ಬೆಂಗಳೂರು: ರೈತರು ಮತ್ತು ನೆರೆ ಸಂತ್ರಸ್ತರಿಗೆ ನೆರವಾಗುವುದಕ್ಕೆ ಉಪ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುತ್ತಿದೆ ಎಂದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹೇಳುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಿ.ಆರ್. ನಾರಾಯಣ ರೆಡ್ಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಗರದ ಅಲುಮಿನಿ ಭವನದಲ್ಲಿರುವ ಪಶುವೈದ್ಯಕೀಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ರೈತರ ಮತ್ತು ನೆರೆ ಸಂತ್ರಸ್ತರಿಗೆ ನೆರವಾಗುವ ಪಕ್ಷಕ್ಕೆ ನಾವು ಉಪ ಚುನಾವಣೆಯಲ್ಲಿ ಆದ್ಯತೆ ನೀಡುತ್ತೇವೆ. ಪ್ರಸ್ತುತ ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ ಇತರ ಜಿಲ್ಲೆಗಳು ನೆರೆ ಹಾವಳಿಗೆ ಸಿಲುಕಿ ಮೂರೂವರೆ ತಿಂಗಳು ಕಳೆದರೂ ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಮತ್ತೊಂದೆಡೆ ದೇಶಕ್ಕೆ ಅನ್ನ ನೀಡುವ ರೈತರನ್ನು ಕಡೆಗಣಿಸುತ್ತಿದೆ. ನೆರೆಯಿಂದ ಆಪಾರ ನಷ್ಟಕ್ಕೆ ಸಿಲುಕಿರುವ ರೈತರನ್ನು ಮೇಲೆತ್ತಬೇಕಿದೆ.
ರೈತರು ಕಳೆದು ಕೊಂಡಿರುವ ಆಸ್ತಿ ಪಾಸ್ತಿ, ಬೆಳೆಗಳಿಗೆ ಸೂಕ್ತಪರಿಹಾರ ನೀಡದೆ, ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡದೆ ನಿನಿರ್ಲಕ್ಷ್ಯ ತೋರಿದ್ದು ರೈತರು ಆತ್ಮಹತ್ಯೆಗೆ ಶರಣಾಗುವಂತೆ ಪ್ರಚೋದಿಸುತ್ತಿದೆ. ಇದರಿಂದ ಬೇಸತ್ತು ಎಲ್ಲ ರೈತಪರ ಸಂಘಟನೆಗಳು ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಹೋರಾಟ ನಡೆಸುತ್ತಿವೆ ಎಂದು ಹೇಳಿದರು.
ಮೈಸೂರು-ಕೊಡಗು ಸಂಸದ ಪ್ರತಾಪ್ಸಿಂಹ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು ನೆರೆ ಸಂತ್ರಸ್ತಿಗೆ ಸೂಕ್ತ ಪರಿಹಾರ ನೀಡಲಾಗುವುದು. ಆದರೆ ಪ್ರಸ್ತುತ ಉಪಚುನಾವಣೆಯ ನೀತಿ ಸಂಹಿತೆ ಪರಿಹಾರ ಘೋಷಣೆಗೆ ಅಡ್ಡಿಯಾಗುತ್ತಿದೆ ಎಂದು ಹೇಳುತ್ತಾರೆ. ಮೂರೂವರೆ ತಿಂಗಳಿನಿಂದ ಇವರು ನೊಂದವರಿಗೆ ಪರಿಹಾರ ಕೊಡಲು ಸಾಧ್ಯವಾಗದೆ ಇಂದು ನೀತಿ ಸಂಹಿತೆ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಮತ್ತು ನೂರಾರು ರೈತರು ಭಾಗವಹಿಸಿದ್ದರು.
Be the first to comment