ಅನಕ್ಷರಸ್ತ ಗ್ರಾ.ಪಂ ಸದಸ್ಯರುಗಳಿಗೆ ಅಕ್ಷರ ಜ್ಯೋತಿ ಕಾರ್ಯಕ್ರಮ:ಕಲಿಕಾ ಬೋಧನೆಗೆ ಶಿವಯೋಗಿ ಕಳಸದ ಚಾಲನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಜಿಲ್ಲೆಯಲ್ಲಿರುವ ಅನಕ್ಷರಸ್ತ ಗ್ರಾ.ಪಂ ಸದಸ್ಯರು, ಎಸ್‍ಡಿಎಂಸಿ ಸದಸ್ಯರು, ಅಂಗನವಾಡಿ ಹಾಗೂ ಅಡುಗೆ ಸಹಾಯಕರನ್ನು ಸಾಕ್ಷರರನ್ನಾಗಿಸಲು ಹಮ್ಮಿಕೊಂಡ ಕಲಿಕಾ ಬೋಧನೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿ.ಪಂ ಆಡಳಿತಾಧಿಕಾರಿ ಆಗಿರುವ ಶಿವಯೋಗಿ ಕಳಸದ ಚಾಲನೆ ನೀಡಿದರು.

ತಾಲೂಕಿನ ತುಳಸಿಗೇರಿ ಗ್ರಾಮದ ಸರಕಾರಿ ಕುವೆಂಪು ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಕಲಿಕಾ ಬೋಧನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಾಳಿಗೆ ಬೆಳಕು ಕಲಿಕಾ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು ಕಲಿಯುವ ವಯಸ್ಸಿನಲ್ಲಿ ಯಾವುದೇ ಕಾರಣಕ್ಕೆ ಕಲಿಕೆಯಿಂದ ವಂಚಿತರಾಗಿ ಅನಕ್ಷರಸ್ಥರಾಗಿದ್ದಿರಿ. ತಾವುಗಳು ಸಹ ಶಿಕ್ಷಣ ಕಲಿತು ಸಾಕ್ಷರರನ್ನಾಗಿ ಮಾಡಲು ಜಿ.ಪಂ ಸಿಇಓ ಅವರು ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕಲಿಕಾ ಕೇಂದ್ರ ಸ್ಥಾಪಿಸಿದ್ದಾರೆ. ಇದರ ಸದುಪಯೋಗವನ್ನು ಅನಕ್ಷರಸ್ತರು ಪಡೆದುಕೊಳ್ಳಲು ತಿಳಿಸಿದರು.

ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಹಾಗೂ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಕಲಿಕೆ ಮುಖ್ಯವಾಗಿದೆ. ಆದ್ದರಿಂದ ಕಲಿಕಾ ತರಬೇತಿಯಲ್ಲಿ ಓದು ಬರಹದ ಜೊತೆಗೆ ಲೆಕ್ಕಾಚಾರ ಮಾಡುವದನ್ನು ಸಹ ಕಲಿಸಿಕೊಡಲಾಗುತ್ತಿದೆ. ಆದ್ದರಿಂದ ಅನಕ್ಷರಸ್ಥರು ಕಲಿಕಾ ತರಬೇತಿಯ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು ಎಂದರು. ತುಳಸಿಗೇರಿ ಗ್ರಾ.ಪಂ ಅಧ್ಯರು ಸಹ ಅನಕ್ಷರಾಗಿದ್ದು, ಅವರಿಗೂ ಕಲಿಕಾ ಬೋದನೆ ಪ್ರಯೋಜನ ಪಡೆಯಲು ತಿಳಿಸಿದರು.
ಜಿಲ್ಲಾ ಪಂಚಾಯತ ಸಿಇಓ ಟಿ.ಭೂಬಾಲನ್ ಮಾತನಾಡಿ ಜಿಲ್ಲೆಯಲ್ಲಿರುವ 195 ಗ್ರಾಮ ಪಂಚಾಯತಿಗಳಲ್ಲಿ 658 ಅನಕ್ಷರಸ್ತ ಗ್ರಾ.ಪಂ ಸದಸ್ಯರು, 491 ಅಂಗನವಾಡಿ ಸಹಾಯಕಿಯರು, 471 ಅಡುಗೆ ಸಹಾಯಕಿಯರು, 1677 ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ಸೇರಿ ಒಟ್ಟು 3567 ಜನ ಅನಕ್ಷರಸ್ಥರಿರುವದನ್ನು ಕಂಡು ಅವರೆಲ್ಲರನ್ನು ಸಾಕ್ಷರರನ್ನಾಗಿಸಲು ಆಯಾ ಗ್ರಾ.ಪಂ ವ್ಯಾಪ್ತಿಯಲ್ಲಿ ಕಲಿಕಾ ಕೇಂದ್ರ ತೆರೆಯುವ ಮೂಲಕ ಸಾಕ್ಷರರನ್ನಾಗಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಕನಿಷ್ಠ 3 ತಿಂಗಳ ಕಲಿಕಾ ಬೋಧನೆ ನೀಡಿ ಸಾಕ್ಷರರನ್ನಾಗಿ ಮಾಡಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಸಹ ಅನಕ್ಷರಸ್ತರಿದ್ದು, ಅವರಿಗೂ ಸಹ ಕಲಿಕಾ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲು ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎನ್.ಬಿ.ಗೊರವರ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಲಿಂಕ್ ಡಾಕ್ಯೂಮೆಂಟ್‍ನಲ್ಲಿ ಪ್ರತಿ ತಾಲೂಕಾ ಪಂಚಾಯತಿ ವ್ಯಾಪ್ತಿಯಲ್ಲಿ ತಲಾ ಒಂದು ಗ್ರಾ.ಪಂ ಆಯ್ಕೆ ಮಾಡಿ ಒಟ್ಟು 2402 ಅನಕ್ಷರಸ್ತರನ್ನು ಗುರುತಿಸಿ ಕಲಿಕಾ ಬೋಧನೆ ಬೋದಕರ ಮೂಲಕ ಪ್ರಾರಂಭಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತುಳಸಿಗೇರಿ ಗ್ರಾಮ ಪಂಚಾಯತ ಅಧ್ಯಕ್ಷೆ ಕಸ್ತೂರವ್ವ ದಾಸನ್ನವರ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರ ದಾಸನ್ನವರ, ಶಾಲಾ ಮುಖ್ಯೋಪಾದ್ಯಾಯ ಸಿ.ಎಸ್.ಸನ್ನಪ್ಪನವರ ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*