಪಾದನೆಯನ್ನು ಪರೋಕ್ಷವಾಗಿ ಕೇಂದ್ರ ಸರ್ಕಾರ ಉತ್ತೇಜಿಸಿದಂತಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.ನಾರಾಯಣ ಗುರುಗಳು ಮೂಲತಃ ಕೇರಳ ರಾಜ್ಯದವರು ಎಂಬುದಕ್ಕೆ ಪರಿಪೂರ್ಣವಾದ ದಾಖಲೆ ಲಭ್ಯವಿದೆ. ಅಲ್ಲದೆ, ಶತಮಾನಗಳ ಹಿಂದಿನ ಅವರ ಸಮಾಜ ಸುಧಾರಣೆಯ ಬಗ್ಗೆ ನೂರಾರು ದಾಖಲೆಗಳು ಲಭ್ಯವಿವೆ. ಶೋಷಣೆ, ಜಾತೀಯತೆ, ಅಸಮಾನತೆ ನಿಮ್ನ ವರ್ಗದವರ ಅಪಮಾನಿಸುವುದರ ವಿರುದ್ದ ಸಿಡಿದು ನಿಂತು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಸಾರಿದ್ದಲ್ಲದೆ ಸಮಾಜದಲ್ಲಿ ಸಮಾನತೆಗಾಗಿ ಬದುಕಿನುದ್ದಕ್ಕೂ ಶ್ರೀ ನಾರಾಯಣ ಗುರುಗಳು ಶ್ರಮಿಸಿದ್ದಾರೆ.

ನಾರಾಯಣ ಗುರುಗಳ ಕ್ರಾಂತಿಕಾರಿ ಸುಧಾರಣೆಯ ಮಾಹಿತಿ ತಿಳಿದಂತಹ ಮಹಾತ್ಮಾಗಾಂಧಿ ಅವರು ಕೇರಳದ ಶಿವಗಿರಿ ಮಠಕ್ಕೆ ಭೇಟಿ ನೀಡಿ ನಾರಾಯಣಗುರುಗಳ ವೈಕಂ ಹೋರಾಟವನ್ನು ಬೆಂಬಲಿಸಿ ಗೌರವಿಸಿದ್ದರು. ಭಾರತಕ್ಕೆ ರಾಷ್ಟ್ರಗೀತೆ ಯನ್ನು ನೀಡಿದ ರಾಷ್ಟ್ರಕವಿ ರವೀಂದ್ರನಾಥ ಠ್ಯಾಗೂರ್ ಮತ್ತು ಭಾರತಕ್ಕೆ ಸಂವಿಧಾನ ನೀಡಿದ ಡಾ. ಬಿ. ಆರ್. ಅಂಬೇಡ್ಕರ್ ಅವರಿಂದ ಶ್ರೀ ನಾರಾಯಣ ಗುರುಗಳು ಗೌರವಿಸಲ್ಪಟ್ಟಿದ್ದಾರೆ. ಆದರೆ, ಇಂದಿನ ಸಂಘ ಪರಿವಾರದ ನಿಯಂತ್ರಣದಲ್ಲಿರುವ ಕೇಂದ್ರ ಸರಕಾರ ಅವರ ಸ್ತಬ್ದ ಚಿತ್ರವನ್ನು ತಿರಸ್ಕರಿಸುವ ಮೂಲಕ ಅವರನ್ನು ಅಪಮಾನಿಸಿರುವುದು ತೀವ್ರ ಖಂಡನೀಯ ಎಂದರು. 

ಇಂತಹ ಸಮ ಸಮಾಜದ ಹೋರಾಟಗಾರನಿಗೆ ಕೇಂದ್ರ ಬಿಜೆಪಿ ಸರ್ಕಾರ ರಚಿಸಿರುವ ಆಯ್ಕೆ ಸಮಿತಿ ಅಪಮಾನ ಮಾಡಿದೆ. ಈ ತಿರಸ್ಕಾರ ನಾರಾಯಣ ಗುರುಗಳಿಗೆ ಮಾತ್ರವಲ್ಲ ದೇಶದ ಕೋಟ್ಯಂತರ ಶೋಷಿತ ಸಮಾಜಕ್ಕೆ ಮಾಡಿರುವ ಅವಮಾನ ಆಗಿದೆ ಎಂದು ಹರಿಪ್ರಸಾದ್‌ ಆಕ್ರೋಶವ್ಯಕ್ತಪಡಿಸಿದರು.  ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣ ತನ್ನ ಪ್ರಮಾದ ಮತ್ತು ತಪ್ಪಿಗೆ ದೇಶದ ಜನತೆಯ ಕ್ಷಮೆ ಕೋರುವುದರ ಜೊತೆಗೆ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಈ ಬಾರಿಯ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಸೇರ್ಪಡೆ ಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Be the first to comment

Leave a Reply

Your email address will not be published.


*