ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ವಿಶ್ವನಾಥಪುರ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೨೦೭ರಲ್ಲಿ ಅಂಡರ್‌ಪಾಸ್ ಕಲ್ಪಿಸಿಕೊಡುವಂತೆ ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದರು. ಸ್ಥಳೀಯ ಗ್ರಾಮಸ್ಥ ರಾಮಮೂರ್ತಿ ಮಾತನಾಡಿ, ಶೇ.೪೦ರಷ್ಟು ಜನರು ರೈತರಿದ್ದಾರೆ. ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಇಲ್ಲಿ ಸುಮಾರು ೫೦ ಮನೆಗಳಿಗೂ ಹೆಚ್ಚು ಇವೆ. ದಿನನಿತ್ಯ ನೂರಾರು ಜನರು ಆಸ್ಪತ್ರೆಗೆ ಬರಲು ತಡಕಾಡುವ ಪರಿಸ್ಥಿತಿ ಇದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಆಸ್ಪತ್ರೆ ರಸ್ತೆಯನ್ನು ಬಂದ್ ಮಾಡಿರುತ್ತಾರೆ. ಈ ಭಾಗದಲ್ಲಿನ ಗ್ರಾಮಸ್ಥರು ದೊಡ್ಡಬಳ್ಳಾಪುರ ಕಡೆಗೆ ಹೋಗಬೇಕಾದರೆ ೩ಕಿಮೀ ಹೋಗಬೇಕು. ದೇವನಹಳ್ಳಿ ಕಡೆಗೆ ಹೋಗಬೇಕಾದರೆ ಸೋಲೂರು ಗೇಟ್‌ಗೆ ಹೋಗಬೇಕಾಗುತ್ತದೆ. ಎನ್‌ಎಚ್‌ಅವರು ಕೂಡಲೇ ಇದನ್ನು ಸರಿಪಡಿಸಿ ಯಥಾವತ್ತಾಗಿಸಬೇಕು ಅಥವಾ ಅಂಡರ್‌ಪಾಸ್ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥೆ ವೆಂಕಟಲಕ್ಷ್ಮಮ್ಮ ಮಾತನಾಡಿ, ವಿಶ್ವನಾಥಪುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗರು ಇಲ್ಲಿನ ಸರಕಾರಿ ಆಸ್ಪತ್ರೆಗೆ ಬರುತ್ತಿರುತ್ತಾರೆ. ಅದನ್ನು ಗಮನಿಸಬೇಕು. ಇಲ್ಲಿನ ಶಾಲೆಗಳಿಗೆ ಹೋಗಬೇಕಾದರೂ ಸುತ್ತಿ ಬಳಸಿ ಹೋಗುವ ಪರಿಸ್ಥಿತಿ ಹೆದ್ದಾರಿಯವರು ಮಾಡಿದ್ದಾರೆ. ಸರ್ವೀಸ್ ರಸ್ತೆಯನ್ನು ಕಲ್ಪಿಸಿರುವುದು ಸರಿಯಷ್ಟೇ, ಆದರೆ, ಮುಖ್ಯವಾಗಿ ಆಸ್ಪತ್ರೆಗೆ ಹೋಗುವ ಸಾವಿರಾರು ಮಂದಿಗೆ ಸುತ್ತಿಬಳಸಿ ಹೋಗಬೇಕಾಗುತ್ತದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಬರಬೇಕಾದರೆ ಸರ್ವೀಸ್ ರಸ್ತೆಯನ್ನು ಅವಲಂಬಿಸಬೇಕು. ಕೂಡಲೇ ರಾಹೆಯಲ್ಲಿಯೇ ರಸ್ತೆ ಸಂಪರ್ಕ ಕಲ್ಪಿಸಿ ಇಲ್ಲವಾದರೆ ಅಂಡರ್‌ಪಾಸ್ ಆದರೂ ಮಾಡಿಕೊಡಿ ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಅವರಿಗೆ ರಾಹೆ ೨೦೭ರಲ್ಲಿ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಡೆವೈಡರ್ ಅಥವಾ ಅಂಡರ್‌ಪಾಸ್ ನಿರ್ಮಿಸಿಕೊಡುವಂತೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆಯಲ್ಲಿ ಊರಿನ ಗ್ರಾಮಸ್ಥರು, ಮುಖಂಡರು,ಇದ್ದರು.
Be the first to comment