ರಾಜ್ಯ ಸುದ್ದಿಗಳು
ಮಂಗಳೂರು
ಐಸಿಸ್ ಉಗ್ರರೊಂದಿಗೆ ಸಂಬಂಧದ ಆರೋಪದಡಿ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಮಗನ ಸೊಸೆ ದೀಪ್ತಿ ಮಾರ್ಲ ಅವರನ್ನು ಎನ್‌ಐಎ ಇಂದು ಉಳ್ಳಾಲದ ಮನೆಯಿಂದ ಬಂಧಿಸಿದೆ.ಇಂದು ಬೆಳ್ಳಂಬೆಳಗ್ಗೆ ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಪುತ್ರ, ಬಿ.ಎಂ. ಬಾಷಾ ಮನೆಗೆ ಎನ್‌ಐಎನ ಉಪತನಿಖಾಧಿಕಾರಿ ಕೃಷ್ಣ ಕುಮಾರ್ ಹಾಗೂ ಅಜಯ್ ಸಿಂಗ್ ಮತ್ತು ಧಿಕ್‌ವಾಲ್ ಅವರ ತಂಡ ತೀವ್ರ ವಿಚಾರಣೆ ನಡೆಸಿ ದೀಪ್ತಿ ಅಲಿಯಾಸ್ ಮರಿಯಂಳನ್ನು ವಶಕ್ಕೆ ಪಡೆದಿದ್ದಾರೆ.
ಇದೀಗ ಮಂಗಳೂರು ನಗರದ ಜಿಲ್ಲಾಸ್ಪತ್ರೆ ವೆನ್ಲಾಕ್‌ಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದು, ನಂತರ ಮಂಗಳೂರಿನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದುಕೊಂಡು ಹೋಗಲಿದ್ದಾರೆಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.ಇದೇ ಮನೆಗೆ ಕಳೆದ ಅಗಸ್ಟ್ 4ರಂದು ದಾಳಿ ನಡೆಸಿದ್ದ ಎನ್ ಐಎ ಅಧಿಕಾರಿಗಳು, ಅಂದು ಎರಡು ದಿನಗಳ ದಾಳಿಯ ಬಳಿಕ ಬಾಷಾ ಕಿರಿಯ ಪುತ್ರ ಅಬ್ದುಲ್ ರೆಹಮಾನ್‌ನನ್ನು ಬಂಧಿಸಿದ್ದರು. ಈ ವೇಳೆ ಬಾಷಾರ ಮತ್ತೊಬ್ಬ ಪುತ್ರ ಅನಾಸ್ ಪತ್ನಿ ದೀಪ್ತಿ ಆಲಿಯಾಸ್ ಮರಿಯಂ ಮೇಲೆ ಅನುಮಾನ ಬಂದಿತ್ತು.
ಆದರೆ ಸಣ್ಣ ಮಗುವಿದ್ದ ಕಾರಣ ಎನ್ಐಎ ಕೇವಲ ವಿಚಾರಣೆ ನಡೆಸಿ ಬಿಟ್ಟಿತ್ತು. ಇದೀಗ ಮತ್ತೆ ಮನೆಗೆ ಎನ್ ಐಎ ದಾಳಿ ನಡೆಸಿ ದೀಪ್ತಿ ಆಲಿಯಾಸ್ ಮರಿಯಂಳನ್ನು ಬಂಧನಗೊಳಿಸಿದೆ.ಮೂಲತಃ ಕೊಡಗು ಮೂಲದ ದೀಪ್ತಿ ಹತ್ತು ವರ್ಷಗಳ ಹಿಂದೆ ದೇರಳಕಟ್ಟೆಯಲ್ಲಿ ಬಿಡಿಎಸ್ ಕಲಿಯುತ್ತಿದ್ದಾಗ ಬಿಎಂ ಬಾಷಾ ಪುತ್ರ ಅನಾಸ್ ಪರಿಚಯವಾಗಿ ಮದುವೆಯಾಗಿದ್ದಳು. ಆನಂತರ ಮುಸ್ಲಿಂ ಆಗಿ ಪರಿವರ್ತನೆಯಾಗಿದ್ದ ದೀಪ್ತಿ ತನ್ನ ಹೆಸರನ್ನು ಮರಿಯಂ ಎಂದು ಬದಲಿಸಿಕೊಂಡಿದ್ದಳು.ಇದೀಗ ಉಗ್ರವಾದಿ ಗುಂಪು ಐಸಿಸ್ ಸಂಪರ್ಕ ಪಡೆದಿದ್ದು ಯುವಕರನ್ನು ಸೇರಿಸುವ ಜಾಲದಲ್ಲಿ ಇದ್ದಾಳೆ ಎನ್ನುವ ಶಂಕೆಯಲ್ಲಿ ಎನ್ಐಎ ಅಧಿಕಾರಿಗಳು ತನಿಖೆ ನಡೆಸಿ ಬಂಧಿಸಿದ್ದಾರೆ.
Be the first to comment