ರಾಜ್ಯ ಸುದ್ದಿಗಳು
ಕುಂದಾಪುರ
ಪ್ರತಿಯೊಂದು ಧರ್ಮದ ಹಬ್ಬ ಆಚರಣೆಯ ಹಿಂದೆಯೂ ಒಂದು ಉತ್ತಮವಾದ ಸಂದೇಶ ಇರುತ್ತದೆ. ಜೀವನದ ಬದುಕಲ್ಲಿ ಕತ್ತಲಾವರಿಸಿದವರಿಗೆಬೆಳಕು ನೀಡುವ ಕೆಲಸ ಧರ್ಮಗಳಿಂದಾಗಬೇಕು. ಹಬ್ಬ, ಉತ್ಸವಗಳ ಆಚರಣೆಯ ಸಂದರ್ಭಗಳಲ್ಲಿ ಕಷ್ಟದಲ್ಲಿರುವವರಿಗೆ ಆದಷ್ಟು ಸಹಾಯ ಮಾಡುವಂತಹ ಕೆಲಸ ಮಾಡಬೇಕು ಎಂದು ಕುಂದಾಪುರ ಹೋಲಿ ರೋಸರಿ ಚರ್ಚ್ ನ ಫಾದರ್ ವಿಜಯ್ ಡಿ’ ಸೋಜಾ ಹೇಳಿದರು. ಅವರು ಡಿ. 24 ರಂದು ಶುಕ್ರವಾರ ಕೋಟೇಶ್ವರ ಸಮೀಪದ ಸುಣ್ಣಾರಿಯ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ 2021 ರ ಕ್ರಿಸ್ಮಸ್ ಆಚರಣೆ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದರು.
ಯಾವ ಉದ್ದೇಶದಿಂದ ಕ್ರಿಸ್ಮಸ್ ಅನ್ನು ಆಚರಿಸುತ್ತಿದ್ದೇವೆ ಎಂದು ಮೊದಲು ವಿದ್ಯಾರ್ಥಿಗಳು ಅರಿಯಬೇಕು. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವ ಗುಣ, ಎಲ್ಲಾ ಧರ್ಮವನ್ನು ಪ್ರೀತಿಸುವ ವಿಶಾಲ ಮನಸ್ಸು ಈ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.ಸುಜ್ಞಾನ್ ಎಜುಕೇಶನ್ ಟ್ರಸ್ಟ್ ನ ಕೋಶಾಧಿಕಾರಿ ಭರತ್ ಶೆಟ್ಟಿ ಮಾತನಾಡಿ, ಎಕ್ಸಲೆಂಟ್ ಕಾಲೇಜಿನಲ್ಲಿ ಎಲ್ಲಾ ಧರ್ಮದ ಹಬ್ಬವನ್ನೂ ಆಚರಿಸುವ ಉದ್ದೇಶ ನಮಗೆ ಇದೆ. ಏಕತೆಯಲ್ಲಿ ವಿವಿಧತೆಗಳನ್ನು ಹೊಂದಿರುವ ದೇಶ ಭಾರತ.ನಮ್ಮ ದೇಶದಲ್ಲಿ ಅನೇಕ ಜಾತಿ, ಧರ್ಮಗಳು ಇವೆ. ಎಲ್ಲರೂ ಒಟ್ಟಾಗಿ ಭಾವೈಕ್ಯತೆಯಿಂದ ಬಾಳುತ್ತೇವೆ. ಅದು ನಮ್ಮ ದೇಶದ ಶಕ್ತಿ.
ಕವಿ ಕುವೆಂಪು ಹೇಳಿದಂತೆ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ. ಎಲ್ಲಾ ಜನಾಂಗಗಳು ಒಂದು ಸುಂದರವಾದ ಉದ್ಯಾನವನದಲ್ಲಿರುವ ವಿವಿಧ ಹೂವುಗಳಿದ್ದಂತೆ. ದೇಶದ ಸ್ವಾತಂತ್ರ್ಯಕ್ಕೋಸ್ಕರ ಎಲ್ಲಾ ಧರ್ಮದವರೂ ಕೂಡಾ ಹೋರಾಟ ಮಾಡಿ ಬಲುದಾನಗೈದಿದ್ದಾರೆ. ಎಲ್ಲಾ ಧರ್ಮದ, ಎಲ್ಲಾ ಜನಾಂಗದ ನಾಯಕರು ಒಟ್ಟು ಸೇರಿ ಸವಾಲುಗಳು ಎದುರಿಸಿದ್ದಾರೆ. ಇವತ್ತಿನ ಕಾಲಘಟ್ಟದಲ್ಲಿ ನಾವೆಲ್ಲರೂ ಒಂದುಗೂಡಿ ಇನ್ನೊಮ್ಮೆ ವಿಶ್ವದ ಮುಂದೆ ನಮ್ಮ ಭಾರತದೇಶ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಸಂದೇಶವನ್ನು ಎತ್ತಿ ಸಾರುವ ಉದ್ದೇಶದಿಂದ ನಮ್ಮ ಎಕ್ಸಲೆಂಟ್ ಕಾಲೇಜ್ ನಲ್ಲಿ ಎಲ್ಲಾ ಧರ್ಮದ ಹಬ್ಬವನ್ನು ಆಚರಿಸುತ್ತೇದ್ದೇವೆ. ಅದನ್ನು ನಮ್ಮ ವಿದ್ಯಾರ್ಥಿಗಳು ಅರಿತುಕೊಂಡು ಭವ್ಯ ಭಾರತದ ಉಜ್ವಲ ಭವಿಷ್ಯಕ್ಕಾಗಿ ನಾಂದಿ ಹಾಡಬೇಕು ಎಂದು ಕರೆ ನೀಡಿದರು.
ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಮಾತನಾಡಿ ನಮ್ಮ ಈ ಸಮಾಜಕ್ಕೆ ಒಳ್ಳೆ ಒಂದು ಸಂದೇಶ ನೀಡುವ ಸಲುವಾಗಿ ಎಲ್ಲಾ ಧರ್ಮದ ಆಚರಣೆಯನ್ನು ವಿದ್ಯಾರ್ಥಿಗಳ ಮುಖಾಂತರ ಮಾಡುತ್ತಿದ್ದೇವೆ. ನಮ್ಮ ಕಾಲೇಜ್ ನಲ್ಲಿ ದೀಪಾವಳಿ, ಕ್ರಿಸ್ಮಸ್, ಹಾಗೂ ಮುಸ್ಲಿಂ ರ ಹಬ್ಬವನ್ನು ಆಚರಿಸುವುದರಿಂದ ಸಮಾಜಕ್ಕೆ ಒಂದು ಉತ್ತಮ ಸಂದೇಶ ಸಿಗುತ್ತದೆ.ಮನುಷ್ಯರಾಗಿ ಬದುಕ ಬೇಕು ಹೊರತು ಪ್ರಾಣಿಗಳಾಗಿ ಬದುಕಬಾರದು. ನಮ್ಮ ದೇಶದಲ್ಲಿ ಜಾತಿ, ಧರ್ಮಗಳ ಹೊಡೆದಾಟ, ನಮ್ಮನ್ನಮ್ಮಲ್ಲಿ ಹೊಡೆದಾಟ ನಡೆಯುತ್ತಿದೆ. ಯಾವ ಧರ್ಮದಲ್ಲಿಯೂ ಇನ್ನೊಂದು ಧರ್ಮವನ್ನು ಅನ್ಯಾಯ ಮಾಡಲು ಹೇಳುದಿಲ್ಲ. ಎಲ್ಲಾ ಧರ್ಮದಲ್ಲಿಯೂ ಒಂದೇ ಸಂದೇಶ ಎಲ್ಲರಿಗೂ ಒಳ್ಳೇದನ್ನು ಮಾಡು, ಒಳ್ಳೇದನ್ನು ಬಯಸು ಎಂದು.
ಆದ್ದರಿಂದ ನಮ್ಮ ವಿದ್ಯಾರ್ಥಿಗಳು ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು ಸಮಾಜವನ್ನುಕಟ್ಟುವ ಸಂಕಲ್ಪ ಮಾಡಬೇಕು. ಇದರಿಂದ ದೇಶ ಮಾತ್ರವಲ್ಲ ಇಡೀ ಪ್ರಪಂಚದಲ್ಲಿ ಶಾಂತಿಯುತವಾಗಿ ಬಾಳಬಹುದು ಎಂದು ಹೇಳಿದರು. ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಎಲ್ಲರಿಗೂ ಕ್ರಿಸ್ಮಸ್ ಹಾಗೂ ಹೊಸ ವರುಷದ ಶುಭಾಶಯ ಕೋರಿದರು.ಅಧ್ಯಾಪಕ ರೋಹನ್ ಕಾರ್ಯಕ್ರಮ ವನ್ನು ನಿರೂಪಿಸಿದರು ವಿದ್ಯಾರ್ಥಿ ಸೀತಾಲ್ ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.ಈ ಸಂದರ್ಭದಲ್ಲಿ ಕಾಲೇಜ್ ವಿದ್ಯಾರ್ಥಿಗಳಿಂದ ಕ್ರಿಸ್ಮಸ್ ಪ್ರಯುಕ್ತ ಮನೋರಂಜನೆ ಕಾರ್ಯಕ್ರಮ ನಡೆಯಿತು.
Be the first to comment