ರಾಜ್ಯ ಸುದ್ದಿಗಳು
ಪ್ರತಿ ಮಗುವಿನ ಆರೋಗ್ಯದ ಹಿತದೃಷ್ಠಿಯಿಂದ ಆಯುಷ್ ಇಲಾಖೆಯ ವತಿಯಿಂದ ಎನರ್ಜಿಬೂಸ್ಟರ್ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಹೆಗ್ಗನಹಳ್ಳಿ ಆಯೂರ್ವೆದಿಕ್ ಹಾಗೂ ಆಯುಷ್ ಇಲಾಖೆಯ ವೈದ್ಯೆ ಡಾ.ವಿಜಯಲಕ್ಷ್ಮಿ ತಿಳಿಸಿದರು.ದೇವನಹಳ್ಳಿ ತಾಲೂಕಿನ ಕುಂದಾಣ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಎನರ್ಜಿಬೂಸ್ಟರ್ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿರಬೇಕು. ಮಕ್ಕಳು ರೋಗ ನಿಯಂತ್ರಣಕ್ಕೆ ಅವರ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿ ಮಾಡಲು ಇಲಾಖೆಯಿಂದ ವಿತರಿಸುತ್ತಿರುವ ಕಿಟ್ ಬಹಳಷ್ಟು ಸಹಕಾರಿಯಾಗಿದೆ. ಇಂಗ್ಲೀಷ್ ಮಾತ್ರೆಗಳನ್ನು ಪಡೆಯುವ ಮೊದಲು ಅದರಿಂದಾಗುವ ಸಾಕಷ್ಟು ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬೇಕು. ಆಯೂರ್ವೆದಿಕ್ ಗಿಡಮೂಲಿಕೆಗಳಿಂದ ತಯಾರಾಗಿರುವ ಪರಿಸರ ಸ್ನೇಹಿ ಹಾಗೂ ಆರೋಗ್ಯಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಗುಳಿಗೆಗಳನ್ನು ಪಡೆದುಕೊಳ್ಳುವಂತೆ ಆಗಬೇಕು. ಕೋವಿಡ್ ಇರುವುದರಿಂದ ಪ್ರತಿಯೊಬ್ಬರು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದನ್ನು ಮೆರೆಯಬಾರದು. ಏನಾದರೂ ಆರೋಗ್ಯದಲ್ಲಿ ಸಣ್ಣದಾಗಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ್ಯ ವಹಿಸದೇ ವೈದ್ಯರನ್ನು ಕಾಣಬೇಕು. ಜತೆಗೆ ಆ ಸಮಯದಲ್ಲಿ ಬೇರೆಯವರೊಂದಿಗೆ ಬೆರೆಯಬಾರದು. ತಮ್ಮನ್ನು ತಾವು ಐಸೋಲೆಷನ್ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕುಂದಾಣ ಗ್ರಾಪಂ ಅಧ್ಯಕ್ಷ ವಿ.ನಾರಾಯಣಸ್ವಾಮಿ ಮಾತನಾಡಿ, ಆರೋಗ್ಯ ಚೆನ್ನಾಗಿದ್ದರೆ, ಏನನ್ನಾದರೂ ಸಾಧನೆ ಮಾಡಬಹುದು. ಶೈಕ್ಷಣಿಕ ಹಂತದಲ್ಲಿ ದೇಹದಲ್ಲಿ ಪೌಷ್ಠಿಕಾಂಶದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಪೌಷ್ಠಿಕಾಂಶದಿಂದ ಏಕಾಗ್ರತೆ ಮತ್ತು ಜ್ಞಾಪನ ಶಕ್ತಿ ವೃದ್ಧಿಯಾಗುತ್ತದೆ. ಎಲ್ಲರೂ ಆಯೂಷ್ ಇಲಾಖೆಯಿಂದ ನೀಡಿರುವ ಎನರ್ಜಿ ಬೂಸ್ಟರ್‌ಅನ್ನು ಸರಿಯಾಗಿ ನಿತ್ಯ ತೆಗೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲ ವಿ.ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸುವುದೊಂದೆ ಗುರಿಯಾಗಿರಬಾರದು. ಆರೋಗ್ಯವಂತರಾಗಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಏನೆಲ್ಲಾ ಶಿಕ್ಷಕರು, ಸಮಾಜ ಸುಧಾರಕರು, ಚಿಂತಕರು ಹೇಳಿರುವ ಮಾತುಗಳನ್ನು ಆಲಿಸಿ, ಅವರ ಸಲಹೆ ಮಾರ್ಗದರ್ಶನದಲ್ಲಿ ನಡೆಯುವಂತೆ ಆಗಬೇಕು. ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸುವ ಪ್ರಯತ್ನವನ್ನು ಮಾಡಬೇಕು ಎಂದರು.ಈ ವೇಳೆಯಲ್ಲಿ ಕುಂದಾಣ ಮುಖಂಡ ಚಂದ್ರಪ್ಪ, ಶಾಲಾ ಶಿಕ್ಷಕರಾದ ಶ್ವೇತಾ.ಎಂ.ಎಸ್, ಹಾಜಿರಾಬಾನು, ಅರುಣ, ಮೀನಾಕ್ಷಿ, ಶೈಲಜಾ, ಗಾಯಿತ್ರಿಹೆಗಡೆ, ಸಿ.ಡಿ.ಗಾಯಿತ್ರಿ, ಯಶೋಧಮ್ಮ, ಜ್ಯೋತಿ, ನಾರಾಯಣಸ್ವಾಮಿ, ಶಂಕರ್, ವಿದ್ಯಾರ್ಥಿಗಳು ಇದ್ದರು.
Be the first to comment