ಜಿಲ್ಲಾ ಸುದ್ದಿಗಳು
ಹೊನ್ನಾವರ
ತಮ್ಮೂರಿನ ಪ್ರಮುಖ ಬೇಡಿಕೆಯಾದ ರಾಷ್ಟ್ರೀಯ ಹೆದ್ದಾರಿಗೆ ಬೀದಿ ದೀಪದ ಅಳವಡಿಕೆಯ ಬಗ್ಗೆ ತಾಲೂಕಿನ ಹಳದಿಪುರದ ಸಾರ್ವಜನಿಕರು ಹಾಗೂ ಪಂಚಾಯತ್ ಪ್ರತಿಭಟಿಸಿದ ಪರಿಣಾಮ ಸೋಮವಾರದಿಂದ ಕಾಮಗಾರಿಗೆ ಚಾಲನೆ ಸಿಕ್ಕಂತಾಗಿದೆ.ಹಳದಿಪುರ ಭಾಗದಲ್ಲಿ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು ಇದಕ್ಕೆ ಮೂಲ ಕಾರಣ ಅವೈಜ್ಞಾನಿಕ ಕಾಮಗಾರಿ ಹಾಗೂ ಬೀದಿ ದೀಪ ಇಲ್ಲದಿರುವು. ಇದರಿಂದಾಗಿ ರಸ್ತೆ ದಾಟುವ ಜನರು ಹಾಗೂ ರಸ್ತೆ ಮಧ್ಯದಲ್ಲಿ ನಿಂತಿರುವ ಜಾನುವಾರುಗಳು ಗೋಚರಿಸಿದೆ ಅನೇಕ ಅಪಘಾತಗಳಾಗಿ ಸಾವು ನೋವುಗಳು ಸಂಭವಿಸಿದ್ದವು ಈ ಬಗ್ಗೆ ಕೊಂಕಣ ವಾಹಿನಿ ಪತ್ರಿಕೆ ವಿಸ್ತೃತ ವರದಿ ಪ್ರಕಟಿಸಿತ್ತು. ವರದಿಗೆ ಸ್ಥಳೀಯರು ವಾಸ್ತವತೆ ಅರಿತು ಪಂಚಾಯತ್ ಗೆ ಬೀದಿ ದೀಪದ ಬಗ್ಗೆ ಮನವಿ ನೀಡಿದ್ದರು.
ಆದರೆ ಸಾರ್ವಜನಿಕರು ಪಂಚಾಯತ್ ಗೆ, ಪಂಚಾಯತ್ ಮೇಲಾಧಿಕಾರಿಗಳಿಗೆ ಹಾಗೂ ಗುತ್ತಿಗೆ ಪಡೆದ ಕಂಪನಿಗೆ ಮನವಿ ನೀಡಿ ಬೇಸತ್ತು ಪ್ರತಿಭಟನೆ ನಡೆಸಲು ತೀರ್ಮಾನಿಸಿದರು. ಪ್ರತಿಭಟನೆಯ ಎಂಬ ಶಬ್ದ ಐ.ಆರ್. ಬಿ. ಕಿವಿಗೆ ಬಿದ್ದ ಕ್ಷಣದಲ್ಲೇ ಪ್ರತಿಭಟನೆ ಹತ್ತಿಕ್ಕಲು ಕಂಪನಿ ಹಾಗೂ ಕಂಪನಿಯ ಪರವಾಗಿ ನಿಂತ ಕೆಲವು ನಾಯಕರು ಮೂಗಿಗೆ ತುಪ್ಪ ಸುರಿಯುವ ನಾಟಕಕ್ಕೆ ಮುಂದಾದರು. ಇವರ “ಕಾಗಕ್ಕ ಗುಬ್ಬಕ್ಕ” ಕತೆಗೆ ಕಿವಿಗೊಡದೆ ಸಾರ್ವಜನಿಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು (ಕೆಲವು ಪಂಚಾಯತ್ ಸದಸ್ಯರನ್ನು ಹೊರತು ಪಡಿಸಿ) ಒಂದೇ ನಿರ್ಧಾರದಿಂದ ಪ್ರತಿಭಟನೆ ಮಾಡಿಯೇ ಸಿದ್ಧ ಎಂದು ಒಮ್ಮತದ ನಿರ್ಧಾರ ಕೈಗೊಂಡರು.
ಜನವರಿ 5 ರಂದು ಪ್ರತಿಭಟನೆ ನಡೆಸಿ ತಹಶೀಲ್ದಾರರ ಸಮ್ಮುಖದಲ್ಲಿ ಐ.ಆರ್. ಬಿಯ ಅಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡರು. ಪ್ರಾರಂಭದಲ್ಲಿ ಕಾನೂನು, ನಿಯಮ ಎಂದು ಜನರನ್ನು ಮರಳು ಮಾಡಲು ಪ್ರಯತ್ನಿಸಿದ ಕಂಪನಿ ಅಧಿಕಾರಿಗಳ ಮಾತಿಗೆ ಯಾರು ಮಣಿಯದೆ ಐ.ಆರ್.ಬಿಗೆ ಧಿಕ್ಕಾರ ಕೂಗಲಾರಂಬಿಸಿದರು. ಕೊನೆಗೂ ಪ್ರತಿಭಟನೆಗೆ ಮಣಿದ ಐ.ಆರ್.ಬಿ. ಸೋಮವಾರದಿಂದ ಕೆಲಸ ಪ್ರಾರಂಭಿಸುತ್ತವೆ ಎಂದು ಹೇಳಿದ್ದರಿಂದ ಪ್ರತಿಭಟನೆ ಮೊಟಕುಗೊಳಿಸಿದ್ದರು.
ಹೇಳಿದ ಮಾತಿನಂತೆ ಗುತ್ತಿಗೆ ಪಡೆದ ಕಂಪನಿ ಸೋಮವಾರದಿಂದ ಬೀದಿ ದೀಪ ಅಳವಡಿಕೆ ಕಾಮಗಾರಿ ಪ್ರಾರಂಭಿಸಿಕೊಂಡಿದೆ. ಸೋಮವಾರ ಬೆಳಿಗ್ಗೆಯಿಂದಲೇ ರಸ್ತೆಯ ಪಕ್ಕದಲ್ಲಿ ಕಂಬ ನೆಡಲು ಹೊಂಡ ತೆಗೆಯಲು ಶುರು ಮಾಡಿದ್ದಾರೆ.ಮುಂದಿನ 15 ದಿನಗಳ ಒಳಗೆ ಬಡಗಣಿ ಸೇತುವೆಯಿಂದ ಸಾಲಿಕೆರಿಯವರೆಗೆ ಕಂಬ ನಿಲ್ಲಿಸುತ್ತೇವೆ. ನಂತರ ವಿದ್ಯುತ್ ತಂತಿ ಅಳವಡಿಕೆ ಕಾರ್ಯ ಪ್ರಾರಂಭಿಸುತ್ತೇವೆ ಎಂದು ಐ.ಆರ್. ಬಿ. ಅಧಿಕಾರಿಗಳು ತಿಳಿಸಿದ್ದಾರೆ.
Be the first to comment